“06 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಒನ್ ನೇಷನ್, ಒನ್ ಕಾರ್ಡ್:
ಸುದ್ಧಿಯಲ್ಲಿ ಏಕಿದೆ ?ಒಂದು ದೇಶ ಒಂದು ಕಾರ್ಡ್(ಒನ್ ನೇಷನ್ ಒನ್ ಕಾರ್ಡ್) ಎಂದೇ ಹೇಳಲಾದ ರಾಷ್ಟ್ರೀಯ ಬಹುಪಯೋಗಿ ಕಾರ್ಡ್(ಎನ್ಸಿಎಂಸಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
- ರುಪೇ ಕಾರ್ಡ್ ವ್ಯವಸ್ಥೆಯಲ್ಲಿ ಈ ಎನ್ಸಿಎಂಸಿ ಕಾರ್ಡ್ ಕಾರ್ಯ ನಿರ್ವಹಿಸುತ್ತದೆ.
ಅನುಕೂಲಗಳು
- ಪ್ರಯಾಣ ಸಂಬಂಧಿ ಸಮಸ್ಯೆಗಳನ್ನು ಈ ಕಾರ್ಡ್ ಇಲ್ಲವಾಗಿಸುತ್ತದೆ. ಅನೇಕ ಸಲ ಮೆಟ್ರೊ, ಬಸ್ ಅಥವಾ ರೈಲಿನಲ್ಲಿ ಪ್ರಯಾಣ ಮಾಡುವಾಗ, ಇಲ್ಲವೇ ಟೋಲ್ಗಳಲ್ಲಿ ಸುಂಕ ಪಾವತಿಸುವಾಗ ಮತ್ತು ಪಾರ್ಕಿಂಗ್ ಮಾಡುವಾಗ ಚಿಲ್ಲರೆಯ ಸಮಸ್ಯೆ ಎಲ್ಲರಿಗೂ ಎದುರಾಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಆಟೋಮ್ಯಾಟಿಕ್ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ರೂಪಿಸಲಾಗಿದೆ.
- ನಾನಾ ಸಂಸ್ಥೆಗಳು ಕಾರ್ಡ್ ವಿತರಿಸುತ್ತಿದ್ದು, ಅವು ನಿರ್ದಿಷ್ಟ ನಗರಗಳಲ್ಲಿ ಮಾತ್ರ ಸೇವೆ ಪಡೆಯಲು ಅವಕಾಶ ನೀಡಿದ್ದವು. ಆದರೆ, ಹೊಸದಾದ ಎನ್ಸಿಎಂಸಿ ಬಳಸಿ ದೇಶದ ಎಲ್ಲೆಡೆ ಸೇವೆಯನ್ನು ಪಡೆಯಬಹುದಾಗಿದೆ
- ಕೆಲವೇ ಕೆಲವು ಆಯ್ದ ದೇಶಗಳಲ್ಲಿ ಮಾತ್ರ ತಂತ್ರಜ್ಞಾನವು ಇದೆ. ಭಾರತವು ಈಗ ಆ ಕ್ಲಬ್ನ ಭಾಗವಾಗಿದೆ. ವಿದೇಶ ತಂತ್ರಜ್ಞಾನವನ್ನು ದೀರ್ಘ ಕಾಲ ನೆಚ್ಚಿಕೊಳ್ಳದೇ, ಮೇಕ್ ಇನ್ ಇಂಡಿಯಾ ಮೂಲಕ ಈ ಕಾಡ್ ರೂಪುಗೊಂಡಿದೆ
- ಸಂಪೂರ್ಣ ಸ್ವದೇಶಿ ತಂತ್ರಜ್ಞಾನ: ‘ಸ್ವಾಗತ್’ ಹೆಸರಿನ ಆಟೋಮೆಟಿಕ್ ಶುಲ್ಕ ಸಂಗ್ರಹ ವ್ಯವಸ್ಥೆ ಮತ್ತು ಓಪನ್ ಲೂಪ್ ಆಟೋಮೆಟಿಕ್ ಶುಲ್ಕ ಸಂಗ್ರಹ ವ್ಯವಸ್ಥೆ ‘ಸ್ವೀಕಾರ್’ ತಂತ್ರಜ್ಞಾನ ಆಧರಿಸಿ ಹೊಸ ಕಾರ್ಡ್ ವ್ಯವಸ್ಥೆ ರೂಪಿಸಲಾಗಿದೆ. ಇದು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ಕೂಡಿದೆ.
