“28 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮೂರು ನಾಟಕಗಳಿಗೆ ವಿಶ್ವದಾಖಲೆ ಗರಿ
ಸುದ್ಧಿಯಲ್ಲಿ ಏಕಿದೆ ?ವಿಶ್ವ ರಂಗಭೂಮಿ ದಿನವಾದ 27 ಮಾರ್ಚ್ ಕನ್ನಡ ರಂಗಭೂಮಿ ಒಂದೇ ವೇದಿಕೆಯಲ್ಲಿ 3 ವಿಶ್ವದಾಖಲೆ ಬರೆದಿದೆ. ಡಾ. ಎಸ್.ಎಲ್.ಎನ್. ಸ್ವಾಮಿ ನಿರ್ದೇಶನದಲ್ಲಿ ಸುದೀರ್ಘ ಏಕವ್ಯಕ್ತಿ ನಾಟಕ, 23 ಸೆಕೆಂಡ್ಗಳ ಅತಿಚಿಕ್ಕ ನಾಟಕ ಹಾಗೂ 9 ನಾಟಕಗಳ ಗುಚ್ಛ ಪ್ರದರ್ಶನ ಕಂಡವು.
- ಈ ಹಿಂದೆ ಸುದೀರ್ಘ ಏಕವ್ಯಕ್ತಿ ಮಹಿಳಾ ನಾಟಕ ‘ಜನಕ ಜಾತೆ ಜಾನಕಿ’ಯನ್ನು ರಚಿಸಿ, ನಿರ್ದೇಶಿಸುವ ಮೂಲಕ ರಂಗಭೂಮಿ ದಿಗ್ಗಜರ ಮೆಚ್ಚುಗೆಗೆ ಪಾತ್ರವಾಗಿದ್ದ ಡಾ. ಸ್ವಾಮಿ, ಇದೀಗ ‘ದಶಾನನ’ ನಾಟಕದ ಮೂಲಕ ಆ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿದರು. ಅದೇ ರೀತಿ, ‘ನವರಂಗ’ ಹಾಗೂ ‘ದಮನ’ ನಾಟಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಪಟ್ಟಿ ಸೇರಿದ್ದು, ಪ್ರಮಾಣಪತ್ರ ವಿತರಿಸಲಾಯಿತು.
ವಿಶ್ವ ರಂಗಭೂಮಿ ದಿನ
- ರಂಗಭೂಮಿ ಕಲೆಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ, ರಂಗಭೂಮಿಯು ಮನರಂಜನೆಯ ಕ್ಷೇತ್ರದಲ್ಲಿ ಮತ್ತು ಜನರ ಜೀವನದಲ್ಲಿ ತೆರೆದುಕೊಳ್ಳುವ ಬದಲಾವಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ .
ವಿಶ್ವ ರಂಗಭೂಮಿ ದಿನದ ಇತಿಹಾಸ
- ಅಂತಾರಾಷ್ಟ್ರೀಯ ಥಿಯೇಟರ್ ಇನ್ಸ್ಟಿಟ್ಯೂಟ್ (ಐಟಿಐ) ವಿಶ್ವದಾದ್ಯಂತ ಥಿಯೇಟರ್ನ ಮೌಲ್ಯ ಮತ್ತು ಮಹತ್ವವನ್ನು ಸಾರಲು ವಿಶ್ವ ಥಿಯೇಟರ್ ದಿನವನ್ನು ಆಚರಿಸಲು ವಾರ್ಷಿಕ ಸಂದೇಶವನ್ನು ಆಯೋಜಿಸುತ್ತದೆ, ಇದು 1961 ರಲ್ಲಿ ಪ್ರಾರಂಭವಾಯಿತು.
- ಈ ದಿನ, ಐಟಿಐನಿಂದ ಆಯ್ಕೆಯಾದ ಪ್ರಸಿದ್ಧ ರಂಗಭೂಮಿ ಪ್ರದರ್ಶಕರು , ಥಿಯೇಟರ್ ಮತ್ತು ಅದರ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ .
