” 01 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಗ್ರಾಮ ವಿಕಾಸ ಯೋಜನೆ
ಸುದ್ಧಿಯಲ್ಲಿ ಏಕಿದೆ ?ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ ‘ಗ್ರಾಮ ವಿಕಾಸ‘ ಯೋಜನೆಗೆ ಅನುದಾನ ಸ್ಥಗಿತಗೊಳಿಸಿದ್ದು, ಕಾಂಗ್ರೆಸ್ ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ.
ಹಿನ್ನಲೆ
- ಎಚ್.ಕೆ.ಪಾಟೀಲ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ 2015ರ ಗಾಂಧಿ ಜಯಂತಿಯಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು.
- ಕಾಂಗ್ರೆಸ್ ಸರಕಾರದ ‘ಫ್ಲ್ಯಾಗ್ಶಿಫ್ ಪ್ರೋಗ್ರಾಮ್ಸ್ ‘ ಪಟ್ಟಿಯಲ್ಲಿದ್ದ ಈ ಕಾರ್ಯಕ್ರಮದಲ್ಲಿ ಇದುವರೆಗೆ ತಲಾ ಎರಡು ಕಂತುಗಳಲ್ಲಿ ಗ್ರಾಮಗಳನ್ನು ಆಯ್ಕೆ ಮಾಡಿ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲಾಗಿತ್ತು.
ಏನಿದು ಯೋಜನೆ ?:
- ರಾಜ್ಯದ 189 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತಲಾ ಐದು ಗ್ರಾಮಗಳನ್ನು ಎರಡು ವರ್ಷದ ಅವಧಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ 2015ರಲ್ಲಿ ಈ ಯೋಜನೆ ಆರಂಭಿಸಲಾಗಿತ್ತು.
- ಆರಂಭದಲ್ಲಿ ಒಂದು ಗ್ರಾಮಕ್ಕೆ ತಲಾ 50 ಲಕ್ಷ ರೂ. ನೀಡಲು ನಿರ್ಧರಿಸಲಾಗಿತ್ತು. ಹೀಗಾಗಿ ಆರಂಭದಲ್ಲಿ 398 ಕೋಟಿ ರೂ.ನ್ನು ಸರಕಾರ ನಿಗದಿಗೊಳಿಸಿತ್ತು. ಮೊದಲ ಹಂತದ ಕಾರ್ಯಕ್ರಮ ಮುಕ್ತಾಯಗೊಂಡಾಗ ಈ ಮೊತ್ತ 750 ಕೋಟಿ ರೂ.ಗೆ ಹೆಚ್ಚಳಗೊಂಡಿತ್ತು.
- 2017-18ಕ್ಕೆ ಆರಂಭಗೊಂಡ ಎರಡನೇ ಹಂತದ ಗ್ರಾಮ ವಿಕಾಸ ಯೋಜನೆಗೆ ಸರಕಾರ 1000 ಕೋಟಿ ರೂ. ಮಂಜೂರು ಮಾಡಿತ್ತು. ಜತೆಗೆ ಪ್ರತಿ ಗ್ರಾಮಕ್ಕೆ 1 ಕೋಟಿ ರೂ. ಅನುದಾನ ನೀಡಲಾಗಿತ್ತು.
- 2019ಕ್ಕೆ ಎರಡನೇ ಹಂತದ ಯೋಜನೆಯೂ ಮುಕ್ತಾಯಗೊಂಡಿದ್ದು, ಈ ಬಾರಿಯ ಬಜೆಟ್ನಲ್ಲಿ ಸರಕಾರ ಹಣ ನಿಗದಿ ಮಾಡಬಹುದೆಂಬ ಕಾಂಗ್ರೆಸ್ ಮುಖಂಡರ ನಿರೀಕ್ಷೆ ಹುಸಿಯಾಗಿದೆ.
ಯೋಜನೆಯ ಹಣ ಬಳಕೆ ಹೇಗೆ?:
- ಈ ಯೋಜನೆಯಲ್ಲಿ ಸುಮಾರು 21 ಕಾರ್ಯಕ್ರಮಗಳಿಗೆ ಹಣ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
- ಆರ್ಥಿಕವಾಗಿ ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದವರೇ ಹೆಚ್ಚಾಗಿ ವಾಸಿಸುತ್ತಿದ್ದ ಗ್ರಾಮಗಳನ್ನು ಆದ್ಯತೆ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.ಯೋಜನೆಗಳಿಗೆ ನಿಗದಿಮಾಡಿದ ಪ್ರತಿಶತ ಅನುದಾನದ ವಿವರ ಹೀಗಿದೆ.
