“13 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ತರಕಾರಿ ಬೀಜಗಳ ಕಿಟ್ ವಿತರಣೆ
ಸುದ್ಧಿಯಲ್ಲಿ ಏಕಿದೆ ?ರಾಜ್ಯಾದ್ಯಂತ ರೈತರಿಗೆ ತರಕಾರಿ ಬೆಳೆಯಲು ನಾನಾ ತರಕಾರಿ ಬೀಜಗಳಿಗೆ ಸಹಾಯಧನವಾಗಿ ಪ್ರತಿ ಎಕರೆಗೆ 2,000 ರೂ. ನೀಡುವ ‘ತರಕಾರಿ ಬೀಜಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅಧಿಕೃತ ಚಾಲನೆ ನೀಡಿದೆ.
- ಪ್ರತಿ ಎಕರೆಯಲ್ಲಿ ತರಕಾರಿ ಬೆಳೆಯಲು 4,000 ರೂ. ಘಟಕ ವೆಚ್ಚವನ್ನು ಅಂದಾಜಿಸಿ, ಈ ಪೈಕಿ ಬೀಜಗಳ ವೆಚ್ಚವಾಗಿ ತೋಟಗಾರಿಕೆ ಇಲಾಖೆ ಮೂಲಕ 2,000 ರೂ. ವಿತರಣೆಗೆ ಸರಕಾರ ಆದೇಶ ಹೊರಡಿಸಿದೆ.
- ಈ ಉದ್ದೇಶಕ್ಕೆ 15 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಯಾವೆಲ್ಲ ತರಕಾರಿಗೆ ಧನ ಸಹಾಯ ದೊರೆಯಲಿದೆ ?
- ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಟೊಮೆಟೊ, ಬದನೆಕಾಯಿ, ಬೀನ್ಸ್, ಬೆಂಡೆಕಾಯಿ, ಗೋರಿಕಾಯಿ, ಅಲಸಂದೆ, ಸೊಪ್ಪು, ಎಲೆಕೋಸು, ಹೀರೆಕಾಯಿ, ಹಾಗಲಕಾಯಿ, ಬೀಟ್ರೂಟ್, ಕುಂಬಳಕಾಯಿ ಹಾಗೂ ಇನ್ನಿತರ ತರಕಾರಿ ಬೆಳೆಯಲು ಈ ಯೋಜನೆಯಡಿ ಬೀಜಗಳ ಸಬ್ಸಿಡಿ ಸಿಗಲಿದೆ.
ಯಾವ ರೈತರಿಗೆ ದೊರೆಯಲಿದೆ ?
- ಅರ್ಹ ರೈತರಿಗೆ ಸುಧಾರಿತ ಬೇಸಾಯ ಕ್ರಮದಡಿ ಬೆಳೆಯಲು ಗುಣಮಟ್ಟದ ತರಕಾರಿ ಬೀಜಗಳ ಕಿಟ್ ವಿತರಣೆಗೆ ಕ್ರಮ ವಹಿಸಿವಂತೆ ಆದೇಶದಲ್ಲಿ ಸೂಚಿಸಲಾಗಿದೆ.
- ನೀರಾವರಿ ಸೌಲಭ್ಯವಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಪರಿಶಿಷ್ಟ ಫಲಾನುಭವಿಗಳಿಗೆ ಯೋಜನೆಯಡಿ ಸಹಾಯಧನ ವಿತರಣೆಯಲ್ಲಿ ಆದ್ಯತೆ ನೀಡುವಂತೆ ನಿರ್ದೇಶನ ನೀಡಲಾಗಿದೆ.
ಯೋಜನೆಯ ಉದ್ದೇಶ
- ಗುಣಮಟ್ಟದ ತರಕಾರಿ ಬೀಜಗಳ ಪೂರೈಕೆ ಕೊರತೆ ಇದೆ ಮತ್ತು ಬೀಜಗಳಿಗಾಗಿ ದೊಡ್ಡ ಪ್ರಮಾಣದ ವೆಚ್ಚ ಭರಿಸಬೇಕಾಗಿದೆ.