- 1962 ರಲ್ಲಿ ಮೊದಲ ಸಂದೇಶವನ್ನು ಜೀನ್ ಕೊಕ್ಟೌ ಅವರು ಮಾತನಾಡಿದರು. ಈ ಸಂದೇಶವು 50 ಕ್ಕಿಂತಲೂ ಹೆಚ್ಚು ಭಾಷೆಗಳಿಗೆ ಭಾಷಾಂತರಿಸಲಾಗಿದೆ ಮತ್ತು ನೂರಾರು ಪತ್ರಿಕೆಗಳಲ್ಲಿ ಮುದ್ರಿತವಾಗಿದೆ ಎಂದು ತಿಳಿದಿರಲಿ. ಹಲವಾರು ಸಂಸ್ಥೆಗಳ ಮೂಲಕ ಈ ಸಂದೇಶವನ್ನು ಪ್ರಪಂಚದ ಎಲ್ಲಾ ಮೂಲೆಗಳಿಗೆ ಪ್ರಸಾರ ಮಾಡಲಾಯಿತು.
- ಐಟಿಐ ಪ್ರಪಂಚದಾದ್ಯಂತ 85 ಕ್ಕೂ ಹೆಚ್ಚಿನ ಕೇಂದ್ರಗಳನ್ನು ಹೊಂದಿದೆ; ಇದು ಕಾಲೇಜುಗಳು, ಶಾಲೆಗಳು, ರಂಗಭೂಮಿ ವೃತ್ತಿಪರರು ಈ ದಿನವನ್ನು ಆಚರಿಸಲು ಪ್ರೋತ್ಸಾಹಿಸುತ್ತದೆ.
ಮಿಷನ್ ಶಕ್ತಿ
ಸುದ್ಧಿಯಲ್ಲಿ ಏಕಿದೆ ?ಅಂತರಿಕ್ಷದಲ್ಲಿರುವ ಉಪಗ್ರಹಗಳನ್ನು ಹೊಡೆದುರುಳಿಸುವ ಮಿಷನ್ ಶಕ್ತಿ ಹೆಸರಿನ ಎ-ಸ್ಯಾಟ್ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಮೂಲಕ ಅಮೆರಿಕ, ರಷ್ಯಾ ಹಾಗೂ ಚೀನಾ ನಂತರ ಈ ತಂತ್ರಜ್ಞಾನ ಹೊಂದಿರುವ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ನಮ್ಮ ದೇಶ ಪಾತ್ರವಾಗಿದೆ.
- ಎ-ಸ್ಯಾಟ್ (ಉಪಗ್ರಹ ನಿರೋಧಕ) ಕ್ಷಿಪಣಿ ಮೂಲಕ ಭೂಮಿಯ ಕೆಳ ಕಕ್ಷೆಯಲ್ಲಿದ್ದ ಉಪಗ್ರಹವನ್ನು ಹೊಡೆದುರುಳಿಸಲಾಗಿದೆ. ಕ್ಷಿಪಣಿ ಉಡಾವಣೆಗೊಂಡ 3 ನಿಮಿಷದಲ್ಲಿ ಈ ಕಾರ್ಯ ನೆರವೇರಿದೆ.
- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಇಸ್ರೋ ಜಂಟಿಯಾಗಿ ‘ಮಿಷನ್ ಶಕ್ತಿ’ ಹೆಸರಿನಲ್ಲಿ ಈ ಪ್ರಯೋಗ ನಡೆಸಿವೆ.
ಎ-ಸ್ಯಾಟ್ ಎಂದರೇನು?
- ಆ್ಯಂಟಿ– ಸ್ಯಾಟಲೈಟ್ ಅಥವಾ ಉಪಗ್ರಹ ವಿರೋಧಿ ಕ್ಷಿಪಣಿ ಪ್ರಯೋಗ. ಸಂಪೂರ್ಣ ದೇಶಿ ತಂತ್ರಜ್ಞಾನವಾದ ಇದನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಗೊಳಿಸಿ ಪ್ರಯೋಗಿಸಿದವರು ರಕ್ಷಣಾ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ). ಇದರ ಪ್ರಯೋಗಕ್ಕೆ ಅತ್ಯಂತ ಉನ್ನತವಾದ ತಂತ್ರಜ್ಞಾನ ಮತ್ತು ನಿಖರತೆ ಅಗತ್ಯವಿದೆ.