- ರಸ್ತೆ, ಚರಂಡಿ, ಕಟ್ಟಡ ನಿರ್ಮಾಣ – ಶೇ.50
- ಸ್ಮಾರಕ, ರಂಗಮಂದಿರ, ಮೈದಾನ- ಶೇ.12
- ಜಿಮ್, ರಸ್ತೆ ದೀಪ – ಶೇ.12
- ದೇಗುಲ, ಚರ್ಚ್, ಮಸೀದಿ ದುರಸ್ತಿ – ಶೇ.6
- ಪಂಚಾಯಿತಿಗೆ ಅಗತ್ಯ ವಸ್ತು ಖರೀದಿ – ಶೇ.2
ಗ್ರಾಮೀಣ ರಸ್ತೆಗಳಿಗೂ ಕೊಕ್ಕೆ:
- ‘ನಮ್ಮ ಗ್ರಾಮ ನಮ್ಮ ರಸ್ತೆ‘ ಯೋಜನೆಗೆ ನೀಡುತ್ತಿದ್ದ ಅನುದಾನದಲ್ಲೂ ಈ ಬಾರಿ ಕಡಿತ ಮಾಡಲಾಗಿದೆ. 2017-18ರ ಅವಧಿಯಲ್ಲಿ ಪ್ರತಿ ಕ್ಷೇತ್ರದಲ್ಲಿ ತಲಾ 20 ರಿಂದ 40 ಕಿಮೀ ರಸ್ತೆ ನಿರ್ಮಾಣ ಗುರಿಯೊಂದಿಗೆ ಈ ಯೋಜನೆ ಆರಂಭಿಸಲಾಗಿತ್ತು. ಪ್ರತಿ ಕಿಮೀ ಅಂದಾಜು ವೆಚ್ಚ 75 ಲಕ್ಷ ರೂ. ನಿಗದಿ ಮಾಡಲಾಗಿತ್ತು.
ಡ್ರೋನ್ ಆಧಾರಿತ ಭೂಮಿ, ಆಸ್ತಿ ಸಮೀಕ್ಷೆ
ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಡ್ರೋನ್ ಆಧರಿತ ಭೂಮಿ ಹಾಗೂ ಆಸ್ತಿ ಸಮೀಕ್ಷೆ ನಡೆಸುವುದಕ್ಕೆ ರಾಜ್ಯ ಸರಕಾರ ಮುಂದಾಗಿದ್ದು, ಈ ಸಂಬಂಧ ಭಾರತೀಯ ಸರ್ವೇಕ್ಷಣಾ ಸಂಸ್ಥೆ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
- ತುಮಕೂರು, ಹಾಸನ, ಉತ್ತರ ಕನ್ನಡ, ಬೆಳಗಾವಿ, ರಾಮನಗರ ಜಿಲ್ಲೆಗಳು ಹಾಗೂ ಬೆಂಗಳೂರು ನಗರದಲ್ಲಿ ಮೊದಲ ಹಂತದಲ್ಲಿ ಸಮೀಕ್ಷೆ ಕಾರ್ಯ ಆರಂಭಿಸಲಾಗುವುದು. ಎರಡು ವರ್ಷದ ಅವಧಿಯಲ್ಲಿ ಸಮೀಕ್ಷೆ ಮುಕ್ತಾಯಗೊಳಿಸಲಾಗುವುದು
- ‘2019-20ನೇ ಸಾಲಿಗೆ ಅನ್ವಯವಾಗುವಂತೆ ಎರಡನೇ ಹಂತದ ಸಮೀಕ್ಷೆ ಆರಂಭಿಸಲಾಗುವುದು. ವಿಜಯಪುರ, ಕೊಡಗು, ಧಾರವಾಡ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ ಮತ್ತು ಕಲಬುರಗಿ ಜಿಲ್ಲೆಗಳನ್ನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
- ಬೆಂಗಳೂರು ನಗರದ ಜಯನಗರ 4ನೇ ವಾರ್ಡ್ ಮತ್ತು ರಾಮನಗರ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಡ್ರೋನ್ ತಂತ್ರಜ್ಞಾನ ಬಳಸಿ ಪ್ರಾಯೋಗಿಕ ಸಮೀಕ್ಷೆ ನಡೆಸಲಾಗಿದೆ. ಇದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರೈತರ ಜಮೀನು ಹಾಗೂ ಸರಕಾರಿ ಆಸ್ತಿಯ ಮರುಮಾಪನ ಹಾಗೂ ಡಿಜಿಟಲೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಇಂಥದೊಂದು ಕ್ರಾಂತಿಕಾರಿ ಕ್ರಮ ತೆಗೆದುಕೊಂಡಿದೆ.
- ಡ್ರೋನ್ ಆಧರಿತ ಸರ್ವೆ ವಸ್ತುನಿಷ್ಠವಾಗಿರುತ್ತದೆ. ದೋಷಪೂರಿತ ಗಡಿ ನಿಗದಿಗೆ ಇದರಿಂದ ತಡೆ ನೀಡಬಹುದು. ಕರ್ನಾಟಕ ಭೂ ಕಂದಾಯ ಕಾಯಿದೆ ಪ್ರಕಾರ ಪ್ರತಿ 30 ವರ್ಷಕ್ಕೊಮ್ಮೆ ಕಂದಾಯ ಇಲಾಖೆಯಲ್ಲಿ ಬರುವ ಎಲ್ಲ ಆಸ್ತಿಗಳ ಮರು ಸರ್ವೆ ಮಾಡಬೇಕಾಗುತ್ತದೆ.