- ಬೀಜ ಸಬ್ಸಿಡಿ ಮೂಲಕ ತರಕಾರಿ ಬೆಳೆಯಲು ನೆರವಾಗುವ ಮೂಲಕ ರೈತರ ಆದಾಯ ವೃದ್ಧಿಗೆ ಒತ್ತು ನೀಡುವುದು ಹಾಗೂ ಜನರಿಗೆ ಪೌಷ್ಠಿಕ ಆಹಾರ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
- ಕೃಷಿ ಭಾಗ್ಯ ಯೋಜನೆಯ ಭಾಗವಾಗಿಯೇ ಈ ಕಾರ್ಯಕ್ರಮವನ್ನು ಜಾರಿ ಮಾಡುವಂತೆ ಸೂಚಿಸಲಾಗಿದೆ.
ವಾಯು ಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆ
ಸುದ್ಧಿಯಲ್ಲಿ ಏಕಿದೆ ?ಮಿತಿಮೀರುತ್ತಿರುವ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಲು ಪಣತೊಟ್ಟಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ, ರಾಜ್ಯದ ಆಯ್ದ 22 ಜಿಲ್ಲೆಗಳಲ್ಲಿ 32 ನಿರಂತರ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿವೆ.
- ರಾಜ್ಯದಲ್ಲಿ ಗಣಿಗಾರಿಕೆ, ಖನಿಜ ಸಾಗಣೆ, ತ್ಯಾಜ್ಯ ಸಂಗ್ರಹ, ಖನಿಜ ಸಂಸ್ಕರಣೆ, ಕ್ರಷರ್ ಘಟಕ ಸೇರಿ ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿವೆ. ಈ ಚಟುವಟಿಕೆಗಳಲ್ಲಿ ಧೂಳಿನ ಕಣಗಳ ಸಾಂಧ್ರತೆಯ ಹೆಚ್ಚಳದಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ, ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಂಭೀರವಾಗಿ ಪರಿಗಣಿಸಿದೆ.
- ವಾಯು ಮಾಲಿನ್ಯಕ್ಕೆ ಕಾರಣವಾದ ಅಂಶಗಳನ್ನು ತಪಾಸಣೆ ನಡೆಸಿ, ಮಾಲಿನ್ಯ ತಡೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಜತೆ ಕೈಜೋಡಿಸಿದೆ.
ವರ್ಷದೊಳಗೆ ಸ್ಥಾಪನೆ:
- ಮುಂದಿನ ಒಂದು ವರ್ಷದೊಳಗೆ ಈ ನಿರಂತರ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
- ಈ ಮಾಪನ ಆಧರಿಸಿ, ಮಲಿನಕಾರಕಗಳ ಪ್ರಮಾಣ ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿದ್ದಲ್ಲಿ ಅದಕ್ಕೆ ಕಾರಣವಾದ ಅಂಶಗಳನ್ನು ತಕ್ಷಣ ಗುರುತಿಸಲಾಗುತ್ತದೆ.
- ಸಂಬಂಧಿಸಿದ ಇಲಾಖೆ, ಸಂಸ್ಥೆ ಅಥವಾ ವ್ಯಕ್ತಿಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿಯಮಾನುಸಾರ ನಿರ್ದೇಶನ ನೀಡಿ ವಾಯು ಮಾಲಿನ್ಯ ತಡೆಗೆ ಈ ಕೇಂದ್ರಗಳು ಸಹಕಾರಿಯಾಗಲಿವೆ.