- ಇದರ ಮೂಲಕ ಭಾರತ ಅವಧಿ ಮುಗಿದ ತನ್ನದೇ ಉಪಗ್ರಹವನ್ನು, ಹಾಗೆಯೇ ತನ್ನ ಭದ್ರತೆಗೆ ಆತಂಕಕಾರಿಯಾದ ಇತರ ದೇಶಗಳ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯ ಗಳಿಸಿದೆ. ಇಲ್ಲಿ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಇಂಟರ್ಸೆಪ್ಟರ್ನ್ನು ಇಲ್ಲಿ ಬಳಸಲಾಯಿತು. ವೈರಿ ಉಪಗ್ರಹವನ್ನು ಕೆಲಸ ಮಾಡದಂತೆ ಮಾಡುವ ಜಾಮಿಂಗ್ ತಂತ್ರಜ್ಞಾನವೂ ಇದೆ. ನಿನ್ನೆ ಬಳಸಲಾದ ತಂತ್ರಜ್ಞಾನ ನಿರ್ದಿಷ್ಟವಾಗಿ ‘ಕೈನೆಟಿಕ್ ಕಿಲ್‘ ಅಂದರೆ ಸಂಚಾರಿ ಉಪಗ್ರಹ ನಾಶಪಡಿಸುವ ವರ್ಗದ್ದು.
ಎ ಸ್ಯಾಟ್ ಕ್ಷಿಪಣಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
- ಅಂತರಿಕ್ಷದಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸಲು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) 3 ಹಂತದ ಬಿಎಂಡಿ ಇಂಟರ್ಸೆಪ್ಟರ್ ಮಿಸೈಲ್ ಅನ್ನು ಅಭಿವೃದ್ಧಿ ಪಡಿಸಿದೆ. ಮೊದಲಿಗೆ ಭೂಮಿಯ ಮೇಲಿರುವ ರೇಡಾರ್ಗಳು ಉಪಗ್ರಹವನ್ನು ಗುರುತಿಸುತ್ತವೆ.
- ಗುರಿ ನಿಗದಿಯಾದ ನಂತರ ಕ್ಷಿಪಣಿ ಉಡಾವಣೆಗೊಳ್ಳುತ್ತದೆ. ಕ್ಷಿಪಣಿ ಉಪಗ್ರಹದ ಸಮೀಪಕ್ಕೆ ತೆರಳಿ ಮೇಲ್ಭಾಗದಲ್ಲಿ ಹೊದಿಸಿರುವ ಶಾಖ ನಿರೋಧಕ ಕವಚ ತೆರೆದುಕೊಳ್ಳುವವರೆಗೂ ರೇಡಾರ್ಗಳು ಕ್ಷಿಪಣಿಗೆ ಪಥ ನಿರ್ದೇಶನ ಮಾಡುತ್ತವೆ. ಆ ನಂತರ ಕ್ಷಿಪಣಿಯ ಅಂತಿಮ ಹಂತದಲ್ಲಿರುವ ಪಥ ನಿರ್ದೇಶಕ ವ್ಯವಸ್ಥೆ ಬಳಸಿಕೊಂಡು ಉಪಗ್ರಹವನ್ನು ಹೊಡೆದುರುಳಿಸುತ್ತದೆ.
ಕ್ಷಿಪಣಿಗೆ ಗುರಿಯಾದ ಉಪಗ್ರಹ ಯಾವುದು?