ಕಾರ್ಡ್ ಒಂದು, ಸೇವೆ ಹಲವು
- ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್ ರೀತಿಯೇ ಈ ಎನ್ಸಿಎಂಸಿ ಇರುತ್ತದೆ. ಎಸ್ಬಿಐ , ಪಿಎನ್ಬಿ ಸೇರಿದಂತೆ 25 ಬ್ಯಾಂಕ್ಗಳಲ್ಲಿ ಕಾರ್ಡ್ ಲಭ್ಯ.
- ಮೆಟ್ರೊ, ಬಸ್, ಸಬರ್ಬನ್ ರೈಲ್ವೆ, ಸ್ಮಾರ್ಟ್ ಸಿಟಿ ಮತ್ತು ರೀಟೇಲ್ ಶಾಪಿಂಗ್ ಮತ್ತಿತರ ಸೇವೆಗಳ ಪಡೆಯಬಹುದು.
- ಪಾರ್ಕಿಂಗ್ ಮತ್ತು ಟೇಲ್ ಗೇಟ್ಗಳಲ್ಲಿ ಶುಲ್ಕ ನೀಡಲು ಕಾರ್ಡು ಬಳಸಬಹುದು.
- ಬಿಲ್ ಪೇಮೆಂಟ್ಗಳನ್ನು ಮಾಡಬಹುದು. ಕ್ಯಾಶ್ಬ್ಯಾಕ್ ಆಫರ್ಗಳೂ ಇರುತ್ತವೆ. ಅಲ್ಲದೇ ಸಾವಿರಕ್ಕೂ ಅಧಿಕ ಸೇವೆಗಳ ಪಡೆಯಬಹುದು.
- ಎಟಿಎಂಗಳಲ್ಲಿ ಕಾರ್ಡ್ದಾರರು ಶೇ.5ರಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದು. ವಿದೇಶಕ್ಕೆ ತೆರಳಿದಾಗ ಮರ್ಚೆಂಟ್ಗಳ ಔಟ್ಲೆಟ್ಗಳಲ್ಲಿ ಶೇ.10ರಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದು.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆ
ಸುದ್ಧಿಯಲ್ಲಿ ಏಕಿದೆ ?ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಸಿಕ ಕನಿಷ್ಠ 3,000 ರೂ. ಪಿಂಚಣಿ ನೀಡುವ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆಗೆ(ಪಿಎಂಎಸ್ವೈಎಂ) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಏಕೆ ಈ ಯೋಜನೆ ?
- ತಮ್ಮ ದೇಹ ಸದೃಢವಾಗಿರುವ ತನಕ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರು, ವಯಸ್ಸಾದ ಬಳಿಕ ಬದುಕುವುದು ಹೇಗೆ ಎನ್ನುವ ಕಳವಳಕ್ಕೆ ಒಳಗಾಗುತ್ತಾರೆ. ಇಂಥ ವರ್ಗವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರಕಾರ ಈ ಯೋಜನೆ ರೂಪಿಸಿದೆ.
ಯೋಜನೆ ವೈಶಿಷ್ಟ್ಯಗಳು
- 10 ಕೋಟಿ ಕೆಲಸಗಾರರಿಗೆ ಪಿಂಚಣಿ ಸೌಲಭ್ಯ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಮಾಸಿಕ 15,000 ರೂ.ಸಂಪಾದಿಸುವ ಅಸಂಘಟಿತ ವಲಯದ ಉದ್ಯೋಗಿಗಳಿಗೆ ಯೋಜನೆ ಲಭ್ಯ.