- 1920ರ ಬಳಿಕ ಇದುವರೆಗೆ ಮರುಸರ್ವೆ ಕಾರ್ಯ ನಡೆದಿಲ್ಲ. 1928ರಿಂದ 1940ರ ಅವಧಿಯಲ್ಲಿ ಹಿಸ್ಸಾ ಸರ್ವೆ ನಡೆದಿದೆ. 1959ರಿಂದ 1965ರ ವರೆಗೆ ಮರು ವರ್ಗೀಕರಣ ನಡೆಸಲಾಗಿದೆ
ಡ್ರೋನ್ ಸರ್ವೆ ಪ್ರಯೋಜನವೇನು ?
- ಡ್ರೋನ್ ಮೂಲಕ ಮರು ಸರ್ವೆ ನಡೆಸುವುದರಿಂದ ಶೀಘ್ರ ಕೆಲಸ ಮುಕ್ತಾಯಗೊಳ್ಳುತ್ತದೆ.
- ಗಣಕೀಕರಣ, ಜಿಯೋ ರೆಫರೆನ್ಸ್ ಜತೆಗೆ ನಿಖರವಾದ ನಕ್ಷೆ ಸಿದ್ಧಪಡಿಸಬಹುದು.
- ಎರಡೇ ವರ್ಷದಲ್ಲಿ ಮೊದಲ ಹಂತದ ಕಾರ್ಯ ಮುಕ್ತಾಯಗೊಳ್ಳುತ್ತದೆ.
- ಭೂ ಮಾಪನವನ್ನು ಸಾಂಪ್ರದಾಯಿಕ ವಿಧಾನಕ್ಕಿಂತ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಳಿಸಬಹುದು.
- ಇದರಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ. ಪಕ್ಷಪಾತ ಹಾಗೂ ತಪ್ಪುಗಳಿಗೆ ಅವಕಾಶ ಇರುವುದಿಲ್ಲ
‘ಜಲಾಮೃತ’ ಜಾಗೃತಿ ಆಂದೋನಲ
ಸುದ್ಧಿಯಲ್ಲಿ ಏಕಿದೆ ?ಪದೇ ಪದೆ ಬರಗಾಲಕ್ಕೆ ತುತ್ತಾಗುತ್ತಿರುವ ರಾಜ್ಯದಲ್ಲಿ ನೀರು ಉಳಿಸುವ ಉದ್ದೇಶದಿಂದ ನಾಲ್ಕು ಅಂಶಗಳನ್ನೊಳಗೊಂಡ ಜಲಾಮೃತ ಆಂದೋಲನಕ್ಕೆ ಚಾಲನೆ ದೊರೆತಿದೆ.
- 2019 ನೇ ವರ್ಷವನ್ನು ‘ಜಲವರ್ಷ‘ ಎಂದು ರಾಜ್ಯ ಸರಕಾರ ಘೋಷಿಸಿದೆ.
- ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2019 ನೇ ವರ್ಷವನ್ನು ‘ಜಲವರ್ಷ’ ಎಂದು ಘೋಷಿಸಿದರು.
- ಹನಿ ನೀರನ್ನೂ ಉಳಿಸಿ ಮುಂದಿನ ಪೀಳಿಗೆಗೆ ನೀಡುತ್ತೇವೆ ಎಂಬ ಪ್ರತಿಜ್ಞಾವಿಧಿಯನ್ನೂ ಅವರು ಬೋಧಿಸುವ ಮೂಲಕ ಅವರು ಜಲಾಮೃತ ಆಂದೋಲನವನ್ನು ಉದ್ಘಾಟಿಸಿದರು.
ನಾಲ್ಕು ಅಂಶಗಳು
- ನೀರಿನ ಮಿತವ್ಯಯ, ಪರಿಸರ ಸಂರಕ್ಷಣೆ ಮೊದಲಾದ ಉದ್ದೇಶಗಳನ್ನಿಟ್ಟುಕೊಂಡು ನಾಲ್ಕು ಪ್ರಮುಖ ಅಂಶಗಳನ್ನು ಈ ಆಂದೋಲನದಲ್ಲಿ ಪರಿಚಯಿಸಲಾಗಿದೆ.
- ‘ಜಲ ಸಂರಕ್ಷಣೆ’ ಅಂಶದಡಿ ಜಲಮೂಲಗಳ ಪುನಶ್ಚೇತನ ಮಾಡಲಾಗುತ್ತದೆ. 7 ನದಿಗಳು, 36,000 ಕೆರೆಗಳು ಹಾಗೂ ಲಕ್ಷಾಂತರ ಗೋಕಟ್ಟೆ, ಬಾವಿ, ಕಲ್ಯಾಣಿಗಳ ಪೈಕಿ ಶೇ.50 ರಷ್ಟು ಅತಿಕ್ರಮಣ ಹಾಗೂ ಹೂಳು ತುಂಬುವ ಸಮಸ್ಯೆಗೊಳಗಾಗಿವೆ. ಇದನ್ನು ನಿವಾರಿಸಿ ಜಲಮೂಲಗಳ ಪುನಶ್ಚೇತನ ಹಾಗೂ ಹೊಸ ಜಲಮೂಲಗಳನ್ನು ಸೃಜಿಸಲಾಗುತ್ತದೆ.