- ಎ-ಸ್ಯಾಟ್ ಹೊಡೆದುರುಳಿಸಿದ್ದ ಉಪಗ್ರಹವು ಬೇರಾವುದೇ ದೇಶದ್ದಲ್ಲ, ಭಾರತದ್ದೇ ಶತ್ರು ಉಪಗ್ರಹವನ್ನಷ್ಟೇ ಹೊಡೆದುರುಳಿಸಲು ಇರುವ ಈ ಕ್ಷಿಪಣಿಯು ಪುಡಿ ಮಾಡಿದ್ದು, ಭಾರತವು ಸೇವೆ ರದ್ದುಗೊಳಿಸಿದ್ದ ಹಳೆಯ ಉಪಗ್ರಹವೊಂದನ್ನು. ಅದು ಭೂಮಿಯಿಂದ 300 ಕಿ.ಮೀ. ಎತ್ತರದಲ್ಲಿ ಕೆಳಸ್ತರದ ಭೂ ಕಕ್ಷೆಯಲ್ಲಿ ಸುತ್ತುತ್ತಿತ್ತು.
ಇತರ ದೇಶಗಳ ಸಾಮರ್ಥ್ಯ
- ಅಮೆರಿಕ, ರಷ್ಯಾ, ಚೀನಾ ಮತ್ತು ಇದೀಗ ಭಾರತ ಈ ಸಾಮರ್ಥ್ಯ ಹೊಂದಿವೆ. ರಷ್ಯಾ 1970ರಷ್ಟು ಹಿಂದೆಯೇ ಈ ಸಾಮರ್ಥ್ಯ ಹೊಂದಿತ್ತು ಎಂದು ಶಂಕಿಸಲಾಗಿದೆ. ಅಮೆರಿಕ 1985ರಲ್ಲಿಯೇ ಈ ಸಾಮರ್ಥ್ಯವನ್ನು ಪ್ರದರ್ಶಿಸಿದ ಉದಾಹರಣೆ ಇದೆ. ಚೀನಾ 2007ರಲ್ಲಿ ತನ್ನ ಹವಾಮಾನ ಉಪಗ್ರಹವೊಂದನ್ನು ಉಡಾಯಿಸಿ ಈ ಸಾಮರ್ಥ್ಯವನ್ನು ಹೊಂದಿದ್ದೇನೆ ಎಂದು ತೋರಿಕೊಟ್ಟಿತು.
ಅಮೆರಿಕದಲ್ಲಿ ಪ್ರತ್ಯೇಕ ವಿಭಾಗ:
- ಅಮೆರಿಕ ಸೇನೆಯಲ್ಲಿ ಬಾಹ್ಯಾಕಾಶದಲ್ಲಿನ ಸುರಕ್ಷತಾ ಕ್ರಮಗಳಿಗಾಗಿಯೇ ಪ್ರತ್ಯೇಕ ವಿಭಾಗವಿದೆ. ಅಲ್ಲಿನ ವಾಯುಪಡೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಏರ್ಫೋರ್ಸ್ ಸ್ಪೇಸ್ ಕಮಾಂಡ್(ಎಎಫ್ಎಸ್ಪಿಸಿ) ವಿಶ್ವದ ಹಲವು ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿದೆ.
- ಶೀತಲ ಯುದ್ಧದ ಸಂದರ್ಭದಲ್ಲಿ 1970ರ ದಶಕದಲ್ಲಿಯೇ ಅಮೆರಿಕ ಕ್ಷಿಪಣಿ ದಾಳಿ ಮತ್ತು ವಿದೇಶಿ ಉಪಗ್ರಹಗಳ ಮೂಲಕ ಬಾಹ್ಯಾಕಾಶದಿಂದಲೇ ಮಹತ್ವದ ಮಾಹಿತಿಗಳನ್ನು ಕಲೆ ಹಾಕಬಹುದೆಂದು ಅರಿತಿತ್ತು. ಹೀಗಾಗಿ ಅಂತರಿಕ್ಷದ ಬೆಳವಣಿಗೆಗಳ ಬಗ್ಗೆ ನಿಗಾ ಇರಿಸಲೆಂದು ಪ್ರತ್ಯೇಕ ವಿಭಾಗ ಆರಂಭಿಸಿತ್ತು.
ಭಾರತಕ್ಕೆ ಏಕೆ ಅಗತ್ಯ?
