“18 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಆಯುಷ್ಮಾನ್ಗೆ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ
ಸುದ್ಧಿಯಲ್ಲಿ ಏಕಿದೆ ?ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಆರ್ಕೆ) ಯೋಜನೆಯಲ್ಲಿ ಹೆಸರು ನೋಂದಾ ಯಿಸಲು ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತೋರಿರುವ ಸಂಗತಿ ಬೆಳಕಿಗೆ ಬಂದಿದೆ.
- ರಾಜ್ಯದಲ್ಲಿರುವ 26 ಸಾವಿರ ಖಾಸಗಿ ಆಸ್ಪತ್ರೆಗಳ ಪೈಕಿ 397 ಆಸ್ಪತ್ರೆಗಳು ಮಾತ್ರ ಈವರೆಗೆ ಹೆಸರು ನೋಂದಾಯಿಸಿಕೊಂಡಿವೆ.
- ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಈ ಯೋಜನೆಯಲ್ಲಿ ತಲಾ 32 ಆಸ್ಪತ್ರೆಗಳು ನೋಂದಾಯಿಸಿಕೊಂಡರೆ, ಯಾದಗಿರಿ ಮತ್ತು ಕೊಡಗು ವ್ಯಾಪಿಯಲ್ಲಿ ಯಾವುದೇ ಆಸ್ಪತ್ರೆಗಳು ಸೇರಿಲ್ಲ. ಹೈದರಾಬಾದ್, ಕರ್ನಲ್, ಕೊಲ್ಲಾಪುರ, ಮೀರಜ್, ಸಾಂಗ್ಲಿ, ಸೋಲಾಪುರ ವ್ಯಾಪಿಯಲ್ಲಿ 32 ಖಾಸಗಿ ಆಸ್ಪತ್ರೆಗಳು ನೋಂದಾಯಿಸಿಕೊಂಡಿವೆ.
ಏನಿದು ಯೋಜನೆ?:
- ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಕರ್ನಾಟಕದಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ವಿಲೀನಗೊಳಿಸಲಾಗಿದೆ.
- ಹೀಗಾಗಿ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಎಂಬ ಹೆಸರಿನಲ್ಲಿ ಜಾರಿಯಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆ ಜಾರಿಯ ಉಸ್ತುವಾರಿ ವಹಿಸಿದೆ.
- ಇಲ್ಲಿ ಬಿಪಿಎಲ್ ಫಲಾನುಭವಿಗಳಿಗೆ 5 ಲಕ್ಷ ರೂ. ವರೆಗೆ ಮತ್ತು ಎಪಿಎಲ್ ಫಲಾನುಭವಿಗಳಿಗೆ 50 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಒಟ್ಟು 62 ಲಕ್ಷ ಕುಟುಂಬಗಳಿಗೆ ಚಿಕಿತ್ಸಾ ವೆಚ್ಚದ ಶೇ.60 ಪಾಲನ್ನು ಕೇಂದ್ರ ಹಾಗೂ ಶೇ.40 ಪಾಲನ್ನು ರಾಜ್ಯ ಸರ್ಕಾರ ಭರಿಸುತ್ತಿದೆ.
- 19 ಲಕ್ಷ ಎಪಿಎಲ್ ಕುಟುಂಬಗಳಿಗೆ ನೀಡುವ ಶೇ.30 ಹೆಲ್ತ್ ಕೇರ್ ವೆಚ್ಚವನ್ನು ರಾಜ್ಯ ಸರ್ಕಾರ ನೀಡುತ್ತಿದೆ.
ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ
- ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ ಸೇರ್ಪಡೆಗೊಳ್ಳಲು ಖಾಸಗಿ ಆಸ್ಪತ್ರೆಗಳು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಬಡ ರೋಗಿಗಳಿಗೆ ತೊಂದರೆ ಯಾಗುತ್ತಿದೆ. ಹೃದಯಾಘಾತ ಮತ್ತು ಕ್ಯಾನ್ಸರ್ ಸೇರಿ ಸಾಮಾನ್ಯ ಕಾಯಿಲೆಗಳಿಗೆ ಯೋಜನೆ ಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಆದರೆ, ಖಾಸಗಿ ಆಸ್ಪತ್ರೆಗಳ ನಿರಾಸಕ್ತಿಯಿಂದಾಗಿ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ.
ಸೇರ್ಪಡೆಗೆ ನೀತಿ ಸಂಹಿತೆ ಅಡ್ಡಿ
- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಬಿ-ಎಆರ್ಕೆ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳು ಸೇರ್ಪಡೆ ಪ್ರಕ್ರಿಯೆಗೆ ಅಡ್ಡಿಯಾಗಿದೆ.