- 2 ವರ್ಷಗಳಲ್ಲಿ 14,000 ಜಲಮೂಲಗಳ ಪುನಶ್ಚೇತನ, 12,000 ಚೆಕ್ ಡ್ಯಾಂ, ಕಿಂಡಿ ಅಣೆಕಟ್ಟು, ಸಣ್ಣ ಜಲಾಶಯ ನಿರ್ಮಿಸುವ ಗುರಿ ಇದೆ.
- ‘ಜಲ ಸಾಕ್ಷರತೆ‘ ಅಂಶದಡಿ ನೀರಿನ ಮಿತವ್ಯಯ, ಪೋಲು ತಡೆಗಟ್ಟುವುದು, ಮನೆಗಳಲ್ಲಿ ಮಳೆ ನೀರು ಕೊಯ್ಲುಅಳವಡಿಕೆ ಮೊದಲಾದ ಕ್ರಮಗಳನ್ನು ಕೈಗೊಳ್ಳಲು ಜಾಗೃತಿ ಮೂಡಿಸಲಾಗುತ್ತದೆ.
- ‘ಜಲ ಪ್ರಜ್ಞೆ‘ ಅಂಶದಡಿ ವಿದ್ಯಾರ್ಥಿಗಳು, ಸ್ಥಳೀಯ ಸಮುದಾಯ, ಶಿಕ್ಷಕರು, ಜಲತಜ್ಞರನ್ನೊಳಗೊಂಡು ಸಾರ್ವಜನಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಅರಿವು ಮೂಡಿಸಲಾಗುತ್ತದೆ. ‘ಹಸಿರೀಕರಣ‘ ಅಂಶದಡಿ ಪ್ರತಿ ಜಿಲ್ಲೆಯಲ್ಲಿ 1 ಕೋಟಿ ಸಸಿ ನೆಟ್ಟು ಪೋಷಿಸಿ ಐದು ವರ್ಷಗಳ ಬಳಿಕ ಗಣತಿ ಮಾಡಿಸಲಾಗುತ್ತದೆ.
ಕಿವುಡು ಪತ್ತೆಗೆ ಬರಲಿದೆ ಆ್ಯಪ್
ಸುದ್ಧಿಯಲ್ಲಿ ಏಕಿದೆ ?ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ಒ) ಶ್ರವಣ ದೋಷ ಪರೀಕ್ಷೆ ಮಾಡುವ ವಿಶೇಷ ಆ್ಯಪ್ (HEARWHO) ಸಿದ್ಧಪಡಿಸಿದ್ದು, ಇದನ್ನು ವಿಶ್ವ ಶ್ರವಣ ದಿನದಂದು (ಮಾ. 3ರಂದು) ವಿಶ್ವಾದ್ಯಂತ ಏಕಕಾಲಕ್ಕೆ ಲೋಕಾರ್ಪಣೆ ಮಾಡಲಿದೆ.
- ಇದರಿಂದ ಆರಂಭಿಕ ಹಂತದಲ್ಲಿ ಶ್ರವಣ ನ್ಯೂನ್ಯತೆಯನ್ನು ಪತ್ತೆ ಹಚ್ಚಿ ಸಕಾಲಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಸಮಸ್ಯೆ ಉಲ್ಬಣಿಸುವುದನ್ನು ತಡೆಯಬಹುದಾಗಿದೆ ಎನ್ನುತ್ತಾರೆ ಭಾರತೀಯ ವಾಕ್ ಶ್ರವಣ ಸಂಘದ ಸಾರ್ವಜನಿಕ ಸಂಪರ್ಕ ಇಲಾಖೆ ಮುಖ್ಯಸ್ಥ ಡಾ. ಎಂ. ಎಸ್. ಜೆ. ನಾಯಕ್.
ಬಳಕೆ ಹೇಗೆ?
- ಈ ಆ್ಯಪ್ ಅನ್ನು ಸ್ಮಾರ್ಟ್ ಫೋನ್ ಮೂಲಕ ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಇಯರ್ ಫೋನ್ ಮೂಲಕ ಸ್ವತಃ ತಮ್ಮ ಶ್ರವಣ ಸಾಮರ್ಥ್ಯವನ್ನು ಅಂದರೆ ಕಿವುಡು ಸಮಸ್ಯೆಯನ್ನು ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಯಾವಾಗಬೇಕಾದರೂ, ಎಲ್ಲಿಯಾದರೂ, ಎಷ್ಟು ಬಾರಿಯಾದರೂ ಶ್ರವಣ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಪ್ರತಿ ಬಾರಿ ಪರೀಕ್ಷೆ ಮಾಡಿಕೊಂಡಾಗಲೂ ಅದರ ಮಾಹಿತಿಯನ್ನು ಈ ತಂತ್ರಜ್ಞಾನ ಸಂಸ್ಕರಿಸಿಡಲಿದೆ.