- ಇಸ್ರೋ ಈಗಾಗಲೇ ನೂರಾರು ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಭಾರತದ ರಕ್ಷಣೆ, ಸಂವಹನ ಸಹಿತ ಮಹತ್ವದ ಉಪಗ್ರಹಗಳು ಇದರಲ್ಲಿ ಸೇರಿವೆ. ಇವುಗಳನ್ನು ಶತ್ರುಗಳಿಂದ ರಕ್ಷಣೆ ಮಾಡಲು ವಿಶೇಷ ವ್ಯವಸ್ಥೆ ಅಗತ್ಯ. ಯಾವುದೇ ದೇಶ ಭಾರತದ ಮೇಲೆ ಉಪಗ್ರಹ ದಾಳಿ ನಡೆಸಿದರೆ, ಭಾರತ ಕೂಡ ಪ್ರತಿದಾಳಿ ನಡೆಸಲು ಸಮರ್ಥವಾಗಿದೆ ಎಂಬ ಸಂದೇಶ ಈಗ ರವಾನೆಯಾಗಿದೆ. ಹೀಗಾಗಿ ಭಾರತದ ಉಪಗ್ರಹವನ್ನು ನಾಶಪಡಿಸಲು ಶತ್ರು ರಾಷ್ಟ್ರಗಳು ಮುಂದಾಗುವ ಸಾಧ್ಯತೆ ಕಡಿಮೆ.
ಪ್ರಯೋಜನ ಏನು?
- ಭಾರತದ ಮೇಲೆ ಗೂಢಚರ್ಯು ನಡೆಸುವ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯ.
- ಯುದ್ಧದಂಥ ಸನ್ನಿವೇಶದಲ್ಲಿ ಇದು ಅನುಕೂಲ
- ಬಾಹ್ಯಾಕಾಶದಲ್ಲಿರುವ ಭಾರತದ ಉಪಗ್ರಹಗಳಿಗೆ ರಕ್ಷಣೆ
- ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತಷ್ಟು ಮನ್ನಣೆ
ಅಂತರಿಕ್ಷದಲ್ಲಿ ಸಮರ
- ಬಾಹ್ಯಾಕಾಶವನ್ನು ಯಾವುದೇ ದೇಶವೂ ಆಯುಧಶಾಲೆಯಾಗಿ ಮಾರ್ಪಡಿಸುವುದಾಗಲೀ, ಯುದ್ಧಕ್ಕೆ ಉಪಯೋಗಿಸುವುದಾಗಲೀ ಮಾಡಕೂಡದು ಎಂದು 1967ರಲ್ಲಿ ಅಂತರಾಷ್ಟ್ರೀಯ ಒಪ್ಪಂದವಾಗಿದೆ; ಭಾರತ ಕೂಡ ಅದಕ್ಕೆ ಸಹಿ ಹಾಕಿದೆ.
- ”ಅಂತರಿಕ್ಷದ ಶಾಂತಿಯುತ ಬಳಕೆ ತನ್ನ ಆದ್ಯತೆ; ಬಾಹ್ಯಾಕಾಶದ ಶಸ್ತ್ರಾಸ್ತ್ರ ರೇಸ್ನಲ್ಲಿ ಭಾಗವಹಿಸುವ ಉದ್ದೇಶ ತನಗಿಲ್ಲ,” ಎಂದು ಭಾರತ ಘೋಷಿಸಿದೆ. ಈ ಯೋಜನೆಯಲ್ಲಿ ಭಾರತ ಯಾವುದೇ ಅಂತಾರಾಷ್ಟ್ರೀಯ ನಿಯಮಾವಳಿಯನ್ನು ಉಲ್ಲಂಘಿಸಿಲ್ಲ.
ಬಾಹ್ಯಾಕಾಶ ಕಸದ ಸೃಷ್ಟಿ
- ಭಾರತ ಕೆಡವಿರುವುದು ಕೆಳಕಕ್ಷೆಯಲ್ಲಿದ್ದ ಉಪಗ್ರಹವನ್ನು; ಆದ್ದರಿಂದ ಇಲ್ಲಿ ಉತ್ಪತ್ತಿಯಾದ ಕಸ ಕೆಲವೇ ವಾರಗಳಲ್ಲಿ ಭೂಮಿಗೆ ಬಿದ್ದು ನಾಶವಾಗಲಿದೆ. ಆದರೆ 2007ರಲ್ಲಿ ಚೀನಾ ನಡೆಸಿದ ಎ-ಸ್ಯಾಟ್ ಪ್ರಯೋಗದಲ್ಲಿ ಅಪಾರ ಪ್ರಮಾಣದ ಕಸ ಸೃಷ್ಟಿಯಾಗಿದ್ದು, ಇಂದಿಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಮತ್ತಿತರ ಕಡೆ ತೊಂದರೆ ಕೊಡುತ್ತಿದೆ.
