“04 ಏಪ್ರಿಲ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
‘ಶ್ರೇಯಸ್’ ಯೋಜನೆ
ಸುದ್ಧಿಯಲ್ಲಿ ಏಕಿದೆ ? ಬಹು ನಿರೀಕ್ಷಿತ ‘ಶ್ರೇಯಸ್’ ಯೋಜನೆ ಜುಲೈನಿಂದ ಜಾರಿಗೆ ಬರಲಿದೆ.ಇದೇ ಮೊದಲ ಬಾರಿಗೆ ತಾಂತ್ರಿಕೇತರ ಪದವೀಧರರಿಗೆ ಜಾರಿಗೊಳಿಸಿರುವ ಅಪ್ರೆಂಟಿಸ್ಷಿಪ್ ಯೋಜನೆ ಇದಾಗಿದ್ದು, 5 ಲಕ್ಷ ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ 6,000 ರೂ. ಸ್ಟೈಪೆಂಡ್ ಮತ್ತು ಕೇಂದ್ರದ ವತಿಯಿಂದ ಹೆಚ್ಚುವರಿ 1,500 ರೂ. ದೊರೆಯಲಿದೆ.
- ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ, ಕೌಶಲಾಭಿವೃದ್ಧಿ ಮಂತ್ರಾಲಯ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಗಳು ಸೇರಿ ಈ ಯೋಜನೆಯನ್ನು ರೂಪಿಸಿದ್ದು, ಬಂದಿರುವ ಅರ್ಜಿಗಳಲ್ಲಿ ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ರಾಜ್ಯಗಳದ್ದೇ ಹೆಚ್ಚು
ಸೇತುವೆಯಾಗುವ ತರಬೇತಿ
- ಕಾಲೇಜಿನ ಕಲಿಕೆ ಮತ್ತು ಉದ್ಯಮ ರಂಗದ ಬೇಡಿಕೆಗಳ ನಡುವೆ ಇರುವ ಅಂತರವನ್ನು ತಗ್ಗಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಅಪ್ರೆಂಟಿಸ್ಷಿಪ್ ಮೂಲಕ ಉದ್ಯೋಗ ರಂಗ ಬಯಸುವ ಕೌಶಲದ ತರಬೇತಿಯೊಂದಿಗೆ ಅವರನ್ನು ಸಜ್ಜುಗೊಳಿಸಲಾಗುತ್ತದೆ.
- ಇದರಿಂದ ಉದ್ಯೋಗ ಕ್ಷೇತ್ರಕ್ಕೂ ಮೌಲ್ಯಯುತ ಉದ್ಯೋಗಿಗಳು ಸಿಕ್ಕಿದಂತಾಗುತ್ತದೆ. ಅಪ್ರೆಂಟಿಸ್ಷಿಪ್ ಸಮಯದಲ್ಲಿ ವಿದ್ಯಾರ್ಥಿಗಳ ನಿರ್ವಹಣೆ ಆಧರಿಸಿ ಅವರಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಯೂ ಇರುತ್ತದೆ.
ಏನಿದು ಶ್ರೇಯಸ್?
- ಉನ್ನತ ಶಿಕ್ಷಣ ಪಡೆಯುವ ಯುವಜನರಿಗೆ ಅಪ್ರೆಂಟಿಸ್ಷಿಪ್ ಮತ್ತು ಕೌಶಲ ಒದಗಿಸುವ ಯೋಜನೆ.
- ಇದುವರೆಗೆ ತಾಂತ್ರಿಕ ಪದವೀಧರರಿಗೆ ಸೀಮಿತವಾಗಿದ್ದ ಅಪ್ರೆಂಟಿಸ್ಷಿಪ್ ಕಲೆ/ವಾಣಿಜ್ಯದಂಥ ಮಾನವೀಯ ಕೋರ್ಸ್ಗಳಿಗೂ ವಿಸ್ತರಣೆ
- ವಿದ್ಯಾರ್ಥಿಗಳ ಉದ್ಯೋಗ ನೇಮಕಾತಿ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನ
- ಕಲಿಕೆ ಹಂತದಲ್ಲೇ ಉದ್ಯೋಗಕ್ಕೆ ಹೊಂದಿಕೊಳ್ಳುವ ಕೌಶಲ ಒದಗಿಸುವುದು.