ಶಬ್ದ ಮಾಲಿನ್ಯ ಕಾರಣ
- ಕಾರ್ಖಾನೆ, ಸಂಚಾರ ದಟ್ಟಣೆ, ಸಂಗೀತ ಕ್ಷೇತ್ರ ಸೇರಿದಂತೆ ಸದಾ ಗದ್ದಲದ ವಾತಾವರಣದಲ್ಲಿ ಇರುವವರಲ್ಲಿ ಶ್ರವಣ ನ್ಯೂನ್ಯತೆ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಗ್ಗೆ ಜನರು ಹೆಚ್ಚು ಗಮನ ಹರಿಸುವುದಿಲ್ಲ.
- ಹೀಗಾಗಿ ಮಧುಮೇಹ, ಬಿಪಿ, ಕಣ್ಣು ಇತ್ಯಾದಿ ನಿಯಮಿತ ಆರೋಗ್ಯ ತಪಾಸಣೆಯ ರೀತಿಯಲ್ಲಿ ಶ್ರವಣ ಸಮಸ್ಯೆ ಬಗ್ಗೆ ಯಾರೂ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ಆದರೆ ಸಮಸ್ಯೆ ಹೆಚ್ಚಾದಾಗ ಚಿಕಿತ್ಸೆಗೆ ಮುಂದಾಗುತ್ತಾರೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪರಿಹಾರ ಕಂಡುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ಆ್ಯಪ್ ಸಿದ್ಧಪಡಿಸಿದ್ದು, ಇದನ್ನು ಬಳಸಿ ಶ್ರವಣ ಸಾಮರ್ಥ್ಯವನ್ನು ಸ್ವತಃ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.
ಶ್ರವಣ ಸಮಸ್ಯೆ ಭಾರತದಲ್ಲಿ ಹೆಚ್ಚು
- ವಿಶ್ವ ಆರೋಗ್ಯ ಸಂಸ್ಥೆ 2018ರಲ್ಲಿ ನಡೆಸಿದ ಸಮೀಕ್ಷಾ ವರದಿ ಪ್ರಕಾರ ವಿಶ್ವಾದ್ಯಂತ 466 ದಶಲಕ್ಷ ಜನರು ಶ್ರವಣ ಸಮಸ್ಯೆ ಹೊಂದಿದ್ದು, ಇವರಲ್ಲಿ 34 ದಶಲಕ್ಷ ಮಕ್ಕಳೇ ಇದ್ದಾರೆ. 2050ರ ವೇಳೆಗೆ 900 ದಶಲಕ್ಷ ಜನರು ಶ್ರವಣ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಇನ್ನು ವಿಶ್ವದ ಜನಸಂಖ್ಯೆಯಲ್ಲಿ ಶೇ.5ರಷ್ಟು ಕಿವುಡು ಸಮಸ್ಯೆ ಹೊಂದಿದ್ದರೆ.
- ಭಾರತದಲ್ಲಿ ಈ ಪ್ರಮಾಣ ಶೇ. 6ರಷ್ಟಿದೆ. 12 ರಿಂದ 35 ವರ್ಷ ವಯಸ್ಸಿನವರು ಹೆಚ್ಚಿನ ಪ್ರಮಾಣದ ಶಬ್ಧವನ್ನು ಆಲಿಸುವುದರಿಂದ (ಇಯರ್ ಫೋನ್ ಅತಿಯಾದ ಬಳಕೆ) ಶ್ರವಣ ಸಮಸ್ಯೆಗೆ ಒಳಗಾಗುವ ಅಪಾಯವಿರುತ್ತದೆ.
ಕ್ಯಾನ್ಸರ್ ಔಷಧಗಳು ಅಗ್ಗ
ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (ಎನ್ಪಿಪಿಎ) ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ 42 ಔಷಧಗಳ ದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದೆ.
- ಇದರನ್ವಯ ಎನ್ಪಿಪಿಎ ಸೂಚಿಸುವ ಔಷಧಗಳ ಉತ್ಪಾದಕರು ಲಾಭಾಂಶಕ್ಕೆ ಶೇ.30ರ ಮಿತಿ ಹೊಂದಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ಪ್ರಯೋಜನವಾಗಲಿದೆ.
- ರಾಷ್ಟ್ರೀಯ ಔಷಧ ದರ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ 105 ಬ್ರ್ಯಾಂಡ್ಗಳು ಔಷಧ ದರಗಳು ಇಳಿಯಲಿವೆ. ಸದ್ಯಕ್ಕೆ ಕ್ಯಾನ್ಸರ್ ತಡೆಗೆ ಬಳಸುವ 57 ಔಷಧಗಳು ದರ ನಿಯಂತ್ರಣ ವ್ಯಾಪ್ತಿಯಲ್ಲಿವೆ.
- ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯಲ್ಲಿ ಇದುವರೆಗೆ 1000 ಔಷಧಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಇವುಗಳ ದರ ನಿಯಂತ್ರಣದಲ್ಲಿದೆ.
ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ
- ರಾಸಾಯನಿಕ ಮತ್ತು ರಸಗೊಬ್ಬರಗಳ ಕೇಂದ್ರ ಸಚಿವಾಲಯದ ಅಡಿಯಲ್ಲಿ ಔಷಧೀಯ ಇಲಾಖೆಯಡಿಯಲ್ಲಿ ಸ್ವತಂತ್ರ ಸಂಸ್ಥೆಯಾಗಿದೆ.