ದೇಶ ಕಾಯುತ್ತಿರುವ ಸ್ಯಾಟಲೈಟ್ಗಳು
- ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 2016ರಲ್ಲಿ ಭಯೋತ್ಪಾದಕರ ಶಿಬಿರಗಳ ಮೇಲೆ ನಡೆದ ಸರ್ಜಿಕಲ್ ದಾಳಿಯ ಸಂದರ್ಭ ಸೇನಾಪಡೆಗೆ ಇಸ್ರೊ ಉಪಗ್ರಹಗಳು ಕರಾರುವಾಕ್ ಮಾಹಿತಿ ನೀಡಿದ್ದವು. ಬಾಲಾಕೋಟ್ನ ಏರ್ಸ್ಟ್ರೈಕ್ ಬಳಿಕ ಬಿಡುಗಡೆಗೊಳಿಸಿದ ಹೈ ರೆಸೆಲ್ಯೂಷನ್ ಚಿತ್ರಗಳನ್ನೂ ನಮ್ಮ ಸ್ಯಾಟಲೈಟ್ ಸೆರೆಹಿಡಿದಿತ್ತು. ಇಸ್ರೊ ನಿರ್ಮಿತ ಸ್ಯಾಟಲೈಟ್ಗಳು ಹವಾಮಾನ, ದೂರಸಂಪರ್ಕ, ಇಂಟರ್ನೆಟ್, ನ್ಯಾವಿಗೇಶನ್ ಇತ್ಯಾದಿ ಸೇವೆಗಳನ್ನು ಸುಲಲಿತಗೊಳಿಸುವ ಜತೆಗೆ ರಕ್ಷಣೆಯ ನಿಟ್ಟಿನಲ್ಲೂ ನಿರ್ಣಾಯಕವಾಗಿವೆ.
- ಮಿಲಿಟರಿ ಉದ್ದೇಶಗಳಿಗೇ ಮೀಸಲಿಟ್ಟಿರುವ ಉಪಗ್ರಹಗಳೂ ಇರುವುದು ಗಮನಾರ್ಹ. ಸ್ಯಾಟಲೈಟ್ ಆಧಾರಿತ ಮಿಲಿಟರಿ ಚಟುವಟಿಕೆಗಳ ಉಸ್ತುವಾರಿಗೆಂದೇ ಪ್ರತ್ಯೇಕ ಸ್ಪೇಸ್ ಸೆಲ್ ಕೂಡ ಅಸ್ತಿತ್ವದಲ್ಲಿದೆ.
ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್ಗಳ ಬಳಕೆ:
- ಭಾರತದ ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್ಗಳು ನಾಗರಿಕ ಹಾಗೂ ಸೇನೆ ಎರಡರ ಪ್ರಯೋಜನಕ್ಕೂ ಬಳಕೆಯಾಗುತ್ತಿದೆ. ಇದರಲ್ಲಿ 4 ಪೂರ್ಣ ಪ್ರಮಾಣದಲ್ಲಿ ಮಿಲಿಟರಿ ಉದ್ದೇಶಕ್ಕೆ ಬಳಕೆಯಾಗುತ್ತಿವೆ. ಇಸ್ರೋ 2018ರಲ್ಲಿ ಉಡಾಯಿಸಿದ ಕಾರ್ಟೊಸ್ಯಾಟ್-2 ಸರಣಿ ಉಪಗ್ರಹ ಸೇನೆ ಹಾಗೂ ವಿಚಕ್ಷಣ ದಳಕ್ಕೆ ಅತ್ಯಂತ ಉಪಯುಕ್ತ.
