“3rd July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ”
ಇ ತ್ಯಾಜ್ಯ ಸಂಸ್ಕರಣಾ ಘಟಕ
- ಸುದ್ದಿಯಲ್ಲಿ ಏಕಿದೆ? ದೇಶದ ಮೊದಲ ‘ಇ-ತ್ಯಾಜ್ಯ ಸಂಸ್ಕರಣಾ ಘಟಕ’ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಬರುವ ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ಯಿಂದ ನಾಲ್ಕು ತಿಂಗಳಲ್ಲಿ ಘಟಕ ಸ್ಥಾಪನೆಯಾಗಲಿದೆ.
- ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಆಂದೋಲನದ ಭಾಗವಾಗಿ ಈ ಇ-ಸ್ವಚ್ಛ ಅಭಿಯಾನದ ರಾಷ್ಟ್ರದ ಮೊದಲ ವಿದ್ಯುನ್ಮಾನ ಮತ್ತು ಎಲೆಕ್ಟ್ರಾನಿಕ್ ವೇಸ್ಟ್ (ಡಬ್ಲೂಇಇಇ) ಸಂಸ್ಕರಣಾ ಘಟಕ ತಲೆ ಎತ್ತಲಿದೆ.
- ಸಾಮಾನ್ಯವಾಗಿ ಇ-ತ್ಯಾಜ್ಯ ಎಂದು ಕರೆಯುವ ಎಲೆಕ್ಟ್ರಾನಿಕ್ ತ್ಯಾಜ್ಯ ಇತ್ತೀಚಿನ ವರ್ಷಗಳಲ್ಲಿ ಘನ ತ್ಯಾಜ್ಯದಂತೆಯೇ ವ್ಯಾಪಕವಾಗಿ ಹೆಚ್ಚಾಗುತ್ತಿದೆ. 2016ರಲ್ಲಿ ವಿಶ್ವಾದ್ಯಂತ ಸುಮಾರು 44.7 ದಶಲಕ್ಷ ಮೆಟ್ರಿಕ್ ಟನ್ ಇ ತ್ಯಾಜ್ಯ ಉತ್ಪಾದನೆಯಾಗಿತ್ತು ಎನ್ನಲಾಗುತ್ತಿದೆ.
- ಒಂದು ಅಂದಾಜಿನಂತೆ ಆ ಪ್ರಮಾಣ 2012ರ ವೇಳೆಗೆ 52.2 ದಶಲಕ್ಷ ಮೆಟ್ರಿಕ್ ಟನ್ಗೆ ಏರಿಕೆಯಾಗುವ ಸಾಧ್ಯತೆ ಇದೆ.
- ಇತ್ತೀಚಿನ ಇಪಿಎ ವರದಿ ಪ್ರಕಾರ, ಪ್ರತಿದಿನ 4,61,000 ಮೊಬೈಲ್ ಹ್ಯಾಂಡ್ಸೆಟ್ ಮತ್ತು 1,42,000 ಕಂಪ್ಯೂಟರ್ ಉಪಕರಣಗಳ ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದನ್ನು ಹೇಗೆ ಸಂಸ್ಕರಣೆ ಮಾಡುವುದನ್ನು ತಿಳಿಯದೆ, ಅವುಗಳನ್ನು ಭೂಭರ್ತಿ ಘಟಕದಲ್ಲಿ ಹೂಳಲಾಗುತ್ತಿದೆ, ಇಲ್ಲವೇ ಇನ್ಸಿನೇಟರ್ಗಳಲ್ಲಿ ಹಾಕಲಾಗುತ್ತಿದೆ.
- ಅಸೋಚಾಂ ಮತ್ತು ಕೆಪಿಎಂಜಿ 2016ರಲ್ಲಿ ನಡೆಸಿದ ಅಧ್ಯಯನದಂತೆ, ಇ ತ್ಯಾಜ್ಯ ಉತ್ಪಾದನೆಯಲ್ಲಿ ಭಾರತ ಮೊದಲ ಐದು ರಾಷ್ಟ್ರಗಳಲ್ಲಿ ಒಂದಾಗಿದೆ. ವಾರ್ಷಿಕ 1.85 ದಶಲಕ್ಷ ಟನ್ ಇ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಇ-ಕಸದಲ್ಲಿ ಮುಖ್ಯವಾಗಿ ಕಂಪ್ಯೂಟರ್ ಬಿಡಿಭಾಗಗಳು ಹೆಚ್ಚಾಗಿದ್ದು, ಅವು ಶೇ.70ರಷ್ಟು ಪ್ರಮಾಣದಲ್ಲಿರುತ್ತವೆ. ಉಳಿದಂತೆ ಶೇ.12ರಷ್ಟು ದೂರಸಂಪರ್ಕ ಉಪಕರಣಗಳ ತ್ಯಾಜ್ಯವಿರುತ್ತದೆ.