9.25 ಲಕ್ಷ ಅರ್ಜಿ
- ಶ್ರೇಯಸ್ ಯೋಜನೆಯನ್ನು 2019ರ ಮಾರ್ಚ್ನಲ್ಲಿ ಘೋಷಿಸಿದ್ದು, ನೋಂದಣಿಗೆ ಮಾ.25ರ ಅಂತಿಮ ಗಡು ವಿಧಿಸಲಾಗಿತ್ತು. ಈ ಅವಧಿಯಲ್ಲಿ 1,533 ತಾಂತ್ರಿಕೇತರ ವಿವಿ/ಕಾಲೇಜುಗಳಿಂದ 25 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರ ಪೈಕಿ 3 ಲಕ್ಷ ಮಂದಿಗೆ ಜುಲೈನಿಂದ ತರಬೇತಿ ಆರಂಭವಾಗಲಿದೆ, ವರ್ಷದಲ್ಲಿ 5 ಲಕ್ಷ ಮಂದಿಗೆ ತರಬೇತಿ ನೀಡುವ ಪ್ಲ್ಯಾನ್ ಇದೆ.
ಸಿಗುವ ಮೊತ್ತ ಎಷ್ಟು?
- ಸ್ಟೈಪೆಂಡ್ 6,000 ರೂ.
- ಕೇಂದ್ರದಿಂದ 1,500 ರೂ.
- ಒಟ್ಟು 7,500 ರೂ.
ವಾಯು ಮಾಲಿನ್ಯ
ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲಿ ವಾಯು ಮಾಲಿನ್ಯದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, 2017ನೇ ಸಾಲನಲ್ಲಿ 12 ಲಕ್ಷ ಮಂದಿ ಅವಧಿಗೆ ಮುನ್ನವೇ ಮೃತಪಟ್ಟಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
- ಅಮೆರಿಕ ಮೂಲದ ಹೆಲ್ತ ಎಫೆಕ್ಟ್ ಸಂಸ್ಥೆಯ ಬಿಡುಗಡೆ ಮಾಡಿರುವ ‘ದಿ ಸ್ಟೇಟ್ ಆಫ್ ಗ್ಲೋಬಲ್ ಏರ್ –2019′ ಪ್ರಕಾರ ಭಾರತದಲ್ಲಿ ಅಪೌಷ್ಠಿಕತೆ, ಕುಡಿತ, ದೈಹಿಕ ನಿಷ್ಕ್ರಿಯತೆ ಇತ್ಯಾದಿ ಹತ್ತು ಹಲವು ಸಮಸ್ಯೆಗಳಿಂದ ಸಾಯುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಯುಮಾಲೀನ್ಯಕ್ಕೆ ಬಲಿಯಾಗುತ್ತಿದ್ದಾರೆ.
ವಾಯು ಮಾಲಿನ್ಯದ ಪರಿಣಾಮ
- ಹೊರಾಂಗಣದಲ್ಲಿ ಅಥವಾ ಒಳಾಂಗಣದಲ್ಲಿ ಸತತ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಮಧುಮೇಹ, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್ ಮತ್ತು ಇತರೆ ಶ್ವಾಸ ಸಂಬಂಧಿ ದೀರ್ಘಕಾಲೀನ ಸಮಸ್ಯೆಗಳಿಂದ 5 ಲಕ್ಷ ಜನರು ಮೃತಪಟ್ಟಿದ್ದಾರೆ.
- ಇದೇ ಪ್ರಮಾಣದಲ್ಲಿ ವಾಯು ಮಾಲಿನ್ಯ ಮುಂದುವರಿದರೆ, ದಕ್ಷಿಣ ಏಷ್ಯಾದಲ್ಲಿ ಹುಟ್ಟುವ ಮಗುವಿನ ಆಯಸ್ಸು 2 ವರ್ಷ 6 ತಿಂಗಳು ಕಡಿಮೆಯಾಗುತ್ತದೆ
ಸರಕಾರದ ಯೋಜನೆಗಳಿಂದ ಪ್ರಯೋಜನ?
- ಮಾಲಿನ್ಯ ನಿಯಂತ್ರಣಕ್ಕಾಗಿ ಸರಕಾರ ಕೈಗೊಂಡಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನಾ (ಉಚಿತ ಎಲ್ಪಿಜಿ ವಿತರಣೆ), ಭಾರತ್ 6 ವಾಹನ ಮಾನದಂಡ ಮತ್ತು ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದಂತಹ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿದರೆ ಭವಿಷ್ಯದಲ್ಲಿ ಫಲಿತಾಂಶವು ಪರಿಣಾಮಕಾರಿಯಾಗಲಿದೆ. ಮಾಲಿನ್ಯ ಮತ್ತು ಜನರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಗೋರ್ಖಾಲ್ಯಾಂಡ್ ವಿವಾದ
ಸುದ್ಧಿಯಲ್ಲಿ ಏಕಿದೆ ? ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಭುಗಿಲೆದ್ದಿರುವ ಗೋರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯದ ಸ್ಥಾನಮಾನ ಬೇಡಿಕೆಯ ಹೋರಾಟದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ರಾಜಕೀಯ ಪಕ್ಷ ಗಳು ಇದನ್ನು ಚುನಾವಣಾ ಅಸ್ತ್ರ ಮಾಡಿ ಕಾದಾಡುತ್ತಿವೆ.