- ವಾಯುಗುಣಮಟ್ಟ ಮಾಪನಕ್ಕಾಗಿ ಭಾರತೀಯ ಮಾನಕ ಬ್ಯೂರೋ ನಿಗದಿಪಡಿಸಿರುವ ಮಾನದಂಡದಂತೆ 2011ನೇ ಸಾಲಿನ ಜನಗಣತಿ ಆಧರಿಸಿ, ನಿರಂತರ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
- ರಾಜ್ಯದ ನಾನಾ ಕಡೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಈಗಾಗಲೇ 29 ನಿರಂತರ ವಾಯು ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಜತೆಗೆ ಆಯ್ದ ಸ್ಥಳಗಳಲ್ಲಿ ಪ್ರತಿ ಘಟಕಕ್ಕೆ ಅಂದಾಜು 3 ಕೋಟಿ ರೂ. ವ್ಯಯಿಸಿ, 22 ಜಿಲ್ಲೆಗಳಲ್ಲಿ 32 ನಿರಂತರ ವಾಯುಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
ಒಟ್ಟು 73.6ಕೋಟಿ ರೂ. ವೆಚ್ಚ:
- 22 ಜಿಲ್ಲೆಗಳಲ್ಲಿ ಒಟ್ಟು 32 ನಿರಂತರ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ಒಟ್ಟು 6 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಬಳ್ಳಾರಿ, ಕಲಬುರಗಿ, ಚಿತ್ರದುರ್ಗ, ಬಾಗಲಕೋಟ, ಕೊಪ್ಪಳ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಮತ್ತು ಇನ್ನುಳಿದ ಜಿಲ್ಲೆಗಳಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಪನ್ಮೂಲಗಳಿಂದ ವೆಚ್ಚ ಭರಿಸಲು ಉದ್ದೇಶಿಸಲಾಗಿದೆ.
- 11ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ 3 ಕೋಟಿ ರೂ. ವೆಚ್ಚ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಪನ್ಮೂಲದಿಂದ 17 ಜಿಲ್ಲೆಗಳಲ್ಲಿ 48.3 ಕೋಟಿ ರೂ. ವೆಚ್ಚದಲ್ಲಿ ನಿರಂತರ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಒಂದು ವರ್ಷದ ಅವಧಿಯಲ್ಲಿ ಸ್ಥಾಪಿಸಲಾಗುತ್ತಿದೆ
ಎಲ್ಲೆಲ್ಲಿ ಸ್ಥಾಪನೆ ?
- ಬೆಂಗಳೂರು ನಗರ (ಬೆಂಗಳೂರು, ಆನೇಕಲ್), ಬೆಂಗಳೂರು ಗ್ರಾಮಾಂತರ (ನೆಲಮಂಗಲ), ರಾಮನಗರ (ಹಾರೋಹಳ್ಳಿ), ಮೈಸೂರು (ಮೈಸೂರು, ನಂಜನಗೂಡು), ಧಾರವಾಡ (ಹುಬ್ಬಳ್ಳಿ), ದಾವಣಗೆರೆ, ಬೆಳಗಾವಿ (ಗೋಕಾಕ್), ತುಮಕೂರು, ಬಳ್ಳಾರಿ (ಬಳ್ಳಾರಿ, ಹೊಸಪೇಟೆ, ಸಂಡೂರು, ಹರಪನಹಳ್ಳಿ), ಕಲಬುರಗಿ (ಕಲಬುರಗಿ, ಸೇಡಂ, ವಾಡಿ), ವಿಜಯಪುರ, ಶಿವಮೊಗ್ಗ (ಭದ್ರಾವತಿ), ದಕ್ಷಿಣ ಕನ್ನಡ (ಮಂಗಳೂರು), ಚಿತ್ರದುರ್ಗ (ಚಿತ್ರದುರ್ಗ, ಹಿರಿಯೂರು), ಮಂಡ್ಯ , ಯಾದಗಿರಿ, ಚಾಮರಾಜನಗರ (ಗುಂಡ್ಲುಪೇಟೆ), ಬಾಗಲಕೋಟ (ಮುಧೋಳ), ರಾಯಚೂರು, ಹಾಸನ (ಚನ್ನರಾಯಪಟ್ಟಣ), ಉತ್ತರ ಕನ್ನಡ (ದಾಂಡೇಲಿ) ಕೊಪ್ಪಳ ನಗರ ಕೇಂದ್ರದಲ್ಲಿ ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಶಿರಸಿ ಸುಪಾರಿ ಅಡಕೆ
ಸುದ್ಧಿಯಲ್ಲಿ ಏಕಿದೆ ?ಮೊಟ್ಟ ಮೊದಲ ಬಾರಿಗೆ ಅಡಕೆ ವಲಯದಲ್ಲಿ, ಉತ್ತರ ಕನ್ನಡದಲ್ಲಿ ಬೆಳೆಯುವ ‘ಶಿರಸಿ ಸುಪಾರಿ’ ಅಡಕೆಗೆ ಭೌಗೋಳಿಕ ಹೆಗ್ಗುರುತು (ಜಿಯೋಗ್ರಾಫಿಕಲ್ ಇಂಡಿಕೇಶನ್-ಜಿಐ) ಮಾನ್ಯತೆ ಲಭಿಸಿದೆ.