ಡಿಎಲ್ ನವೀಕರಣಕ್ಕೆ ಎನ್ಒಸಿ ಅಗತ್ಯವಿಲ್ಲ
ಸುದ್ಧಿಯಲ್ಲಿ ಏಕಿದೆ ?ಮುಂದಿನ ದಿನಗಳಲ್ಲಿ ಚಾಲನಾ ಅನುಜ್ಞಾ ಪತ್ರದ (ಡಿಎಲ್-ಡ್ರೖೆವಿಂಗ್ ಲೈಸೆನ್ಸ್) ನವೀಕರಣ ಅಥವಾ ಡಿಎಲ್ನಲ್ಲಿನ ವಿಳಾಸ ಬದಲಾವಣೆಗೆ ಆರ್ಟಿಒಗಳಿಗೆ ಪದೇಪದೆ ಅಲೆದಾಡಬೇಕಾಗಿಲ್ಲ. ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರದ (ಎನ್ಒಸಿ) ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
- ಎಲ್ಲ ರಾಜ್ಯಗಳ ಸಾರಿಗೆ ಇಲಾಖೆ ಈ ಆದೇಶ ಪಾಲಿಸಬೇಕು ಎಂದು ಸೂಚಿಸಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಸುತ್ತೋಲೆ ಹೊರಡಿಸಿದೆ.
- ಜನಸಾಮಾನ್ಯರಿಗೆ ಅನನುಕೂಲ ವಾಗದಂತೆ ಆನ್ಲೈನ್ ಮೂಲಕವೇ ಡಿಎಲ್ ಮಾಹಿತಿ ಪರಿಶೀಲಿಸಲು ಸೂಚಿಸಲಾಗಿದೆ.
ಏಕೆ ಈ ನಿರ್ಣಯ ?
- ಹೆಚ್ಚಿನ ಜನರು ಸ್ವಂತ ಊರಿನ ವ್ಯಾಪ್ತಿಯ ಆರ್ಟಿಒದಲ್ಲಿ ಡಿಎಲ್ ಮಾಡಿಸಿರುತ್ತಾರೆ. ಇತರ ನಗರಕ್ಕೆ ಅಥವಾ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಡಿಎಲ್ ನವೀಕರಣ ಅಥವಾ ವಿಳಾಸ ಬದಲಾವಣೆಗೆ ಆರ್ಟಿಒ ಕಚೇರಿಗೆ ಹೋದಲ್ಲಿ, ಮೊದಲು ಡಿಎಲ್ ಮಾಡಿಸಿದ್ದ ಆರ್ಟಿಒದಿಂದ ಎನ್ಒಸಿ ತರಲು ಸೂಚಿಸಲಾಗುತ್ತಿತ್ತು.
- ಡಿಎಲ್ ಅಸಲಿಯತ್ತು ಮತ್ತು ಡಿಎಲ್ ಮೇಲೆ ಯಾವುದಾದರೂ ಅಪರಾಧ ಕೃತ್ಯ ಜೋಡಣೆಯಾಗಿದೆಯೇ ಎನ್ನುವುದನ್ನು ಪರಿಶೀಲಿಸುವ ಉದ್ದೇಶದಿಂದ ಎನ್ಒಸಿ ಕೇಳಲಾಗುತ್ತಿತ್ತು.
ಸಾರಥಿ ತಂತ್ರಾಂಶ:
- ಪ್ರಸ್ತುತ ದೇಶದ ಎಲ್ಲ ಆರ್ಟಿಒಗಳಲ್ಲಿ ಸಾರಥಿ ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಿ ಕಲಿಕಾ ಚಾಲನಾ ಅನುಜ್ಞಾ ಪತ್ರ (ಎಲ್ಎಲ್ಆರ್) ಹಾಗೂ ಡಿಎಲ್ ನೀಡಲಾಗುತ್ತಿದೆ. ಡಿಎಲ್ ಪಡೆಯುತ್ತಿರುವ ವ್ಯಕ್ತಿಯ ಮಾಹಿತಿ ಆನ್ಲೈನ್ನಲ್ಲೇ ಲಭ್ಯವಾಗುತ್ತಿದೆ. ಹೀಗಿದ್ದಾಗಲೂ ಕೆಲ ರಾಜ್ಯಗಳಲ್ಲಿ ಹಳೇ ಪದ್ಧತಿಯಂತೆ ಎನ್ಒಸಿ ಕೇಳಲಾಗುತ್ತಿದೆ.
- ಇದರಿಂದ ಜನಸಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಹಲವೆಡೆ ಆರ್ಟಿಒಗಳು ಎನ್ಒಸಿ ನೀಡದೇ ಇರುವ ಕಾರಣ ಅರ್ಜಿಗಳು ತಿರಸ್ಕರಿಸುತ್ತಿರುವುದರ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆರ್ಟಿಒ ಅಧಿಕಾರಿಗಳು ಸಾರಥಿ ಡೇಟಾಬೇಸ್ ಮುಖಾಂತರವೇ ಅರ್ಜಿದಾರರ ಮಾಹಿತಿ ಪರಿಶೀಲಿಸಿ ಡಿಎಲ್ ನವೀಕರಣ ಅಥವಾ ವಿಳಾಸ ಬದಲಾವಣೆ ಮಾಡಿಕೊಡಬೇಕು ಎಂದು ಸೂಚಿಸಿದೆ.