- ಇದೇ ಮೊದಲ ಬಾರಿಗೆ ಪ್ರತ್ಯೇಕ ಗೋರ್ಖಾ ರಾಜ್ಯದ ಸ್ಥಾನಮಾನ ಬೇಡಿಕೆಯನ್ನು ಬದಿಗಿಟ್ಟ ಗೋರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ), ಗೋರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್(ಜಿಎನ್ಎಲ್ಎಫ್) ಸೇರಿದಂತೆ ಇತರೆ ಪಕ್ಷ ಗಳು ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಅಭಿವೃದ್ಧಿ ಮತ್ತು ಪುನಶ್ಚೇತನಕ್ಕೆ ಒತ್ತು ನೀಡುತ್ತೀವೆ.
ಗೂರ್ಖಾಲ್ಯಾಂಡ್ ಗಾಗಿ ಪ್ರತ್ಯೇಕ ರಾಜ್ಯತ್ವಕ್ಕೆ ಬೇಡಿಕೆಯಿದೆ ಏಕೆ?
- 1986ರಿಂದಲೂ ಈ ಭಾಗದಲ್ಲಿ ಗೋರ್ಖಾ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟು ದೀರ್ಘ ಕಾಲದ ಚಳವಳಿ ನಡೆಯುತ್ತಿವೆ.
- ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಲಿಂಗ್, ಕಾಲಿಂಪಾಂಗ್, ಭಕ್ತಿನಗರ, ಚಾಲ್ಸಾ, ಸಿಲ್ಗುರಿ, ಕುರ್ಸೆಆಂಗ್, ಮಲ್ಬಾಜಾರ್, ನಾಗರಕಟ್ಟಾ, ಬನಾರಹಟ್, ಬೀರ್ಪರಾ, ಕಾಲಾಚಿನಿ ಪ್ರದೇಶದಲ್ಲಿ ನೇಪಾಳಿ ಭಾಷೆ ಮಾತನಾಡುವ ಜನರಿದ್ದಾರೆ.
- ಭಾಷೆ, ಸಂಸ್ಕೃತಿ, ಉಡುಪು, ಆಚಾರ-ವಿಚಾರ ಹಾಗೂ ಭೌಗೋಳಿಕವಾಗಿ ನೇಪಾಳಿ ಮೂಲವನ್ನು ಹೊಂದಿರುವ ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮರಿಚಿಕೆ.
- ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಇಲ್ಲಿನ ಮೂಲ ಕಸಬು. ರಸ್ತೆಗಳ ಸಂಪರ್ಕ ಹಾಗೂ ಚಹ ತೋಟದಲ್ಲಿನ ಕೆಲಸಗಾರರಿಗೆ ಕನಿಷ್ಟ ಕೂಲಿ ಇಲ್ಲಿನ ಹಲವು ಮೂಲ ಸಮಸ್ಯೆಗಳಲ್ಲಿ ಒಂದು
ಹೋರಾಟದ ಹಿನ್ನೆಲೆ:
- ಪ್ರತ್ಯೇಕ ರಾಜ್ಯದ ಸ್ಥಾನಮಾನ ಬೇಡಿಕೆ ಇಟ್ಟು 1986ರಲ್ಲಿ ಜಿಎನ್ಎಲ್ಎಫ್ ಮುಖಂಡ ಸುಭಾಷ್ ಘಿಸಿಂಗ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 1200ಕ್ಕೂ ಹೆಚ್ಚು ಜನರು ಪ್ರಾಣ ತೆತ್ತಿದ್ದರು. 1988ರಲ್ಲಿ ಡಾರ್ಜಲಿಂಗ್ ಗೋರ್ಖಾ ಹಿಲ್ಸ್ ಕೌನ್ಸಿಲ್ ಸ್ಥಾಪನೆ ನಂತರ ಈ ಪ್ರತಿಭಟನೆ ತಣ್ಣಗಾಗಿತ್ತು.
- 2007ರಲ್ಲಿ ಜಿಜೆಎಂ ಪಕ್ಷ ದ ಮುಖಂಡ ಬೀಮಲ್ ಗುರುಂಗ್ ನೇತೃತ್ವದಲ್ಲಿ ಮತ್ತೆ ಪ್ರಾರಂಭವಾದ ಗೋರ್ಖಾಲ್ಯಾಂಡ್ ಹೋರಾಟವನ್ನು ಮಮತಾ ಬ್ಯಾನರ್ಜಿ ಜಾಣತನದಿಂದ ಹತ್ತಿಕ್ಕಿದ್ದರು. ಆದರೆ ಈ ಭಾಗದ ಮೂಲ ಸಂಸ್ಕೃತಿಯನ್ನು ಮಮತಾ ಕಡೆಗಣಿಸುತ್ತಿದ್ದಾರೆಂದು ಆರೋಪಿಸಿ ಬೀಮಲ್ ಗುರುಂಗ್ 2017ರಲ್ಲಿ ಮತ್ತೆ ಹೋರಾಟ ಪ್ರಾರಂಭಿಸಿದರು. ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ.