ಶೇ.1.5ರಷ್ಟು ಮಾತ್ರ ಸಂಸ್ಕರಣೆ
- ಬಹುತೇಕ ಇ-ತ್ಯಾಜ್ಯವನ್ನು ಸಂಸ್ಕರಣೆ ಮಾಡಬಹುದು, ಇ-ತ್ಯಾಜ್ಯದಲ್ಲಿ ಶೇ.35ರಷ್ಟು ಪ್ಲಾಸ್ಟಿಕ್ ಇರುತ್ತದೆ. ಅದನ್ನು ಬಿಟ್ಟರೆ ಇತರೆ ಲೋಹಗಳಿರುತ್ತವೆ. ಹಾಲಿ ದೇಶದಲ್ಲಿ ಶೇ.1.5ರಷ್ಟು ಇ- ತ್ಯಾಜ್ಯ ಮಾತ್ರ ಸಂಸ್ಕರಣೆಯಾಗುತ್ತಿದೆ. ಅದೂ ಬಹುತೇಕ ಅಸಂಘಟಿತ ವಲಯದಿಂದ.
- ಇ-ತ್ಯಾಜ್ಯದಲ್ಲಿನ ಲೋಹಗಳನ್ನು ಆರಿಸಿಕೊಳ್ಳುವ ಸಂಸ್ಕರಣಾಗಾರರು ಉಳಿದ ಕಸವನ್ನು ಭೂಭರ್ತಿ ಘಟಕಗಳಲ್ಲಿ ಇಲ್ಲವೇ ಇತರೆ ತ್ಯಾಜ್ಯಗಳ ಜೊತೆ ಎಸೆಯುತ್ತಾರೆ. ಇ-ತ್ಯಾಜ್ಯದಲ್ಲಿನ ಪ್ಲಾಸ್ಟಿಕ್ನಲ್ಲಿ ಅದರ ಅವಧಿ(ಆಯಸ್ಸು) ಮುಗಿದ ನಂತರವೂ ಅವುಗಳನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಅಂಶಗಳಿರುತ್ತವೆ.
- ಪರಿಸರಸ್ನೇಹಿ ತಂತ್ರಜ್ಞಾನವನ್ನು ಬಳಸಿಕೊಂಡು ಅವುಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಬಹುದು. ಆದರೆ ಕೀ ಬೋರ್ಡ್, ಕೇಬಲ್ ಮತ್ತಿತರ ವಸ್ತುಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ಬ್ರೂಮಿನೇಟೆಡ್ ಫ್ಲೇಮ್ ರಿಟಾರ್ಡೆಂಟ್ಸ್(ಬಿಎಫ್ಆರ್) ಇರುತ್ತದೆ. ಅದರ ಜೊತೆಗೆ ಪ್ರಿಂಟೆಡ್ ಸರ್ಕೀಟ್ ಬೋರ್ಡ್(ಪಿಸಿಬಿ)ಗಳಲ್ಲಿ ಬಳಕೆ ಮಾಡುವ ಥರ್ಮೋಸೆಟ್ ಪ್ಲಾಸ್ಟಿಕ್ ಸಂಸ್ಕರಣೆ ಮಾಡುವುದು ಕಷ್ಟಕರ.
ಸಿಪೆಟ್ನಿಂದ ತಂತ್ರಜ್ಞಾನ ಅಭಿವೃದ್ಧಿ
- ಸಿಪೆಟ್ ಇ-ತ್ಯಾಜ್ಯ ಸಂಸ್ಕರಣೆಗೆ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಆ ಮೂಲಕ ತ್ಯಾಜ್ಯ ಸಂಸ್ಕರಿಸಿ ಹೊಸ ಉತ್ಪನ್ನಗಳನ್ನು ತಯಾರಿಸಬಹುದು. ಜೊತೆಗೆ ಬಿಎಫ್ಆರ್ ಪ್ಲಾಸ್ಟಿಕ್ ಮತ್ತು ಥರ್ಮೋಸೆಟ್ಗಳನ್ನೂ ಕೂಡ ಬಳಕೆ ಮಾಡಿಕೊಳ್ಳಬಹುದು.