ಎಲ್ಲವೂ ಸ್ಮಾರ್ಟ್
- ಕರ್ನಾಟಕದಲ್ಲಿ 2009ರಿಂದ ಗಣೀಕೃತ ದಾಖಲೆ ವಿತರಣೆ ವ್ಯವಸ್ಥೆ ಜಾರಿಯಲ್ಲಿದೆ. ಕಾಗದ ರೂಪದ ಡಿಎಲ್ ಹೊಂದಿದವರು ಡಿಎಲ್ ನವೀಕರಣಕ್ಕೆ ಬಂದ ಸಂದರ್ಭದಲ್ಲಿ ಸ್ಮಾರ್ಟ್ಕಾರ್ಡ್ ಡಿಎಲ್ ನೀಡಲಾಗುತ್ತಿದೆ. ಹೀಗಾಗಿ ಹಳೇ ಡಿಎಲ್ ಮಾಹಿತಿಯೂ ಪ್ರಸ್ತುತ ಡಿಜಿಟಲ್ ಮಾದರಿಯಲ್ಲಿ ಲಭ್ಯವಿದ್ದು, ವಿಳಾಸ ಬದಲಾವಣೆಗೆ ಹೆಚ್ಚಿನ ಅಲೆದಾಟ ತಪ್ಪಲಿದೆ.
ಗಡಿ ಬಳಿ ವಿಕ್ರಮಾದಿತ್ಯ ಸನ್ನದ್ಧ
ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಉತ್ತರ ಭಾಗದ ಅರಬ್ಬಿ ಸಮುದ್ರದಲ್ಲಿ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಪರಮಾಣು ಜಲಾಂತರ್ಗಾಮಿ ಸೇರಿ ನೌಕಾಪಡೆಯ ಹಲವು ಹಡಗುಗಳನ್ನು ನಿಯೋಜಿಸಲಾಗಿದೆ.
- ಯುದ್ಧ ಸನ್ನದ್ಧ ಸ್ಥಿತಿಯ ಭಾಗವಾಗಿ ಕೇರಳದ ಕೊಚ್ಚಿ ತೀರದಲ್ಲಿ ನಡೆಯುತ್ತಿರುವ ‘ಟ್ರಪೋಕ್ಸ್-19(ಥೇಟರ್ ಲೆವೆಲ್ ರೆಡಿನೆಸ್ ಅಂಡ್ ಆಪರೇಷನಲ್ ಎಕ್ಸಸೈಸ್) ಸಮರಾಭ್ಯಾಸದ ಭಾಗವಾಗಿ ಯುದ್ಧ ನೌಕೆಗಳು ನಿಯೋಜನೆಗೊಂಡಿವೆ.
- ಟ್ರಾಪೆಕ್ಸ್ 19ನ 60 ಶಿಪ್ಗಳು, ಭಾರತೀಯ ಕರಾವಳಿ ಭದ್ರತಾ ಪಡೆಯ 12 ಹಡಗುಗಳು, 60 ವಿಮಾನಗಳನ್ನು ಅರಬ್ಬಿಸಮುದ್ರದಲ್ಲಿ ನಿಯೋಜಿಸಲಾಗಿದೆ.
ಹಿನ್ನಲೆ
- ಪುಲ್ವಾಮಾದಲ್ಲಿ ಸಿಆರ್ಪಿಎಫ್ ವಾಹನದ ಮೇಲೆ ನಡೆದ ದಾಳಿ, ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆ ನಡೆಸಿದ ಏರ್ಸ್ಟ್ರೈಕ್ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ದಾಳಿಯ ಬಳಿಕ ಪಾಕಿಸ್ತಾನ ಕೂಡ ಪ್ರತಿದಾಳಿ ನಡೆಸಲು ಮಾಡಿದ ಯತ್ನಗಳು ವಿಫಲವಾಗಿವೆ.
- ಜಾಗತಿಕ ಒತ್ತಡ ಮತ್ತು ಭಾರತಕ್ಕಿರುವ ಬೆಂಬಲ ಪಾಕಿಸ್ತಾನವನ್ನು ಸುಮ್ಮನಿರುವಂತೆ ಮಾಡಿದೆ. ಆದರೆ ಪಾಕಿಸ್ತಾನ ದಾಳಿಗೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದೆ.