ಕಡಿಮೆ ಮಳೆ
ಸುದ್ಧಿಯಲ್ಲಿ ಏಕಿದೆ ? ದೇಶದಲ್ಲಿ ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತಲೂ ಕಡಿಮೆ ಇರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೆ ೖಮೇಟ್ ಅಂದಾಜಿಸಿದೆ.
- ಈ ವರ್ಷ ಮುಂಗಾರು ಮಳೆಯ ದೀರ್ಘಾವಧಿ ಸರಾಸರಿ (ಎಲ್ಪಿಎ) 93% ರಷ್ಟು ಇರಲಿದೆ. ಈಶಾನ್ಯ ಭಾರತದ ಜತೆಗೆ ಮಧ್ಯ ಭಾರತದಲ್ಲಿ ಮಳೆ ಕೊರತೆ ಎದುರಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಜೂನ್-ಆಗಸ್ಟ್ವರೆಗೆ ಒಳ್ಳೆಯ ಮಳೆ ಬೀಳುವ ನಿರೀಕ್ಷೆಗಳಿಲ್ಲ. ಸೆಪ್ಟೆಂಬರ್ ನಂತರ ಪರಿಸ್ಥಿತಿ ಸುಧಾರಿಸಲಿದೆ ಎಂದು ಭವಿಷ್ಯ ನುಡಿದಿದೆ.
- ಶೇಕಡ 90ರಿಂದ 95ರ ನಡುವಿನ ಎಲ್ಪಿಎ (ದೀರ್ಘಾವಧಿ ಸರಾಸರಿ) ಮಳೆ ಪ್ರಮಾಣವನ್ನು ವಾಡಿಕೆಗಿಂತಲೂ ಕಡಿಮೆ ಎಂದು ಪರಿಗಣಿಸಲಾಗುತ್ತದೆ.
- ಜಾಗತಿಕ ತಾಪಮಾನದ ಏರುಪೇರಿನಿಂದ ಉಂಟಾಗುವ ಎಲ್ ನಿನೋ ವಿದ್ಯಮಾನದಿಂದ ವಾಡಿಕೆಗಿಂತಲೂ ಕಡಿಮೆ ಮಳೆಯಾಗುವ ಪ್ರಮಾಣ ಶೇಕಡ 55ರಷ್ಟು ಸಾಧ್ಯತೆ ಇದೆ. ಜೂನ್- ಸೆಪ್ಟೆಂಬರ್ ಅವಧಿಯಲ್ಲಿ ವಾಡಿಕೆ ಮಳೆ ಸುರಿಯುವ ಪ್ರಮಾಣ ಶೇ. 30, ವಾಡಿಕೆಗಿಂತ ಕಡಿಮೆ ಮುಂಗಾರು ಶೇ. 55, ಅಧಿಕ ಮಳೆ ಶೂನ್ಯ, ಅನಾವೃಷ್ಟಿ ಸಾಧ್ಯತೆ ಶೇ.15 ಎಂದು ಸ್ಕೈಮೆಟ್ ಮುನ್ಸೂಚನೆ ನೀಡಿದೆ. ಜೂನ್ನಲ್ಲಿ 164 ಎಂ.ಎಂ, ಜುಲೈನಲ್ಲಿ 289 ಎಂ.ಎಂ, ಆಗಸ್ಟ್ 261 ಎಂ.ಎಂ. ಮತ್ತು ಸೆಪ್ಟೆಂಬರ್ನಲ್ಲಿ 173 ಎಂ.ಎಂ. ಮಳೆಯಾಗುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಬ್ರೆಕ್ಸಿಟ್ ಬಿಕ್ಕಟ್ಟು
ಸುದ್ಧಿಯಲ್ಲಿ ಏಕಿದೆ ? ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ (ಬ್ರೆಕ್ಸಿಟ್) ಪ್ರಸ್ತಾವಕ್ಕೆ ಬ್ರಿಟನ್ ಸಂಸತ್ನಲ್ಲಿ ಮೂರನೇ ಬಾರಿಗೆ ಸೋಲುಂಟಾದ ಹಿನ್ನೆಲೆಯಲ್ಲಿ ಪ್ರಧಾನಿ ಥೆರೇಸಾ ಮೇ, ಇನ್ನಷ್ಟು ಕಾಲಾವಕಾಶ ನೀಡುವಂತೆ ಐರೋಪ್ಯ ಒಕ್ಕೂಟವನ್ನು (ಇಯು) ಕೋರಲು ಮುಂದಾಗಿದ್ದಾರೆ. ಜಟಿಲವಾಗಿರುವ ಬ್ರೆಕ್ಸಿಟ್ ಸಮಸ್ಯೆಯನ್ನು ಪರಿಹರಿಸಲು ಲೇಬರ್ ಪಾರ್ಟಿ ಮುಖಂಡರ ಜತೆ ಹೊಸದಾಗಿ ಮಾತುಕತೆ ನಡೆಸುವ ಪ್ರಸ್ತಾಪವನ್ನೂ ಇರಿಸಿದ್ದಾರೆ.