- 29 ವರ್ಷದ ಉದ್ಯೋಗಿಯು ಮಾಸಿಕ 100 ರೂ.ಗಳನ್ನು ತನ್ನ 60ನೇ ವಯಸ್ಸಿನವರಿಗೆ ಪಾವತಿಸುತ್ತಾ ಹೋದರೆ, ಬಳಿಕ 3,000 ರೂಪಾಯಿ ಪಿಂಚಣಿ ಬರುತ್ತದೆ. 18 ವರ್ಷದ ಉದ್ಯೋಗಿಗಳು ತಿಂಗಳಿಗೆ 55 ರೂ. ಪಾವತಿಸಿದರೆ ಸಾಕು.
ಯೋಜನೆ ಲಾಭ ಯಾರಿಗೆ?
- ಮನೆಗೆಲಸದವರು, ಚಿಂದಿ ಸಂಗ್ರಹಿಸುವವರು, ಸ್ವಂತ ಭೂಮಿ ಇಲ್ಲದ ಕೂಲಿ ಕಾರ್ವಿುಕರು, ಕೆಲ ಕೃಷಿಕರು, ಬೀಡಿ ಕಾರ್ವಿುಕರು, ಮಗ್ಗದ ಕೆಲಸ ಮಾಡುವವರು (ಮಾಸಿಕ 15 ಸಾವಿರ ಅಥವಾ ಕಡಿಮೆ ಆದಾಯವುಳ್ಳವರು)
ಯಾರು ಅರ್ಹರಲ್ಲ:
- ಆದಾಯ ತೆರಿಗೆ ಪಾವತಿದಾರರು, ರಾಷ್ಟ್ರೀಯ ಪಿಂಚಣಿ ಯೋಜನೆ ಸದಸ್ಯರು, ನೌಕರರ ರಾಜ್ಯ ಪಿಂಚಣಿ ಸದಸ್ಯರು, ಇಪಿಎಫ್ ಸದಸ್ಯರು.
ಯೋಜನೆಗೆ ಅರ್ಹ ವಯೋಮಿತಿ: 18-40 ವರ್ಷ
ಏನು ಮಾಡಬೇಕು?
- ಸದಸ್ಯರಾಗಲು ಯೋಜನೆಗೆ ನೋಂದಣಿ ಮಾಡಿಸಬೇಕು.
- ಮಾಸಿಕ ನಿಗದಿಪಡಿಸಿದ ಮೊತ್ತವನ್ನು (55 ರೂ. -200ರೂ.ವರೆಗೆ) ಸರ್ಕಾರಕ್ಕೆ ಕಟ್ಟಬೇಕು.
- ಸಮಾನ ಮೊತ್ತವನ್ನು ಸರ್ಕಾರ ಕೂಡ ಸದಸ್ಯರ ಖಾತೆಗೆ ಜಮೆ ಮಾಡಲಿದೆ.
- ಸದಸ್ಯರಿಗೆ 60 ವರ್ಷ ಪೂರ್ಣ ಬಳಿಕ ಮಾಸಿಕ ಕನಿಷ್ಠ 3 ಸಾವಿರ ಪಿಂಚಣಿ ಸಿಗಲಿದೆ.
ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿ
ಸುದ್ಧಿಯಲ್ಲಿ ಏಕಿದೆ ?ವಿಶ್ವದಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಒಟ್ಟು 7 ನಗರಗಳು ಸ್ಥಾನ ಪಡೆದುಕೊಂಡಿವೆ.
- ರಾಷ್ಟ್ರ ರಾಜಧಾನಿ ನವದೆಹಲಿ ಸಮೀಪವಿರುವ ಗುರುಗ್ರಾಮ ವಿಶ್ವದಲ್ಲೇ ಅತಿಹೆಚ್ಚು ವಾಯುಮಾಲಿನ್ಯಕ್ಕೆ ಒಳಪಟ್ಟಿರುವ ನಗರ ಎಂಬ ಕುಖ್ಯಾತಿ ಸಂಪಾದಿಸಿದೆ.