- ಈ ಹಿನ್ನೆಲೆಯಲ್ಲಿ ಏರ್ಸ್ಟ್ರೈಕ್ ನಡೆದ ಮರುದಿನ ಜಂಟಿಸುದ್ದಿಗೋಷ್ಠಿ ನಡೆಸಿದ ಭಾರತೀಯ ಸೇನಾ ಪಡೆ ಮುಖ್ಯಸ್ಥರು ಎಲ್ಲ ರೀತಿಯಲ್ಲೂ ದಾಳಿಯನ್ನು ಎದುರಿಸಲು ಸಿದ್ಧರಿರುವುದಾಗಿ ಘೋಷಿಸಿದ್ದರು. ಇದರ ಭಾಗವಾಗಿಯೇ ನೌಕಾಪಡೆ ಅರಬ್ಬಿಸಮುದ್ರದಲ್ಲಿ ಹಡಗುಗಳನ್ನು ನಿಯೋಜಿಸಿದೆ.
ಐಎನ್ಎಸ್ ವಿಕ್ರಮಾದಿತ್ಯ
- ಐಎನ್ಎಸ್ ವಿಕ್ರಮಾದಿತ್ಯ ದೇಶದ ಅತ್ಯಂತ ಶಕ್ತಿಶಾಲಿ ವಿಮಾನವಾಹಕ ನೌಕೆ.
- ಇದನ್ನು 1987 ರಲ್ಲಿ ನಿರ್ಮಿಸಲಾಯಿತು ಮತ್ತು ಸೋವಿಯತ್ ನೇವಿ (ಬಕು ಎಂದು ಹೆಸರಿಸಲಾಯಿತು) ಸೇವೆ ಸಲ್ಲಿಸಿದ್ದರು. ಇದನ್ನು ನಂತರ ಅಡ್ಮಿರಲ್ ಗೋರ್ಶ್ಕೊವ್ ರನ್ನು ರಷ್ಯಾದ ನೌಕಾಪಡೆಯ ಅಡಿಯಲ್ಲಿ ಮರುನಾಮಕರಣ ಮಾಡಲಾಯಿತು.
- ಭಾರತೀಯ ನೌಕಾಪಡೆ 2004 ರಲ್ಲಿ ಹಡಗು ಖರೀದಿಸಿ ನವೆಂಬರ್ 2013 ರಲ್ಲಿ ರಷ್ಯಾದ ಸೆವೆರೊಡ್ವಿನ್ಸ್ಕ್ನಲ್ಲಿ ಕಾರ್ಯಾರಂಭ ಮಾಡಿತು.
- ಮಿಗ್ –29 ಕೆ, ಕಾಮೊವ್-28, ಕಾಮೊವ್ –31, ಎಎಲ್ಹೆಚ್-ಧ್ರವ್ ಮತ್ತು ಚೇತಕ್ ಹೆಲಿಕಾಪ್ಟರ್ಗಳನ್ನು ಒಳಗೊಂಡಿರುವ 30 ಕ್ಕೂ ಹೆಚ್ಚಿನ ವಿಮಾನಗಳನ್ನು ಇದು ಸಾಗಿಸಬಲ್ಲದು.
- ಇದು ಇಸ್ರೇಲ್ ಜಂಟಿ ಅಭಿವೃದ್ಧಿಯ ಅಡಿಯಲ್ಲಿ ಒಂದು ಬರಾಕ್ ಕ್ಷಿಪಣಿ ವ್ಯವಸ್ಥೆಯನ್ನು ಮರುರೂಪಿಸಲಾಯಿತು.
- ಇದು ಕರ್ನಾಟಕದ ಕಾರ್ವಾರ್ನಲ್ಲಿನ ತನ್ನ ಗೃಹ ಬಂದರುಗಳಲ್ಲಿದೆ.
ಥಿಯೇಟರ್ ಮಟ್ಟ ರೆಡಿನೆಸ್ ಮತ್ತು ಆಪರೇಷನಲ್ ವ್ಯಾಯಾಮ (TROPEX)
- ಇದು ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ನ ಭಾಗವಹಿಸುವಿಕೆಯನ್ನು ಒಳಗೊಂಡ ಅಂತರ-ಸೇನಾ ಮಿಲಿಟರಿ ವ್ಯಾಯಾಮವಾಗಿದೆ. ಸಾಮಾನ್ಯವಾಗಿ ವ್ಯಾಯಾಮವು ಪ್ರತಿ ವರ್ಷದ ಆರಂಭದಲ್ಲಿ ಪ್ರಾರಂಭವಾಗುತ್ತದೆ ಮತ್ತು ಒಂದು ತಿಂಗಳು ಇರುತ್ತದೆ. ಇದನ್ನು ಸಾಮಾನ್ಯವಾಗಿ ಮೂರು ಪದಗುಚ್ಛಗಳಲ್ಲಿ ನಡೆಸಲಾಗುತ್ತದೆ: ಸ್ವತಂತ್ರ ಕಾರ್ಯದ ಹಂತ, ಜಂಟಿ ಕೆಲಸದ ಹಂತ ಮತ್ತು ಯುದ್ಧತಂತ್ರದ ಹಂತ.