- ಈ ಹಿಂದೆ ನಿರ್ಧರಿಸಿದಂತೆ ಮಾರ್ಚ್ 29ರೊಳಗೆ ಬ್ರಿಟನ್ ಸಂಸತ್ನಲ್ಲಿ ನಿರ್ಣಯ ಅಂಗೀಕಾರವಾಗಬೇಕಿತ್ತು. ಆದರೆ ಇದು ತಿರಸ್ಕೃತಗೊಂಡ ಕಾರಣ ಗಡುವನ್ನು ಏ. 12ಕ್ಕೆ ವಿಸ್ತರಿಸಲಾಗಿತ್ತು. ಆದರೆ, ಪ್ರಧಾನಿ ಥೆರೇಸಾ ಮೇ ಎಷ್ಟೆ ಯತ್ನಿಸಿದರೂ ಸ್ವಪಕ್ಷ (ಕನ್ಸ್ರ್ವೆಟಿವ್) ಮತ್ತು ವಿರೋಧ ಪಕ್ಷದಿಂದ ಅಗತ್ಯ ಬೆಂಬಲ ದೊರೆಯುತ್ತಿಲ್ಲ.
- ಪರಿಷ್ಕೃತ ನಿಯಮಗಳನ್ನು ಒಳಗೊಂಡ ಬ್ರೆಕ್ಸಿಟ್ ಪ್ರಸ್ತಾವಕ್ಕೆ ಪದೆ ಪದೇ ಸೋಲುಂಟಾಗುತ್ತಿದೆ. ಇದರಿಂದ ರೋಸಿ ಹೋದ ಥೆರೇಸಾ, ಸಂಸತ್ನಲ್ಲಿ ಮೂರನೇ ಬಾರಿಗೆ ಪ್ರಸ್ತಾವ ಬರುವುದಕ್ಕೂ ಮುನ್ನ ಕನ್ಸ್ರ್ವೆಟಿವ್ ಪಕ್ಷದ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಪದತ್ಯಾಗಕ್ಕೂ ಸಿದ್ಧ ಎಂದಿದ್ದರು. ಬ್ರೆಕ್ಸಿಟ್ ಪ್ರಸ್ತಾವಕ್ಕೆ ಬೆಂಬಲ ನೀಡುವಂತೆ ಅಂಗಲಾಚಿದ್ದರು.
ವಿರೋಧಕ್ಕೆ ಕಾರಣವೇನು?
- ಬ್ರೆಕ್ಸಿಟ್ನಿಂದಾಗಿ ಬ್ರಿಟನ್ ಪ್ರಜೆಗಳ ತಲಾ ಆದಾಯ ಗಣನೀಯವಾಗಿ ಇಳಿಮುಖವಾಗುತ್ತದೆ ಮತ್ತು ದೇಶದ ಆರ್ಥಿಕತೆ ಮೇಲೆ ಕನಿಷ್ಠ ಎರಡು ವರ್ಷ ದುಷ್ಪರಿಣಾಮ ಉಂಟಾಗಬಹುದು ಎಂಬ ಕಾರಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬ್ರೆಕ್ಸಿಟ್ ಜಾರಿಯಾದರೂ ಐರೋಪ್ಯ ಒಕ್ಕೂಟ ಜತೆ ಆಪ್ತ ಒಡನಾಟ ಇರುತ್ತದೆ ಎಂದು ಥೆರೇಸಾ ಮೇ ಭರವಸೆ ನೀಡುತ್ತಿದ್ದಾರೆ.
- ಆದರೂ ಸ್ವಪಕ್ಷೀಯರು ಮತ್ತು ವಿರೋಧ ಪಕ್ಷದವರು ಬೆಂಬಲ ನೀಡುತ್ತಿಲ್ಲ. 650 ಸದಸ್ಯ ಬಲದ ಹೌಸ್ ಆಫ್ ಕಾಮನ್ಸ್ನಲ್ಲಿ (ಸಂಸತ್ನ ಕೆಳಮನೆ) ಸ್ಪೀಕರ್ ಮತ್ತು ಮತದಾನದ ಹಕ್ಕು ಹೊಂದಿಲ್ಲದ ಸದಸ್ಯರನ್ನು ಹೊರತು ಪಡಿಸಿದರೆ 318 ಸದಸ್ಯರ ಬೆಂಬಲ ಬ್ರೆಕ್ಸಿಟ್ ಜಾರಿಗೆ ಅಗತ್ಯ.