- ಇದರ ಕಾರ್ಯಗಳು ಹೀಗಿವೆ:
- ನಿಯಂತ್ರಿತ ಬೃಹತ್ ಔಷಧಗಳು ಬೆಲೆಗಳು ಮತ್ತು ಸೂತ್ರೀಕರಣಗಳನ್ನು ಸರಿಪಡಿಸಿ /
- ಡ್ರಗ್ಸ್ (ಬೆಲೆಗಳ ನಿಯಂತ್ರಣ) ಆದೇಶ, 1995/2013 ಅಡಿಯಲ್ಲಿ ಔಷಧಿಗಳ ಬೆಲೆಗಳು ಮತ್ತು ಲಭ್ಯತೆಯನ್ನು ಜಾರಿಗೆ ತರುವುದು.
- ಪ್ರಾಧಿಕಾರದ ನಿರ್ಧಾರದಿಂದ ಉದ್ಭವಿಸುವ ಎಲ್ಲಾ ಕಾನೂನು ವಿಷಯಗಳನ್ನೂ ನಿಭಾಯಿಸಲು
- ಔಷಧಿಗಳ ಲಭ್ಯತೆಯನ್ನು ಮೇಲ್ವಿಚಾರಣೆ ಮಾಡಲು, ಕೊರತೆಗಳನ್ನು ಗುರುತಿಸುವುದು, ಯಾವುದಾದರೂ ಇದ್ದರೆ ಮತ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು
ಜಾಗತಿಕ ಉಗ್ರ ಮಸೂದ್ ಅಜರ್
ಸುದ್ಧಿಯಲ್ಲಿ ಏಕಿದೆ ?ಜೈಷ್ ಎ ಮೊಹಮದ್ ಭಯೋತ್ಪಾದನೆ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಕೋರಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಹೊಸ ಪ್ರಸ್ತಾವನೆ ಸಲ್ಲಿಸಿವೆ.
ಅಜರ್ ನಿಷೇಧವಾದರೆ ಏನು ಪರಿಣಾಮ?
- ಭದ್ರತಾ ಮಂಡಳಿಯೇ ಆತನನ್ನು ಭಯೋತ್ಪಾದಕನೆಂದು ಘೋಷಿಸಿದರೆ ವಿಶ್ವಸಂಸ್ಥೆಯ ಯಾವ ಸದಸ್ಯ ರಾಷ್ಟ್ರವೂ ಆತನಿಗೆ ರಕ್ಷಣೆ ನೀಡುವಂತಿಲ್ಲ.
- ಆತನ ಖಾಸಗಿ ಮತ್ತು ಆವನ ಸಂಘಟನೆಗಳ ಎಲ್ಲ ಖಾತೆಗಳು, ಆಸ್ತಿ, ಹಣಕಾಸು ವ್ಯವಹಾರಗಳ ಸ್ತಂಭನ, ಆರ್ಥಿಕ ಮೂಲಗಳ ನಿರ್ಬಂಧ.
- ಯಾವುದೇ ವ್ಯಕ್ತಿ, ಸಂಘಟನೆ, ದೇಶ ಹಣಕಾಸು ನೆರವು ನೀಡುವುದನ್ನು ಅಪರಾಧವಾಗಿ ಪರಿಗಣಿಸಲಾಗುತ್ತದೆ.
- ಯಾವುದೇ ದೇಶಕ್ಕೆ ಪ್ರವೇಶ ನೀಡುವಂತಿಲ್ಲ. ತನ್ನ ಮೂಲಕ ಮತ್ತೊಂದು ದೇಶಕ್ಕೆ ಹೋಗಲು ಅವಕಾಶ ನೀಡುವಂತಿಲ್ಲ.
- ಯಾವುದೇ ರಾಷ್ಟ್ರವು ವೈಯಕ್ತಿಕ ಅಥವಾ ಸಂಘಟನೆಗೆ ಸೇರಿದ ಶಸ್ತ್ರಾಸ್ತ್ರ, ವಿಮಾನ, ಯುದ್ಧ ಹಡಗುಗಳ ಸಂಚಾರಕ್ಕೆ ಅವಕಾಶ ನೀಡುವಂತಿಲ್ಲ. ಬಿಡಿಭಾಗ, ತಾಂತ್ರಿಕ ಸಲಹೆ, ನೆರವು, ಮಿಲಿಟರಿ ತರಬೇತಿ ನೀಡುವಂತಿಲ್ಲ.
10 ವರ್ಷದಲ್ಲಿ 4ನೇ ಪ್ರಯತ್ನ
- 2009ರಲ್ಲಿ ಭಾರತದಿಂದ ಪ್ರಸ್ತಾಪ ಸಲ್ಲಿಕೆ
- 2016ರಲ್ಲಿ ಪಠಾಣ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆದ ಕೂಡಲೇ ಅಮೆರಿಕ, ಬ್ರಿಟನ್, ಫ್ರಾನ್ಸ್ ಬೆಂಬಲದೊಂದಿಗೆ ಮತ್ತೊಮ್ಮೆ ಪ್ರಸ್ತಾಪ ಮಂಡನೆ.