- ಇಂಡಿಯನ್ ಏರ್ ಫೋರ್ಸ್, ಇಂಡಿಯನ್ ಆರ್ಮಿ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಸೇರಿದಂತೆ ಭಾರತೀಯ ನೌಕಾ ಘಟಕಗಳ ಕದನ ಸಿದ್ಧತೆಯನ್ನು ಪರೀಕ್ಷಿಸಲು ಈ ವ್ಯಾಯಾಮ ವಿನ್ಯಾಸಗೊಳಿಸಲಾಗಿದೆ. ಸಂಕೀರ್ಣ ಪರಿಸರದಲ್ಲಿ ಪರಸ್ಪರ ಕಾರ್ಯಾಚರಣೆಯನ್ನು ಮತ್ತು ಜಂಟಿ ಕಾರ್ಯಗಳನ್ನು ಬಲಪಡಿಸಲು ಸಹ ಇದು ಪ್ರಯತ್ನಿಸುತ್ತದೆ.
- 2005 ರ ಆರಂಭದಲ್ಲಿ, 2006 ರ ಹೊರತುಪಡಿಸಿ ವ್ಯಾಯಾಮವು ವಾರ್ಷಿಕವಾಗಿ ನಡೆಯುತ್ತದೆ. 2017 ರಲ್ಲಿ ವ್ಯಾಯಾಮದ ಕೊನೆಯ ಆವೃತ್ತಿಯನ್ನು ನಡೆಸಲಾಯಿತು.
ಐಡಿಬಿಐ ಬ್ಯಾಂಕ್ ಹೆಸರು ಸದ್ಯಕ್ಕೆ ಬದಲಾಗದು
ಸುದ್ಧಿಯಲ್ಲಿ ಏಕಿದೆ ?ಐಡಿಬಿಐ ಬ್ಯಾಂಕ್ನ ಹೆಸರು ಬದಲಿಸಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಒಲವು ತೋರಿಸುತ್ತಿಲ್ಲ. ಹೀಗಾಗಿ, ಬ್ಯಾಂಕ್ನ ಹೆಸರು ಬದಲಿಸುವ ಪ್ರಕ್ರಿಯೆ ಇನ್ನಷ್ಟು ತಡವಾಗಲಿದೆ.
ಹಿನ್ನಲೆ
- ನಷ್ಟದಲ್ಲಿ ಮುಳುಗಿದ್ದ ಐಡಿಬಿಐ ಬ್ಯಾಂಕ್ನಲ್ಲಿ‡ನ ಹೆಚ್ಚಿನ ಷೇರುಗಳನ್ನು ಭಾರತೀಯ ಜೀವವಿಮಾ ನಿಗಮ (ಎಲ್ಐಸಿ) ಖರೀದಿಸಿದ್ದು, ಬ್ಯಾಂಕ್ನ ಹೆಸರು ಬದಲಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ‘ಎಲ್ಐಸಿ ಐಡಿಬಿಐ ಬ್ಯಾಂಕ್’ ಅಥವಾ ‘ಎಲ್ಐಸಿ ಬ್ಯಾಂಕ್’ ಎಂಬುದಾಗಿ ಹೆಸರು ಬದಲಿಸಲು ಐಡಿಬಿಐ ಬ್ಯಾಂಕ್ನ ಆಡಳಿತ ಮಂಡಳಿ ಕಳೆದ ತಿಂಗಳು ಪ್ರಸ್ತಾವನೆ ಸಿದ್ಧಪಡಿಸಿತ್ತು.
- ಆದರೆ, ಈ ಬಗ್ಗೆ ಆರ್ಬಿಐ ಒಲವು ತೋರಿಸಿಲ್ಲ. ಈ ವಿಷಯದಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂದು ಮೂಲಗಳು ತಿಳಿಸಿವೆ. ಆರ್ಬಿಐ ಅನುಮೋದನೆಗೂ ಮೊದಲಿಗೆ ಹೆಸರು ಬದಲಾವಣೆಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಷೇರುದಾರರು, ಷೇರು ವಿನಿಮಯ ಕೇಂದ್ರಗಳು ಮತ್ತಿತರ ಸಂಸ್ಥೆಗಳ ಅನುಮೋದನೆ ಬೇಕಾಗಿದೆ.
- ಕಳೆದ ಜನವರಿಯಲ್ಲಿ ಐಡಿಬಿಐನಲ್ಲಿನ ಶೇ.51ರಷ್ಟು ಷೇರುಗಳನ್ನು ಖರೀದಿಸಿದ್ದ ಎಲ್ಐಸಿ, ಬ್ಯಾಂಕ್ನ ನಿಯಂತ್ರಣವನ್ನು ತನ್ನದಾಗಿಸಿಕೊಂಡಿತ್ತು. ಆ ಮೂಲಕ 60 ವರ್ಷಗಳ ಸರಕಾರಿ ಸ್ವಾಮ್ಯದ ಈ ವಿಮಾ ಸಂಸ್ಥೆಯು ಬ್ಯಾಂಕಿಂಗ್ ವಲಯಕ್ಕೆ ಪ್ರವೇಶ ಪಡೆದಿತ್ತು.