- ಕನ್ಸರ್ವೆಟಿವ್ ಪಕ್ಷ 315 ಸದಸ್ಯರನ್ನು ಹೊಂದಿದೆ. ಆದರೆ, ಕಳೆದ ಮೂರು ಸಾರಿಯೂ ಕನ್ಸರ್ವೆಟಿವ್ನ ಅರ್ಧದಷ್ಟು ಸಂಸದರು ಪ್ರಸ್ತಾವನೆಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.
ಏನಿದು ಬ್ರೆಕ್ಸಿಟ್?
- 28 ರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ರಾಜಕೀಯ, ಆರ್ಥಿಕ ಸಂಘಟನೆ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು. ಈ ಸೇರ್ಪಡೆಗೆ 1975ರಲ್ಲಿ ನಡೆದ ಜನಮತ ಗಣನೆ ಅಂಗೀಕಾರ ನೀಡಿತು. 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಕೆಲ ಪಕ್ಷಗಳಿಂದ ಕೇಳಿಬರತೊಡಗಿದವು.
- ಬ್ರೆಕ್ಸಿಟ್ ಹೆಸರಿನ ಆಂದೋಲನಗಳು ನಡೆದವು. 2015ರ ಚುನಾವಣೆಯಲ್ಲಿ ಈ ಆಗ್ರಹವನ್ನು ಡೇವಿಡ್ ಕ್ಯಾಮರಾನ್ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಿದರು. 2016ರ ನ. 23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಬ್ರೆಕ್ಸಿಟ್ಗೆ ವಿರುದ್ಧ ನಿಲುವು ಹೊಂದಿದ್ದ ಕ್ಯಾಮರಾನ್ಗೆ ಮುಖಭಂಗವಾಗಿ ರಾಜೀನಾಮೆ ನೀಡಿದರು.
- ನಂತರ ಥೆರೇಸಾ ಮೇ ಪ್ರಧಾನಿಯಾದರು. ಒಂದು ವರ್ಷದ ಬಳಿಕ ಮಧ್ಯಂತರ ಚುನಾವಣೆ ಘೋಷಣೆ ಮಾಡಿದರು. ಆದರೆ, ಅವರ ಪಕ್ಷಕ್ಕೆ ಸರಳ ಬಹುಮತ ದೊರೆಯಲಿಲ್ಲ.
- ಹೀಗಾಗಿ ಡೆಮಾಕ್ರಟಿಕ್ ಯೂನಿಯನಿಸ್ಟ್ ಪಕ್ಷದ ಬೆಂಬಲ ಪಡೆದು ಸರ್ಕಾರ ರಚಿಸಿದರು. 2017ರ ಮಾರ್ಚ್ 29ರಂದು ಬ್ರಿಟನ್ ಸರ್ಕಾರ ಸಂವಿಧಾನದ 50ನೇ ವಿಧಿಯನ್ನು (ಐರೋಪ್ಯ ಒಕ್ಕೂಟದ ಒಪ್ಪಂದ) ಕೈಬಿಡುವ ಪ್ರಸ್ತಾವನೆ ಮಾಡಿತ್ತು.
ಆನ್ಲೈನ್ ಮತದಾನ
ಸುದ್ಧಿಯಲ್ಲಿ ಏಕಿದೆ ? ಮತಗಟ್ಟೆಗೆ ಬರಲು ಕಷ್ಟವಾಗುವವರಿಗೆ, ರಜೆಯಲ್ಲಿ ಕಳೆಯಬಯಸುವವರಿಗೆ, ಆನ್ಲೈನ್ ಮತದಾನದ ಸೌಲಭ್ಯವಿದ್ದರೆ ಶೇ.100ರ ಹತ್ತಿರ ಹತ್ತಿರವಾದರೂ ಮತದಾನ ಆದೀತು. ಭಾರತದಲ್ಲಿ ಆ ಕಾಲವಿನ್ನೂ ದೂರವಿದೆ. ಆದರೆ ಯುರೋಪ್ ಒಕ್ಕೂಟದ ಎಸ್ಟೋನಿಯಾ ಎಂಬ ಪುಟ್ಟ ದೇಶವೊಂದು ಈ ನಿಟ್ಟಿನಲ್ಲಿ ಗಣನೀಯ ಸಾಧನೆ ಮಾಡಿದೆ.