- ಐಕ್ಯೂಏರ್ ಏರ್ವಿಷ್ಯುಯಲ್ ಮತ್ತು ಗ್ರೀನ್ಪೀಸ್ ಸಂಸ್ಥೆಗಳು ಒಟ್ಟಾಗಿ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಗುರುಗ್ರಾಮದಲ್ಲಿನ ಗಾಳಿಯ ಗುಣಮಟ್ಟ ತಕ್ಕಮಟ್ಟಿಗೆ ಸುಧಾರಿಸಿದೆ. ಆದರೂ, ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ನಗರ ಎಂಬ ಕುಖ್ಯಾತಿಯಿಂದ ಪಾರಾಗಲು ಅದಕ್ಕೆ ಸಾಧ್ಯವಾಗಿಲ್ಲ.
- ನವದೆಹಲಿಯ ಗಾಜಿಯಾಬಾದ್ಗೆ ಪಟ್ಟಿಯಲ್ಲಿ 2ನೇ ಸ್ಥಾನ ದೊರೆತಿದೆ.
- ಪಾಕಿಸ್ತಾನದ ಫೈಸಲಾಬಾದ್ 3ನೇ ಸ್ಥಾನದಲ್ಲಿದ್ದರೆ ಭಾರತದ ಫರಿದಾಬಾದ್, ಭಿವಾಂಡಿ, ನೋಯ್ಡಾ, ಪಟನಾ ನಂತರದ ಸ್ಥಾನ ಹಂಚಿಕೊಂಡಿವೆ.
- ಚೀನಾದ ಹೋಟಾನ್ 8ನೇ ಸ್ಥಾನದಲ್ಲಿದ್ದರೆ ಭಾರತದ ಲಖನೌ 9 ಮತ್ತು ಪಾಕಿಸ್ತಾನದ ಲಾಹೋರ್ 10ನೇ ಸ್ಥಾನ ಪಡೆದುಕೊಂಡಿವೆ.
- ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ವಿಶ್ವದ ಅಗ್ರ 30 ನಗರಗಳ ಪಟ್ಟಿಯಲ್ಲಿ ಭಾರತದ 22 ನಗರಗಳಿದ್ದರೆ, ಚೀನಾದ 5, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ತಲಾ ಎರಡು ನಗರಗಳಿವೆ.
ವಾಯುಮಾಲಿನ್ಯದ ಪರಿಣಾಮಗಳು
- ವಾಯುಮಾಲಿನ್ಯದ ಸಮಸ್ಯೆಯಿಂದಾಗಿ ಭಾರತದಲ್ಲಿ ಆರೋಗ್ಯಕ್ಷೇತ್ರದಲ್ಲಿನ ಖರ್ಚುಗಳು ಮತ್ತು ಉತ್ಪಾದನಾ ನಷ್ಟಗಳು ಹೆಚ್ಚಾಗಿದೆ. ಪ್ರತಿ ವರ್ಷ ಕಾರ್ಮಿಕ ವರ್ಗದಲ್ಲಿ 225 ಬಿಲಿಯನ್ ಡಾಲರ್ ನಷ್ಟವಾಗುತ್ತಿದ್ದರೆ, ಆರೋಗ್ಯ ಕ್ಷೇತ್ರದಲ್ಲಿ ಸಹಸ್ರಾರು ಕೋಟಿ ರೂಪಾಯಿ ಖರ್ಚಾಗುತ್ತಿವೆ.
ಎಟಿಎಂ ವಾಹನಕ್ಕೆ ಗೈಡ್ಲೈನ್
ಸುದ್ಧಿಯಲ್ಲಿ ಏಕಿದೆ ?ಲೋಕಸಭಾ ಚುನಾವಣೆ ಅಕ್ರಮ ತಡೆಯುವ ಉದ್ದೇಶದಿಂದ ಅನುಮಾನಾಸ್ಪದ ಬ್ಯಾಂಕ್ ಖಾತೆಗಳಲ್ಲಿನ ಹಣ ವರ್ಗಾವಣೆ ಮೇಲೆ ನಿಗಾ ಇಡಲು ಆರಂಭಿಸಿರುವ ಚುನಾವಣಾ ಆಯೋಗ, ಈಗ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಿಸುವ ವಾಹನಗಳಿಗೆ ಮಾರ್ಗಸೂಚಿ ಹೊರಡಿಸಿದೆ.