- ಕಳೆದ ವರ್ಷದ ಆಗಸ್ಟ್ನಲ್ಲಿಯೇ ಐಡಿಬಿಐ ಸ್ವಾಧೀನಕ್ಕೆ ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿತ್ತು. 2018ರ ಮೂರನೇ ತ್ರೈಮಾಸಿಕದಲ್ಲಿ ಐಡಿಬಿಐ ಬ್ಯಾಂಕ್ನ ನಷ್ಟವು ಮೂರು ಪಟ್ಟು ಏರಿಕೆಯಾಗಿ 4,185 ಕೋಟಿ ರೂ.ಗೆ ಏರಿಕೆಯಾಗಿತ್ತು.
- ವಸೂಲಾಗದ ಸಾಲಗಳ ಪ್ರಮಾಣ ಏರುತ್ತಿರುವುದು ಬ್ಯಾಂಕ್ನ ನಷ್ಟಕ್ಕೆ ಮೂಲ ಕಾರಣ. ಇದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ಬ್ಯಾಂಕ್ 1,524 ಕೋಟಿ ರೂ. ನಷ್ಟ ದಾಖಲಿಸಿತ್ತು.
ಐಡಿಬಿಐ ಬ್ಯಾಂಕ್
- ಇದು ಮುಂಬೈಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಕರೆಯಲಾಗುವ ಭಾರತೀಯ ಸರ್ಕಾರದ ಸ್ವಾಮ್ಯದ ಹಣಕಾಸು ಸೇವಾ ಸಂಸ್ಥೆ. 1964 ರಲ್ಲಿ ಪಾರ್ಲಿಮೆಂಟ್ ಆಕ್ಟ್ ಮೂಲಕ ಸ್ಥಾಪನೆಯಾಯಿತು. ಇದು ಭಾರತೀಯ ಉದ್ಯಮದ ಅಭಿವೃದ್ಧಿಗೆ ಕ್ರೆಡಿಟ್ ಮತ್ತು ಇತರ ಹಣಕಾಸು ಸೌಲಭ್ಯಗಳನ್ನು ಒದಗಿಸಿತು.
- ಅದರ ಮೂಲ ಅವತಾರ, ಇಂಡಿಯಾ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ (ಐಡಿಬಿಐ) ಅನ್ನು ಜುಲೈ 1964 ರಲ್ಲಿ ಪ್ರಾಜೆಕ್ಟ್ ಫೈನಾನ್ಸ್ ಇನ್ಸ್ಟಿಟ್ಯೂಟ್ ಆಗಿ ಸ್ಥಾಪಿಸಲಾಯಿತು. 1990 ರ ದಶಕದ ಆರಂಭದವರೆಗೆ ಐಡಿಯಬಿಐ ದೀರ್ಘಾವಧಿಯ ಸಾಲವನ್ನು ಸಮಂಜಸ ದರದಲ್ಲಿ ಸಹಾಯ ಮಾಡಲು ಸರಕಾರದಿಂದ ಅಗ್ಗದ ದೀರ್ಘಕಾಲೀನ ನಿಧಿಗಳನ್ನು ಪಡೆಯುವ ಸವಲತ್ತುವನ್ನು ಪಡೆದುಕೊಂಡಿರುವ ಇದು ಅತೀ ದೊಡ್ಡ ಪದ ಸಾಲ ಸಂಸ್ಥೆಯಾಗಿದೆ.
- ಅಲ್ಲದೆ, ಅದರ ಲಾಭದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಕೆಲವು ವರ್ಷಗಳ ನಂತರ ಕಂಪನಿಯು ತನ್ನ ಸಾಲದಲ್ಲಿ 20% ನಷ್ಟು ಭಾಗವನ್ನು ಸಮಾನವಾಗಿ ಇಕ್ವಿಟಿಯನ್ನಾಗಿ ಪರಿವರ್ತಿಸುತ್ತದೆ.
ಭಾರತದ ಕೈಯಿಂದ ಕುಸ್ತಿ ಆತಿಥ್ಯ ಕಸಿದ ವಿಶ್ವ ಕುಸ್ತಿ ಒಕ್ಕೂಟ
ಸುದ್ಧಿಯಲ್ಲಿ ಏಕಿದೆ ? ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಘರ್ಷದ ಹಿನ್ನೆಲೆಯಲ್ಲಿ ವಿಶ್ವ ಕುಸ್ತಿ ಒಕ್ಕೂಟ ಭಾರತದ ಕೈಯಿಂದ ಜೂನಿಯರ್ ಏಷ್ಯಾ ಕುಸ್ತಿ ಚಾಂಪಿಯನ್ಷಿಪ್ ಆತಿಥ್ಯ ಕಸಿದುಕೊಳ್ಳುವ ಮೂಲಕ ನಿಷ್ಠುರ ನಿಲುವು ತೆಗೆದುಕೊಂಡಿದೆ.