- ಎಸ್ಟೋನಿಯಾದಲ್ಲಿ ಪ್ರಜೆಗಳಿಗೆ ಆನ್ಲೈನ್ ಮತದಾನದ ಸೌಲಭ್ಯ ಕಲ್ಪಿಸಲಾಗಿದ್ದು, ಕಳೆದ ಚುನಾವಣೆಯಲ್ಲಿ ಶೇ.44 ಮತದಾರರು ಈ ಸೌಲಭ್ಯವನ್ನು ಬಳಸಿಕೊಂಡು ಓಟ್ ಹಾಕಿದ್ದಾರೆ. ಎಸ್ಟೋನಿಯಾ ಪುಟ್ಟ ದೇಶ ಮತ್ತು ಇಲ್ಲಿನ ಜನಸಂಖ್ಯೆ ಕಡಿಮೆ ಹಾಗೂ ಶೇ.100 ಮಂದಿ ಆನ್ಲೈನ್ ಸಾಕ್ಷರರು- ಈ ಅಂಶಗಳು ಇದಕ್ಕೆ ಪೂರಕವಾಗಿವೆ.
ಭಾರತದಲ್ಲೇಕೆ ಕಷ್ಟ ?
- ಭಾರತದಂಥ ವೈವಿಧ್ಯಮಯ ಹಾಗೂ ಮಿತಿ ಮೀರಿದ ಜನಸಂಖ್ಯೆಯಿರುವ ದೇಶದಲ್ಲಿ ಇ-ಮತದಾನದ ಪದ್ಧತಿ ಅಳವಡಿಸುವುದು ಕಷ್ಟಸಾಧ್ಯ
ಇ- ಮತದಾನ ಹೇಗೆ?
- ಚುನಾವಣೆಯ ಮೊದಲಿನ ಏಳು ದಿನಗಳಲ್ಲಿ ಯಾವಾಗ ಬೇಕಾದರೂ ಪ್ರಜೆಗಳು ತಮ್ಮ ಇ-ಮತ ಚಲಾಯಿಸಬಹುದು. ನೇರ ಮತದಾನದ ದಿನ ಆ ಅವಕಾಶವಿಲ್ಲ.
- ಮತದಾರರು ಕಂಪ್ಯೂಟರ್, ಅಂತರ್ಜಾಲ ಸಂಪರ್ಕ, ರಾಷ್ಟ್ರೀಯ ಗುರುತು ಚೀಟಿ ಅಥವಾ ವಿಶೇಷ ಮೊಬೈಲ್ ಐಡಿ ಹೊಂದಿರಬೇಕು.
- ರಾಷ್ಟ್ರೀಯ ಚುನಾವಣಾ ವೆಬ್ಸೈಟ್ನಿಂದ ಮತದಾರರು ಮತದಾನ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಾರೆ.
- ಕಾರ್ಡ್ ರೀಡರ್ನಲ್ಲಿ ಮತದಾರನ ಗುರುತು ಕಾರ್ಡ್ನ ವಿವರಗಳು, ನೋಂದಣೆ, ಮತದಾನಕ್ಕೆ ಅರ್ಹತೆ ಇತ್ಯಾದಿಗಳ ಪರಿಶೀಲನೆ ನಡೆಸಲಾಗುತ್ತದೆ.
- ಮತದಾರರು ಡಿಜಿಟಲ್ ಮತಪತ್ರವನ್ನು ತುಂಬಿ, ಸಹಿ ಹಾಕಿ ಸಲ್ಲಿಸಬೇಕು.
- ತಮ್ಮ ಮತಗಳು ದಾಖಲಾಗಿವೆಯೇ ಎಂದು ಪರಿಶೀಲಿಸಲು ಮತದಾರರು ತಮ್ಮ ಮೊಬೈಲ್ ಫೋನ್ಗಳನ್ನು ಬಳಸಬಹುದು.
- ಚುನಾವಣೆ ಸರ್ವರ್ಗಳಿಗೆ ಕಳಿಸುವ ಮುನ್ನ ಪ್ರತಿಯೊಂದು ಮತವನ್ನೂ ಸಮಯನಿಬದ್ಧಗೊಳಿಸಿ, ಎನ್ಕ್ರಿಪ್ಟ್ ಮಾಡಲಾಗಿರುತ್ತದೆ.
- ಮತದಾನದ ದಿನದವರೆಗೆ ತಮ್ಮ ಮತವನ್ನು ಬದಲಾಯಿಸಲು ಮತದಾರನಿಗೆ ಅವಕಾಶವಿದೆ.