- 2017ರಲ್ಲಿ ಪುನಃ ಭಾರತದಿಂದಲೇ ಆಗ್ರಹ.
- 2019ರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್ನಿಂದ ಮತ್ತೆ ಪ್ರಸ್ತಾಪ.
UNSC ಬಗ್ಗೆ
- ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ (UNSC) ಯುನೈಟೆಡ್ ನೇಷನ್ಸ್ನ ಆರು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇಡೀ ವಿಶ್ವಸಂಸ್ಥೆಯಂತೆಯೇ ವಿಶ್ವ ಸಮರ II ರ ನಂತರ, ವಿಶ್ವ ಶಾಂತಿಯನ್ನು ಕಾಪಾಡಿಕೊಳ್ಳುವ ಹಿಂದಿನ ಲೀಗ್ ಆಫ್ ನೇಷನ್ಸ್ನ ವಿಫಲತೆಗಳನ್ನು ಪರಿಹರಿಸಲು ಭದ್ರತಾ ಮಂಡಳಿಯು ರಚನೆಯಾಯಿತು. ಸೆಕ್ಯುರಿಟಿ ಕೌನ್ಸಿಲ್ ತನ್ನ ಮೊದಲ ಅಧಿವೇಶನವನ್ನು 17 ಜನವರಿ 1946 ರಂದು ನಡೆಸಿತು.
ಪಾತ್ರ ಮತ್ತು ಅಧಿಕಾರ
- ಭದ್ರತಾ ಮಂಡಳಿಯು ವಿಶ್ವಸಂಸ್ಥೆಯ ಅತ್ಯಂತ ಶಕ್ತಿಯುತ ಸಂಸ್ಥೆಯಾಗಿದ್ದು, “ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆಗೆ ಪ್ರಾಥಮಿಕ ಜವಾಬ್ದಾರಿಯನ್ನು ಹೊಂದಿದೆ.
- ಶಾಂತಿಪಾಲನಾ ಕಾರ್ಯಾಚರಣೆಗಳ ಸ್ಥಾಪನೆ, ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಸ್ಥಾಪಿಸುವುದು ಮತ್ತು ಭದ್ರತಾ ಮಂಡಳಿಯ ನಿರ್ಣಯಗಳ ಮೂಲಕ ಮಿಲಿಟರಿ ಕಾರ್ಯಾಚರಣೆಗೆ ಅಧಿಕಾರ ನೀಡುವಿಕೆ ಇದರ ಅಧಿಕಾರಗಳಲ್ಲಿ ಸೇರಿವೆ.
- ಇದು ಸದಸ್ಯ ರಾಷ್ಟ್ರಗಳಿಗೆ ಬಂಧಿಸುವ ತೀರ್ಮಾನಗಳನ್ನು ನೀಡುವ ಅಧಿಕಾರ ಹೊಂದಿರುವ ಏಕೈಕ UN ದೇಹವಾಗಿದೆ.
- ಯುಎನ್ ಚಾರ್ಟರ್ ಅಡಿಯಲ್ಲಿ, ಎಲ್ಲಾ ಸದಸ್ಯ ರಾಷ್ಟ್ರಗಳು ಕೌನ್ಸಿಲ್ನ ತೀರ್ಮಾನಗಳಿಗೆ ಅನುಸಾರವಾಗಿ ಬದ್ಧವಾಗಿರುತ್ತವೆ.
ಸದಸ್ಯತ್ವ
- ಇದು 15 ಸದಸ್ಯರನ್ನು ಹೊಂದಿದೆ, ಮತ್ತು ಪ್ರತಿ ಸದಸ್ಯರಿಗೆ ಒಂದು ಮತವಿದೆ.
- ಕೌನ್ಸಿಲ್ ಐದು ಶಾಶ್ವತ ಸದಸ್ಯರನ್ನು ಹೊಂದಿದೆ (ಪಿ -5) ಯುನೈಟೆಡ್ ಸ್ಟೇಟ್ಸ್, ರಷ್ಯಾ, ಚೀನಾ, ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್. ಈ ಶಾಶ್ವತ ಸದಸ್ಯರು ಹೊಸ ಸದಸ್ಯ ರಾಷ್ಟ್ರಗಳು ಅಥವಾ ಸೆಕ್ರೆಟರಿ ಜನರಲ್ ಅಭ್ಯರ್ಥಿಗಳ ಪ್ರವೇಶವನ್ನು ಒಳಗೊಂಡಂತೆ ಯಾವುದೇ ಸಬ್ಸ್ಟಾಂಟಿವ್ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯವನ್ನು ನಿಷೇಧಿಸಬಹುದು.