- ಭಾರತೀಯ ಕುಸ್ತಿ ಸಂಸ್ಥೆಯೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ತನ್ನವ್ಯಾಪ್ತಿಗೆ ಬರುವ ಎಲ್ಲ ಕುಸ್ತಿ ಸಂಸ್ಥೆಗಳಿಗೆ ಸೂಚನೆ ರವಾನಿಸಿದ ಕೆಲವೇ ದಿನಗಳಲ್ಲಿ ವಿಶ್ವ ಕುಸ್ತಿ ಒಕ್ಕೂಟ ಈ ನಿಲುವು ತೆಗೆದುಕೊಂಡಿದೆ.
ಹಿನ್ನಲೆ
- ಚಾಂಪಿಯನ್ಷಿಪ್ ಆತಿಥ್ಯದಿಂದ ಲೆಬನಾನ್ ಹಿಂದೆ ಸರಿದ ಹಿನ್ನೆಲೆಯಲ್ಲಿ, ಪರಿಷ್ಕೃತ ವೇಳಾಪಟ್ಟಿಯನ್ವಯ ಮುಂಬರುವ ಜುಲೈನಲ್ಲಿ ಜೂನಿಯರ್ ಏಷ್ಯಾ ಕುಸ್ತಿ ಚಾಂಪಿಯನ್ಷಿಪ್ ಆಯೋಜಿಸಲು ಭಾರತ ಒಪ್ಪಿಗೆ ಸೂಚಿಸಿತ್ತು.
- ಕಳೆದ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಪಾಕ್ ಬೆಂಬಲಿತ ಜೈಷೆ ಮೊಹಮ್ಮದ್ ಉಗ್ರರಿಂದ ನಡೆದ ದಾಳಿಯ ಹಿನ್ನೆಲೆಯಲ್ಲಿ, ದಿಲ್ಲಿ ಶೂಟಿಂಗ್ ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಹೊರಟುನಿಂತಿದ್ದ ಪಾಕಿಸ್ತಾನದ ಮೂವರು ಸದಸ್ಯರ ಶೂಟಿಂಗ್ ನಿಯೋಗಕ್ಕೆ ವೀಸಾ ನೀಡಲು ಭಾರತ ನಿರಾಕರಿಸಿತ್ತು.
- ಅದಾದ ಬಳಿಕ, ಬಹುರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯ ನೀಡಬೇಕಿದ್ದರೆ, ಭಾರತ ಲಿಖಿತ ಭರವಸೆ ನೀಡಬೇಕು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ತಾಕೀತು ಮಾಡಿತ್ತು. ಆದರೆ, ಇದೀಗ ವಿಶ್ವ ಕುಸ್ತಿ ಒಕ್ಕೂಟ ಏಕಾಏಕೀ ಈ ನಿರ್ಧಾರ ತೆಗೆದುಕೊಂಡಿರುವುದು ಭಾರತದ ಪಾಲಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.
ಲೋಕಪಾಲ ಸಾಕಾರ
ಸುದ್ಧಿಯಲ್ಲಿ ಏಕಿದೆ ?ಲೋಕಪಾಲ ನೇಮಕ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ಅಂತಿಮ ಗಡುವು ಮುಕ್ತಾಯದ ಬೆನ್ನಲ್ಲೇ ದೇಶದ ಮೊದಲ ಲೋಕಪಾಲರಾಗಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಶುಕ್ರವಾರ ನ್ಯಾ. ಘೋಷ್ ಅವರ ಹೆಸರನ್ನು ಲೋಕಪಾಲ ಹುದ್ದೆಗೆ ಅಂತಿಮಗೊಳಿಸಿರುವುದಾಗಿ ತಿಳಿದುಬಂದಿದೆ. ಘೋಷ್ ಜತೆ ಲೋಕಪಾಲ ಕೇಂದ್ರಕ್ಕೆ 8 ಸದಸ್ಯರನ್ನು ಸಮಿತಿ ಆಯ್ಕೆ ಮಾಡಿದೆ.
- ಓರ್ವ ಮಹಿಳಾ ಮಾಜಿ ನ್ಯಾಯಮೂರ್ತಿ ಸೇರಿ ಹೈಕೋರ್ಟ್ನ ನಾಲ್ವರು ಮಾಜಿ ನ್ಯಾಯಮೂರ್ತಿಗಳು, ಕೇಂದ್ರದ ನಾಲ್ವರು ಮಾಜಿ ಸರ್ಕಾರಿ ಅಧಿಕಾರಿಗಳು ಲೋಕಪಾಲ ಕೇಂದ್ರದ ಸದಸ್ಯರಾಗಿದ್ದಾರೆ
- ಲೋಕಪಾಲ್ ಅಧಿಕಾರಾವಧಿ 4 ವರ್ಷ ಇರಲಿದ್ದು, 2017ರಲ್ಲಿ ಸುಪ್ರೀಂ ಕೋರ್ಟ್ನಿಂದ ನ್ಯಾ, ಘೋಷ್ ಅವರು ನಿವೃತ್ತಿ ಹೊಂದಿದ್ದರು. ಸದ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC)ದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಯಾರೀ ಲೋಕಪಾಲ?