ಎಸ್ಟೋನಿಯಾ ಡಿಜಿಟಲ್ ಡೆಮಾಕ್ರಸಿ ಆದ ಬಗೆ
- 2005: ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಮತದಾನ ಅಳವಡಿಸಲಾಯಿತು. ಆಗ ಅದಕ್ಕೆ ವಿಶೇಷ ಚಿಪ್ ಬಳಸಿದ ಗುರುತು ಕಾರ್ಡ್, ಸ್ಮಾರ್ಟ್ ಕಾರ್ಡ್ ರೀಡರ್ ಅಗತ್ಯವಿತ್ತು. ಮುನಿಸಿಪಲ್ ಚುನಾವಣೆಯಲ್ಲಿ 2% ಮಂದಿ ಇ-ಮತ ಹಾಕಿದರು.
- 2007: ಮೊದಲ ಬಾರಿಗೆ ಸಂಸದೀಯ ಚುನಾವಣೆಯಲ್ಲಿ 30,243 ಮಂದಿ ಇ-ಮತದಾನ ಮಾಡಿದರು.
- 2007: ಕಾರ್ಡ್ ರೀಡರ್ ಬೇಕಾಗಿಲ್ಲದ, ಮತದಾನವನ್ನು ಒದಗಿಸಬಲ್ಲ ವಿಶೇಷ ಸಿಮ್ಗಳನ್ನು ನೀಡುವ ಗುರುತು ಕಾರ್ಡ್ಗಳನ್ನು ಎಸ್ಟೋನಿಯಾ ಸರಕಾರ ಜನತೆಗೆ ಒದಗಿಸಿತು.
- 2009: ಮುನಿಸಿಪಲ್ ಚುನಾವಣೆಯಲ್ಲಿ ಇ-ಮತದಾನ 1 ಲಕ್ಷದ ಗಡಿ ದಾಟಿತು.
- 2015: ತನ್ನ ಮತ ಚುನಾವಣೆ ಸರ್ವರ್ ತಲುಪಿದೆ, ಕುತಂತ್ರಾಂಶಗಳಿಂದ ವೋಟ್ ಕೆಟ್ಟಿಲ್ಲ ಎಂದು ಖಚಿತಪಡಿಸಿಕೊಳ್ಳುವ ವ್ಯವಸ್ಥೆಯನ್ನು ಸರಕಾರ ಅಳವಡಿಸಿತು.
- 2017: ಮುನಿಸಿಪಲ್ ಚುನಾವಣೆಯಲ್ಲಿ 32% ಇ-ಮತದಾನದ ದಾಖಲೆಯಾಯಿತು.
- 2019: ಸಂಸದೀಯ ಚುನಾವಣೆಯಲ್ಲಿ 44% ಇ-ಮತದಾನ ನಡೆದು ದಾಖಲೆ ಸೃಷ್ಟಿಸಿತು.
ಭಾರತಕ್ಕೆ ಏಕೆ ಅಗತ್ಯ?
- ಪ್ರತಿಸಲ ಸುಮಾರು 28 ಕೋಟಿ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ ಅಥವಾ ತಪ್ಪಿಸಿಕೊಳ್ಳುತ್ತಾರೆ. ಇದರಿಂದ ಸಮಗ್ರ ಜನಾಭಿಪ್ರಾಯ ದೊರೆಯುತ್ತಿಲ್ಲ.
- ಮತದಾನ ತಪ್ಪಿಸಿಕೊಳ್ಳುವವರಲ್ಲಿ ಹೆಚ್ಚಿನವರು ಉದ್ಯೋಗಕ್ಕಾಗಿ ವಲಸೆ ಹೋದವರು ಅಥವಾ ಮದುವೆಯಾಗಿ ಬೇರೆ ಕಡೆಗೆ ಹೋದವರು.
- ತಾವೆಲ್ಲೇ ಇದ್ದರೂ ದೇಶದ ಪ್ರಜಾಪ್ರಭುತ್ವಕ್ಕಾಗಿ ಮತ ಹಾಕುವ ಹಕ್ಕಿನಿಂದ ವಂಚಿತವಾಗದಂತೆ ಈ ಸೌಲಭ್ಯ ತಡೆಯುತ್ತದೆ.
- ಆದರೆ ಪ್ರಮುಖ ಸವಾಲು, ದೇಶದ 90 ಕೋಟಿ ಜನತೆಯ ಮತಗಳನ್ನು ಆನ್ಲೈನ್ ಸ್ವರೂಪದಲ್ಲಿ ಸುರಕ್ಷಿತವಾಗಿ ಕ್ರೋಢೀಕರಿಸುವುದು.
- ಹ್ಯಾಕಿಂಗ್ ತಡೆಯಲು ಸುರಕ್ಷಿತವಾದ ತಂತ್ರಜ್ಞಾನ, ಭದ್ರತಾ ಕ್ರಮಗಳು ಇಲ್ಲವಾದರೆ ಪ್ರಜಾಪ್ರಭುತ್ವಕ್ಕೆ ಅತ್ಯಂತ ದೊಡ್ಡ ವಂಚನೆ ಕಟ್ಟಿಟ್ಟ ಬುತ್ತಿ.