- ಆದಾಯ ತೆರಿಗೆ ಇಲಾಖೆಯು ಎಲ್ಲ ಬ್ಯಾಂಕ್ಗಳಿಗೆ ಪ್ರಮಾಣಿತ ಕಾರ್ಯವಿಧಾನವನ್ನು (ಎಸ್ಒಪಿ) ಪ್ರಕಟಿಸಿದೆ. ಇದನ್ನು ಕಡ್ಡಾಯವಾಗಿ ಅನುಸರಿಸುವಂತೆ ಎಲ್ಲ ಬ್ಯಾಂಕ್ ಶಾಖೆಗಳಿಗೆ ಸೂಚನೆ ನೀಡಲಾಗಿದೆ.
ಏಕೆ ಈ ಕ್ರಮ?:
- 2013ರ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣೆ ವೇಳೆ ಅನೇಕ ಕಡೆಗಳಲ್ಲಿ ಎಟಿಎಂ ವಾಹನಗಳ ಮೂಲಕ ಅಕ್ರಮ ಹಣ ಸಾಗಾಟವಾಗಿತ್ತು. ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಪ್ರಮುಖವಾಗಿ ಬಳಸಿಕೊಂಡಿದ್ದರು. ಬ್ಯಾಂಕ್ಗಳು ಎಟಿಎಂಗಳಿಗೆ ಹಣ ತುಂಬಿಸಲು ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಾಹನಗಳನ್ನು ಬಳಸಿಕೊಳ್ಳುತ್ತವೆ. ರಾಜಕೀಯ ಪಕ್ಷಗಳು ಪ್ರಭಾವ ಬೀರಿ ಈ ವಾಹನಗಳಲ್ಲಿ ಚುನಾವಣೆ ಬಳಕೆಗಾಗಿ ಹಣ ವರ್ಗಾಯಿಸುತ್ತವೆ.
- ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ವ್ಯಕ್ತಿ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣ ಹೊಂದಿರುವಂತಿಲ್ಲ. ಹೊಂದಿದ್ದರೆ ದಾಖಲಾತಿ ಇರಬೇಕು. ಹೀಗಾಗಿ ಚುನಾವಣೆ ವೇಳೆ ನಾಕಾ ಬಂದಿ ದಾಟಿಸಿ ತಾವಂದುಕೊಂಡ ಕ್ಷೇತ್ರಗಳಿಗೆ ಹಣ ತೆಗೆದುಕೊಂಡು ಹೋಗುವುದು ರಾಜಕೀಯ ಪಕ್ಷಗಳಿಗೆ ಕಷ್ಟ. ಹೀಗಾಗಿ ಎಟಿಎಂ ವಾಹನಗಳನ್ನು ಬಳಸಿಕೊಳ್ಳುತ್ತಿದ್ದರು.
ಏನು ನಿಯಮಗಳು?
- ಹಣಕ್ಕೆ ಸಂಬಂಧಿಸಿದ ದಾಖಲೆಯನ್ನು ಸಾಗಾಟ ಸಂದರ್ಭದಲ್ಲಿ ಕಡ್ಡಾಯವಾಗಿ ಇಟ್ಟುಕೊಂಡಿರಲೇಬೇಕು. ಎಲ್ಲಿಂದ ಎಲ್ಲಿಗೆ ಸಾಗಾಟ? ಯಾವ ಉದ್ದೇಶದ ಹಣ? ಎಂಬುದು ಸ್ಪಷ್ಟವಾಗಿರಬೇಕು.
- ಬ್ಯಾಂಕ್ ನಿಯೋಜಿತ ನೌಕರ ತನ್ನ ಗುರುತಿನ ಚೀಟಿಯೊಂದಿಗೇ ಹಣ ಸಾಗಣೆ ವೇಳೆ ಮುದ್ದಾಂ ಹಾಜರಿರಬೇಕು.