- ಸರ್ಕಾರಿ ಸೇವೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಮತ್ತು ದುರಾಡಳಿತದ ಪ್ರಕರಣಗಳ ಮೇಲೆ ನಿಗಾ ಇಡಲು 2013ರಲ್ಲಿ ರಚನೆಯಾದ ಲೋಕಪಾಲ ಕಾಯ್ದೆ ಅನ್ವಯ ಕೇಂದ್ರ ಸರ್ಕಾರದ ಮಟ್ಟದಲ್ಲಿ ಲೋಕಪಾಲರಿರುತ್ತಾರೆ. ಅವರ ಅಧೀನದಡಿ ರಾಜ್ಯಗಳಲ್ಲಿ ಲೋಕಾಯುಕ್ತರಿರುತ್ತಾರೆ.
ಜಯಾ ಪ್ರಕರಣದ ಖ್ಯಾತಿ
- ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿ ಆಗಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾರನ್ನು ಅಪರಾಧಿ ಎಂದು ನ್ಯಾ. ಘೋಷ್ ತೀರ್ಪು ನೀಡಿದ್ದರು.
ಲೋಕಪಾಲರ ಪವರ್
# ಯಾವುದೇ ಸರ್ಕಾರಿ ಸೇವೆಯಲ್ಲಿರುವ ನೌಕರ, ಸಿಬ್ಬಂದಿ, ಅಧಿಕಾರಿ, ಶಾಸಕ, ಸಂಸದರು ಭ್ರಷ್ಟಾಚಾರ ಅಥವಾ ದುರಾಡಳಿತ ನಡೆಸಿರುವ ಬಗ್ಗೆ ಮೇಲ್ನೋಟಕ್ಕೆ ಸಾಬೀತಾಗುವ ಸಾಕ್ಷ್ಯವಿದ್ದಲ್ಲಿ ಲೋಕಪಾಲರು ಸಮನ್ಸ್ ಜಾರಿಗೊಳಿಸಬಹುದು. ಬಳಿಕ ಆರೋಪಿಯನ್ನು ವಿಚಾರಣೆಗೆ ಒಳಪಡಿಸಬಹುದು.
# ಸಿಬಿಐ ಅಥವಾ ಇತರ ತನಿಖಾ ಸಂಸ್ಥೆಗಳು ಆರೋಪಿ ವಿರುದ್ಧ ತನಿಖೆ ಆರಂಭಿಸಿದ್ದರೂ ಲೋಕಪಾಲರು ನೀಡಿದ ಸಮನ್ಸ್ಗೆ ಆರೋಪಿ ಉತ್ತರಿಸಬೇಕಾಗುತ್ತದೆ.
# ಲೋಕಪಾಲರು ವಹಿಸಿದ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯನ್ನು ಲೋಕಪಾಲರ ಅನುಮತಿ ಇಲ್ಲದೆಯೇ ವರ್ಗಾಯಿಸುವಂತಿಲ್ಲ.
# ಲೋಕಪಾಲ, ಲೋಕಾಯುಕ್ತರು ಸೂಚಿಸಿದ ತನಿಖೆ ಆರು ತಿಂಗಳಲ್ಲಿ ಪೂರ್ಣಗೊಳ್ಳಬೇಕು.
# ಲೋಕಪಾಲ, ಲೋಕಾಯುಕ್ತರು ಸೂಚಿಸಿದ ತನಿಖಾ ಪ್ರಕರಣಗಳ ವಿಚಾರಣೆ ವಿಶೇಷ ಕೋರ್ಟ್ಗಳಲ್ಲಿ ನಡೆಯಲಿದೆ.
# ದುರುದ್ದೇಶಪೂರಿತ ಮತ್ತು ಸುಳ್ಳು ದೂರುಗಳನ್ನು ದಾಖಲಿಸುವವರಿಗೆ 2 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು.
# ವಾರ್ಷಿಕ 10 ಲಕ್ಷ ರೂ.ಗಿಂತ ಅಧಿಕ ವಿದೇಶಿ ದೇಣಿಗೆ ಸ್ವೀಕರಿಸುವ ಸರ್ಕಾರೇತರ ಸಂಸ್ಥೆಗಳ ಸಿಬ್ಬಂದಿ ವಿರುದ್ಧದ ಆರೋಪಗಳ ತನಿಖೆಗೂ ಸೂಚಿಸಬಹುದಾಗಿದೆ.