- ಸಿಪೆಟ್ನ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ ಇತ್ತೀಚೆಗೆ ವಿದ್ಯುನ್ಮಾನ ತ್ಯಾಜ್ಯದ ಸಂಸ್ಕರಣೆ ತಂತ್ರಜ್ಞಾನದ ಪೇಟೆಂಟ್ ಪಡೆದುಕೊಂಡಿದೆ.
ಬೆಂಗಳೂರಿನಲ್ಲೇ ಈ ಘಟಕ ಏಕೆ?
- ಬೆಂಗಳೂರು ಮಹಾನಗರ ಮಾಹಿತಿ ತಂತ್ರಜ್ಞಾನದ ತವರೂರು. ಇಲ್ಲಿ ಹೆಚ್ಚಿನ ಇ-ತ್ಯಾಜ್ಯ ಉತ್ಪಾದನೆಯಾಗುವುದರಿಂದ ಅದನ್ನು ಸಂಸ್ಕರಿಸಲು ‘ಸಿಪೆಟ್’ ಸಂಸ್ಥೆ ಈ ಘಟಕವನ್ನು ಬೆಂಗಳೂರಿನ ದೇವನಹಳ್ಳಿಯಲ್ಲಿ ಆರಂಭಿಸಲು ನಿರ್ಧರಿಸಿದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯಕ್ಕೂ ಸಂಪೂರ್ಣ ಪರಿಹಾರ ಸಿಗಲಿದೆ.
- ಉನ್ನತ ಸಾಮರ್ಥ್ಯದ ಪ್ಲಾಸ್ಟಿಕ್ ಮತ್ತು ಲೋಹ ತ್ಯಾಜ್ಯವನ್ನು ಅಭಿವೃದ್ಧಿಯ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಜೊತೆಗೆ ಇ ತ್ಯಾಜ್ಯವನ್ನು ಪರಿಸರಸ್ನೇಹಿ ಮಾದರಿಯಲ್ಲಿ ಸಂಸ್ಕರಿಸಬಹುದಾಗಿದೆ. ದೇಶದ ಇತರೆ ನಗರಗಳಲ್ಲೂ ಇಂತಹ ಇ-ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವ ಉದ್ದೇಶವನ್ನು ‘ಸಿಪೆಟ್’ ಹೊಂದಿದೆ.
ಇ ತ್ಯಾಜ್ಯ: ಬೆಂಗಳೂರು ನಂ. 3
- ಇ-ತ್ಯಾಜ್ಯ ಉತ್ಪಾದನೆಯಲ್ಲಿ ಬೆಂಗಳೂರು ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಮುಂಬಯಿ ಮತ್ತು ದಿಲ್ಲಿ ನಗರಗಳಿವೆ. ಅವೆರಡೂ 92,000 ಟನ್ ಇ ತ್ಯಾಜ್ಯವನ್ನು ಪ್ರತಿವರ್ಷ ಉತ್ಪಾದಿಸುತ್ತಿವೆ. ಪ್ರಸ್ತುತ ಭಾರತದ ಇ-ತ್ಯಾಜ್ಯ ಪ್ರಮಾಣವನ್ನು ಗಮನಿಸಿದರೆ 2020ರವೇಳೆಗೆ ಆ ಪ್ರಮಾಣ 52ಲಕ್ಷ ಟನ್ ತಲುಪುವ ನಿರೀಕ್ಷೆ ಇದೆ.
ಕಾರ್ಪ್ ಮ್ಯೂಸಿಯಂ
- ಸುದ್ದಿಯಲ್ಲಿ ಏಕಿದೆ? ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಪ್ರಾಚೀನ ವಸ್ತು ಸಂಗ್ರಹಾಲಯಕ್ಕೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಮನ್ನಣೆ ದೊರೆತಿದೆ.
- ರಾಜ ಮಹಾರಾಜರ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳು, ದೇಶ ವಿದೇಶದ ನೋಟುಗಳು, ಸ್ಮರಣೆ ನಾಣ್ಯಗಳ ಸಂಗ್ರಹದ ಒಟ್ಟು ವ್ಯವಸ್ಥೆಗೆ ಸಿಕ್ಕ ಜಾಗತಿಕ ಮಾನ್ಯತೆಯಿಂದಾಗಿ ವಸ್ತು ಸಂಗ್ರಹಾಲಯ ಮತ್ತಷ್ಟು ಎತ್ತರಕ್ಕೇರಲಿದೆ.