- ಹಣ ಸಾಗಣೆ ವಾಹನವು ನಿಗದಿತ ಮಾರ್ಗದಲ್ಲೇ ಸಂಚರಿಸಬೇಕು.
- ಹಣ ಸಾಗಣೆ ಸಂದರ್ಭದಲ್ಲಿ ಸಂಬಂಧಪಟ್ಟ ಭದ್ರತಾ ಸಿಬ್ಬಂದಿ ಇರಬೇಕಾಗುತ್ತದೆ.
- ಬ್ಯಾಂಕ್ಗಳ ಅಧಿಕೃತ ವಾಹನ ಅಥವಾ ಬ್ಯಾಂಕ್ ಗುರುತಿಸಲ್ಪಟ್ಟ ವಾಹನಗಳಲ್ಲಿ ಮಾತ್ರ ಹಣ ವರ್ಗಾವಣೆ ಮಾಡಬೇಕು.
- ನೀತಿ ಸಂಹಿತೆ ಜಾರಿಯಾದ ಬಳಿಕ ಪಾಸ್ವರ್ಡ್ ಭದ್ರತೆಯನ್ನೊಳಗೊಂಡ ಹಣ ಸಾಗಣೆ ಕುರಿತ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಲಭ್ಯವಾಗಿರಬೇಕು
ಸುಂಕಾಘಾತ
ಸುದ್ಧಿಯಲ್ಲಿ ಏಕಿದೆ ?ಭಾರತದ ವಸ್ತುಗಳಿಗೆ ಆಮದು ಸುಂಕ ವಿನಾಯಿತಿ ನೀಡುವ ವ್ಯವಸ್ಥೆ ಜಿಎಸ್ಪಿ (ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರನ್ಸ್)ಯನ್ನು ರದ್ದುಪ ಡಿಸಲು ಅಮೆರಿಕ ನಿರ್ಧರಿಸಿದೆ.
- ಭಾರತ ಸೇರಿ ಕೆಲ ಅಭಿವೃದ್ಧಿಶೀಲ ದೇಶಗಳಿಗೆ 1976ರಲ್ಲಿ ಈ ವಿನಾಯಿತಿ ನೀಡಲಾಗಿತ್ತು. ಆದರೆ ಭಾರತದ ಮಾರುಕಟ್ಟೆಯಲ್ಲಿ ಅಮೆರಿಕ ಉತ್ಪನ್ನಗಳಿಗೆ ಅಷ್ಟೊಂದು ಅವಕಾಶ ನೀಡುತ್ತಿಲ್ಲ. ಹೀಗಾಗಿ ಭಾರತಕ್ಕೆ ಈ ವಿನಾಯಿತಿ ರದ್ದುಪಡಿಸುವ ಸಮಯ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
- ಭಾರತದ ಸುಮಾರು 1900 ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗುತ್ತಿವೆ. ಇವುಗಳಲ್ಲಿ ಕೆಲ ಉತ್ಪನ್ನಗಳಿಗೆ ಆಮದು ಸುಂಕ ವಿನಾಯಿತಿ ನೀಡಲಾಗಿದೆ.
- ಹ್ಯಾರ್ಲೆ ಡೇವಿಡ್ಸನ್ ಬೈಕ್ ಸೇರಿ ಅಮೆರಿಕದ ಕೆಲ ದುಬಾರಿ ಉತ್ಪನ್ನಗಳ ಮೇಲೆ ಭಾರತ ಆಮದು ಸುಂಕ ಇಳಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ.
- ಪರಿಣಾಮವಿಲ್ಲ: ಅಮೆರಿಕದ ಉದ್ದೇಶಿತ ನಿರ್ಧಾರದಿಂದ ಭಾರತದ ರಫ್ತಿನ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ವಾಣಿಜ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಏನಿದು ಜಿಎಸ್ಪಿ?:
- ಅಭಿವೃದ್ಧಿಶೀಲ ದೇಶಗಳ ಆಮದು ಉತ್ಪನ್ನಗಳಿಗೆ ನೆರವು ನೀಡಲು ಆಮದು ಸುಂಕ ವಿನಾಯಿತಿ.