- ಪ್ರಾಕೃತಿಕ ವಿಪತ್ತುಗಳಿಗೆ ಮಾತ್ರವಲ್ಲದೆ, ಸೇನೆಯ ಸೇವೆಗೂ ಲಭ್ಯ. ಬಾಹ್ಯಾಕಾಶದಲ್ಲಿ 36,000 ಕಿ.ಮೀ ದೂರದಿಂದಲೂ ಹೈ ರೆಸೆಲ್ಯೂಷನ್ ಚಿತ್ರ ಸೆರೆಹಿಡಿಯಬಲ್ಲ ಸಾಮರ್ಥ್ಯವನ್ನೂ ಇಸ್ರೋ ಅಭಿವೃದ್ಧಿಪಡಿಸುತ್ತಿದೆ.
ಜಿಸ್ಯಾಟ್-7 ಮತ್ತು ಜಿಸ್ಯಾಟ್ 7ಎ (ರುಕ್ಮಿಣಿ)
- ಇಸ್ರೊ ಅಭಿವೃದ್ಧಿಪಡಿಸಿರುವ ಜಿ ಸ್ಯಾಟ್ -7 ಮತ್ತು ಜಿಸ್ಯಾಟ್ 7ಎ ಸೇನೆಗೆ ದೂರಸಂಪರ್ಕ ಸೇವೆ ಒದಗಿಸಲು ಮುಡಿಪಾಗಿರುವ ಮೊದಲ ಸ್ಯಾಟಲೈಟ್ಗಳಾಗಿವೆ. ನೌಕಾಪಡೆಗೆ ಮಲ್ಟಿ ಬಾಂಡ್ ಕಮ್ಯುನಿಕೇಶನ್ ಸೌಲಭ್ಯ ನೀಡುತ್ತದೆ. 2014ರ ಸೆಪ್ಟೆಂಬರ್ನಿಂದ ಕಾರ್ಯನಿರತ. ನೌಕಾಪಡೆಯ ಹಡಗುಗಳಿಗೆ ವಿದೇಶಿ ಸ್ಯಾಟಲೈಟ್ಗಳ ಕಣ್ತಪ್ಪಿಸಿ ದೂರಸಂಪರ್ಕ ಸಾಧಿಸಲು ನೆರವಾಗುತ್ತದೆ. ಈ ಸ್ಯಾಟಲೈಟ್ಗೆ ರುಕ್ಮಿಣಿ ಎಂಬ ಹೆಸರೂ ಇದೆ. 2,650 ಕೆ.ಜಿ ತೂಕ.
ಮೈಕ್ರೊಸ್ಯಾಟ್-ಆರ್
- ಡಿಆರ್ಡಿಒ ತಯಾರಿಸಿದ ಮೈಕ್ರೊಸ್ಯಾಟ್-ಆರ್ ಅನ್ನು ಇಸ್ರೊ 2019ರ ಜನವರಿ 24ರಂದು ಉಡಾವಣೆಗೊಳಿಸಿದೆ. ಇದೂ ಮಿಲಿಟರಿ ಉದ್ದೇಶಗಳಿಗೆ ನಿಗದಿಯಾಗಿದ್ದು, 740 ಕೆ.ಜಿ ತೂಕವಿದೆ.
ಹೈಸಿಸ್:
- ಹೈಪರ್ಸ್ಪೆಕ್ಟ್ರಲ್ ಸ್ಯಾಟಲೈಟ್ ದೇಶದ ಕರಾವಳಿ, ಅರಣ್ಯ, ಕೃಷಿ ಇತ್ಯಾದಿ ಭೌಗೋಳಿಕ ಪ್ರದೇಶಗಳ ಚಿತ್ರಗಳನ್ನು ಸೆರೆಹಿಡಿಯಲು ಅನುಕೂಲಕರ. ಸೇನೆಯಲ್ಲಿ ಇದನ್ನು ಬಳಸಲಾಗುತ್ತಿದೆ. 2018ರ ನವೆಂಬರ್ನಲ್ಲಿ ಉಡಾಯಿಸಲಾಯಿತು.