- ಕಾರ್ಪ್ ಬ್ಯಾಂಕ್ ಸ್ಥಾಪಕ ಹಾಜಿ ಅಬ್ದುಲ್ಲಾರ ಮನೆಯೇ ಕಾರ್ಪ್ ಬ್ಯಾಂಕ್ ಸ್ಥಾಪಕರ ಶಾಖೆಯಾಗಿದ್ದು 2011ರಲ್ಲಿ ಪ್ರಾಚೀನ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ನೋಟು ಮತ್ತು ನಾಣ್ಯ ಸಂಗ್ರಾಹಕ ಜಯಪ್ರಕಾಶ್ ರಾವ್ ಅವರಿಂದ ಕಾರ್ಪ್ ಬ್ಯಾಂಕ್ ಅಪೂರ್ವ ನಾಣ್ಯ ಖರೀದಿಸಿ ಇಲ್ಲಿಟ್ಟಿದೆ.
- ಏನೇನಿದೆ?:
2,418 ವರ್ಷಗಳ ಹಿಂದೆ ಈಗಿನ ಅಫಘಾನಿಸ್ಥಾನದ ಕಂದಹಾರ್ ಕೇಂದ್ರಿತ ಗಾಂಧಾರ ದೇಶದ ಆಡಳಿತದಲ್ಲಿ ಬಳಕೆಯಲ್ಲಿದ್ದ ಬೆಳ್ಳಿ ನಾಣ್ಯದಿಂದ ಹಿಡಿದು ರಾಜ ಮಹಾರಾಜರ, ಸ್ವಾತಂತ್ರ್ಯಾನಂತರದ ಸಹಿತ 2,000 ನಾಣ್ಯಗಳು, 10ರಿಂದ 1,000 ರೂ. ತನಕ ಮಹನೀಯರ ಸ್ಮರಣೆಗಾಗಿ ಬಿಡುಗಡೆ ಮಾಡಿದ ನಾಣ್ಯಗಳು, ದೇಶ ವಿದೇಶದ ನೋಟುಗಳಿವೆ. - ಪ್ರಾಚೀನ ನಾಣ್ಯ ಚಲಾವಣೆಗೆ ಮೂಲವಸ್ತು ಗುಲಗಂಜಿಯಾಗಿದ್ದು 170 ಗ್ರೈನ್ 170 ಗುಲಗಂಜಿ ತೂಕದ್ದಾಗಿದೆ. 10, 20, 50, 60, 75, 100, 150, 200, 500, 1,000ರೂ. ನಾಣ್ಯ ಬಿಡುಗಡೆಯಾಗಿದ್ದರೂ ಸಾರ್ವಜನಿಕ ಚಲಾವಣೆಯಲ್ಲಿಲ್ಲ. ಟಂಕಸಾಲೆಯನ್ನು ಸಂಪರ್ಕಿಸಿ ನಿಗದಿತ ಮೌಲ್ಯ ಕೊಟ್ಟು ತರಿಸಬಹುದು.
- 1950ರಲ್ಲಿ 1ರಿಂದ 100ರೂ. ತನಕದ ನೋಟುಗಳಿದ್ದರೆ 1954ರಲ್ಲಿ ಚಲಾವಣೆಗೆ ಬಂದ 1,000, 5,000, 10,000ರೂ. ಮುಖಬೆಲೆಯ ನೋಟುಗಳನ್ನು 1978ರಲ್ಲಿ ಹಿಂತೆಗೆದುಕೊಳ್ಳಲಾಗಿತ್ತು.
ಹಳೆ ನಾಣ್ಯ ನೋಟಿಗೆಷ್ಟು ಮೌಲ್ಯ?:
- 1950ರಲ್ಲಿದ್ದ 1ರೂ. ನೋಟಿಗೀಗ 5ರಿಂದ 6 ಸಾವಿರ ರೂ., 50ರ ದಶಕದ 10,000ರೂ. ನೋಟಿಗೆ ಐದಾರು ಲಕ್ಷ ರೂ. 1939ರಲ್ಲಿದ್ದ 1ರೂ. ಬೆಳ್ಳಿ ನಾಣ್ಯಕ್ಕೆ 6ಲಕ್ಷ ರೂ. ಮೌಲ್ಯವಿದೆ.