- ವಿದೇಶಿ ಉತ್ಪನ್ನಗಳಿಗೆ ಸುಂಕ ವಿನಾಯಿತಿ ನೀಡಿ ಅಮೆರಿಕದ ಮಾರುಕಟ್ಟೆಯಲ್ಲಿ ಅವಕಾಶ ನೀಡುವುದು.
- ಆದ್ಯತೆಗಳ ಸಾಮಾನ್ಯೀಕೃತ ವ್ಯವಸ್ಥೆ (ಜನರಲೈಸ್ಡ್ ಸಿಸ್ಟಂ ಆಫ್ ಬೆನಿಫಿಶಿಯರೀಸ್- ಜಿಎಸ್ಪಿ) ಯಿಂದ ಭಾರತವನ್ನು ತೆಗೆದು ಹಾಕಲಾಗುವುದು ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿ ತಿಳಿಸಿದೆ.
- ಈ ಕುರಿತು ಅಧಿಸೂಚನೆ ಪ್ರಕಟಿಸಿದ 60 ದಿನಗಳ ವರೆಗೆ ಈಗಿರುವ ವ್ಯವಸ್ಥೆಯೇ ಮುಂದುವರಿಯುತ್ತದೆ. ಬಳಿಕ ಅಧ್ಯಕ್ಷರ ಆದೇಶದ ಮೂಲಕ (ಸುಗ್ರೀವಾಜ್ಞೆ) ಇದನ್ನು ಜಾರಿಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಯುವ ವಿಜ್ಞಾನಿ ಕಾರ್ಯಕ್ರಮ
ಸುದ್ಧಿಯಲ್ಲಿ ಏಕಿದೆ ?ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋ, ದೇಶಾದ್ಯಂತ ಶಾಲಾ ಮಕ್ಕಳಿಗಾಗಿ ಯುವ ವಿಜ್ಞಾನಿ ಕಾರ್ಯಕ್ರಮವನ್ನು ಆರಂಭಿಸಿದೆ.
ಉದ್ದೇಶ
- ಬಾಹ್ಯಾಕಾಶ ಕಾರ್ಯಕ್ರಮಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಇಸ್ರೋದ ವಿಜ್ಞಾನಿಗಳು, ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳ ಬಗ್ಗೆ ಮೂಲ ವಿಷಯಗಳನ್ನು ಈ ಕಾರ್ಯಕ್ರಮದ ವೇಳೆ ತಿಳಿಸಿಕೊಡುತ್ತಾರೆ.
- ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಈ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದ ಈ ವಸತಿ ಸಹಿತ ತರಬೇತಿ ಕಾರ್ಯಕ್ರಮ ಅಂದಾಜು ಎರಡು ವಾರಗಳ ಅವಧಿಯದ್ದಾಗಿದ್ದು, ಬೇಸಿಗೆ ರಜೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು. ನಂತರ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ತರಬೇತಿ ಪಡೆದ ವಿದ್ಯಾರ್ಥಿಗಳ ಪೈಕಿ ಮೂವರನ್ನು ಆಯ್ಕೆ ಮಾಡಲಾಗುವುದು.
- ಈ ಪೈಕಿ ಸಿಬಿಎಸ್ಇ, ಐಸಿಎಸ್ಇ ಹಾಗೂ ರಾಜ್ಯ ಪಠ್ಯ ಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳು ಸೇರಿರುತ್ತಾರೆ. ಆಯ್ಕೆ ಪ್ರಕ್ರಿಯೆ ಕುರಿತಂತೆ ಅನುಸರಿಸಲಾಗುವ ವಿಧಾನಗಳನ್ನು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ತಿಳಿಸಲಾಗಿದೆ.
- ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಪ್ರತಿ ರಾಜ್ಯದಿಂದ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಈ ತಿಂಗಳ ಅಂತ್ಯದ ವೇಳೆಗೆ ಪ್ರಕಟಿಸುವ ನಿರೀಕ್ಷೆ ಇದೆ.