- ಭದ್ರತಾ ಮಂಡಳಿಯು 10-ಅಲ್ಲದ ಶಾಶ್ವತ ಸದಸ್ಯರನ್ನು ಹೊಂದಿದ್ದು, ಎರಡು-ವರ್ಷಗಳ ಅವಧಿಗೆ ಸೇವೆ ಸಲ್ಲಿಸಲು ಪ್ರಾದೇಶಿಕ ಆಧಾರದ ಮೇಲೆ ಚುನಾಯಿತವಾಗಿದೆ. ಸಂಸ್ಥೆಯ ಅಧ್ಯಕ್ಷತೆಯು ಸದಸ್ಯರ ನಡುವೆ ಮಾಸಿಕ ಸುತ್ತುತ್ತದೆ. ಈ ಹತ್ತು ಅಲ್ಲದ ಶಾಶ್ವತ ಸದಸ್ಯರನ್ನು ಜನರಲ್ ಅಸೆಂಬ್ಲಿ ಎರಡು ವರ್ಷಗಳ ಅವಧಿಗೆ ಚುನಾಯಿಸುತ್ತದೆ.
ಜಿನಿವಾ ಒಪ್ಪಂದ
ಸುದ್ಧಿಯಲ್ಲಿ ಏಕಿದೆ ?ಪಾಕಿಸ್ತಾನದ ವಾಯು ಪಡೆಯ ಯುದ್ಧ ವಿಮಾನಗಳು ಪೆ.27 ಗಡಿ ದಾಟಿ ಭಾರತಕ್ಕೆ ಬಂದಾಗ ಅವುಗಳನ್ನು ಹಿಮ್ಮೆಟ್ಟಿಸಲು ಹೋದ ಭಾರತೀಯ ಸೇನೆಯ ಯುದ್ಧ ವಿಮಾನವೊಂದರ ಪೈಲಟ್ ಅಭಿನಂದನ್ ಆಕಸ್ಮಿಕವಾಗಿ ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಭಾರತವೂ ಜಿನಿವಾ ಒಪ್ಪಂದವನ್ನು ಉಲ್ಲೇಖಿಸಿ ಅಭಿನಂದನ್ ಅವರನ್ನು ಕ್ಷೇಮವಾಗಿ ನೋಡಿಕೊಳ್ಳುವಂತೆ ತಾಕೀತು ಮಾಡಿದೆ.
ಜಿನಿವಾ ಒಪ್ಪಂದ ಎಂದರೇನು? ಅದು ಆದದ್ದು ಯಾವಾಗ? ಒಪ್ಪಂದ ಏನು ಹೇಳುತ್ತದೆ ಇಲ್ಲಿದೆ ಮಾಹಿತಿ.
- ಜಿನಿವಾ ಒಪ್ಪಂದ ಎಂಬುದು ಎರಡು ರಾಷ್ಟ್ರಗಳ ಯುದ್ಧ ಕೈದಿಗಳ ರಕ್ಷಣೆ, ಯೋಗಕ್ಷೇಮಕ್ಕಾಗಿ ಮಾಡಿಕೊಂಡಿರುವ ಕಾನೂನು.
- ಎರಡು ದೇಶಗಳ ನಡುವೆ ನಡೆಯುವ ಯುದ್ಧ ಸಂದರ್ಭದಲ್ಲಿ ಕೈದಿಗಳಾದವರು, ಯುದ್ಧ ಗಾಯಾಳುಗಳು, ಯುದ್ಧದ ಸಮಯದಲ್ಲಿ ಅನಾರೋಗ್ಯಕ್ಕೀಡಾದವರು, ನಾಗರಿಕರಿಗಾಗಿ ಈ ಒಪ್ಪಂದದಲ್ಲಿ ಕಾನೂನು ರೂಪಿಸಲಾಗಿದೆ.
- ಈ ಒಪ್ಪಂದಕ್ಕೆ ಜಿನಿವಾದಲ್ಲಿ 1929ರ ಜುಲೈ 27ರಂದು ಸಹಿ ಹಾಕಲಾಯಿತು.
- ಆದರೂ, ಜಿನಿವಾ ಒಪ್ಪಂದ ಜಾರಿಗೆ ಬಂದದ್ದು 1931ರ ಜೂನ್ 19ರಂದು. ನಂತರ ಇದು ಜಾಗತಿಕವಾಗಿ ಎಲ್ಲ ರಾಷ್ಟ್ರಗಳಿಗೂ ಅನ್ವಯವಾಗಿದೆ.
- ಈ ಒಪ್ಪಂದದ ಪ್ರಕಾರ ಯಾವುದೇ ಯುದ್ಧ ಕೈದಿಯನ್ನು ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುವಂತಿಲ್ಲ.
- ಅವರಿಗೆ ಅನ್ನಾಹಾರ, ಉಡುಗೆ, ವೈದ್ಯಕೀಯ ಸೇವೆ ಒದಗಿಸಬೇಕು. ಮಾನವೀಯವಾಗಿ ನಡೆಸಿಕೊಳ್ಳಬೇಕು.
- ಎರಡು ದೇಶಗಳ ನಡುವಿನ ಯುದ್ಧ ಪೂರ್ಣಗೊಂಡ ನಂತರ ಕೈದಿಗಳನ್ನು ಅವರವರ ದೇಶಕ್ಕೆ ಬಿಟ್ಟು ಕಳುಹಿಸಬೇಕು ಎಂಬುದೇ ಈ ಒಪ್ಪಂದದ ಮೂಲ ಉದ್ದೇಶ.