ಎಲ್ಲಿ ಬೆಳೆಯಲಾಗುತ್ತದೆ ?
- ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ದಾಪುರ, ಶಿರಸಿ ತಾಲ್ಲೂಕುಗಳಲ್ಲಿ ಈ ಅಡಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ.
- ಪ್ರತಿಷ್ಠಿತ ಸಹಕಾರಿ ಸಂಸ್ಥೆ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಅಡಕೆಯನ್ನು ಶಿರಸಿ ಸುಪಾರಿ ಎಂದು ಜಿಐ ನೋಂದಣಿ ಮಾಡಿಸಿದೆ. ಈ ಮೂಲಕ ಶಿರಸಿ ಅಡಕೆಗೆ ಹೆಚ್ಚಿನ ಮಹತ್ವ ದೊರಕುವಲ್ಲಿ ಮಹತ್ತರ ಪಾತ್ರ ವಹಿಸಿದಂತಾಗಿದೆ.
- ಶಿರಸಿ ಸುಪಾರಿ ಅಡಕೆಯ ಜಿಐ ಸಂಖ್ಯೆ 464 ಆಗಿದೆ. ಜಿಐ ಮಾನ್ಯತೆ ಪಡೆಯುವ ಸಲುವಾಗಿ ಕಳೆದ 6 ವರ್ಷಗಳಿಂದ ಯತ್ನಿಸಲಾಗಿತ್ತು.
ಜಿಐ ನ ಮಹತ್ವ
- ಜಾಗತಿಕ ಪೈಪೋಟಿಯಿಂದಾಗಿ ಜಗತ್ತಿನಲ್ಲಿ ಎಲ್ಲ ದೇಶಗಳು ಎಲ್ಲ ತರಹದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಿವೆ.
- ಆದರೆ ಈ ಉತ್ಪನ್ನಗÜಳು ಮೂಲ ಉಗಮಸ್ಥಾನದ ಗುಣಮಟ್ಟ ಹೊಂದಿರುವುದಿಲ್ಲ. ಈ ಗುಣಮಟ್ಟದ ಉತ್ಪನ್ನಗಳನ್ನು ಗುರುತಿಸುವ ಸಲುವಾಗಿ ‘ಭೌಗೋಳಿಕ ಹೆಗ್ಗುರುತು‘ ಎಂಬ ಹೊಸ ವ್ಯವಸ್ಥೆಯನ್ನು 2003ರಲ್ಲಿ ಜಾರಿಗೆ ತರಲಾಯಿತು.
- ಇದರಲ್ಲಿ ನೋಂದಣಿಯಾದ ಉತ್ಪನ್ನಗಳು ಯಾವ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಹಾಗೂ ಅದರ ಗುಣಮಟ್ಟ ಹೇಗಿರುತ್ತದೆ ಎಂದು ನಮೂದಿಸಿರುತ್ತಾರೆ.
- ಇದುವರೆಗೆ ಭಾರತದಲ್ಲಿ 325 ಉತ್ಪನ್ನಗಳು ನೋಂದಣಿಯಾಗಿವೆ. ಅದರಲ್ಲಿ ಕರ್ನಾಟಕದ 39 ಉತ್ಪನ್ನಗಳು ಸೇರಿವೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಬೆಳೆಯಾದ ಅಡಕೆ ಶಿರಸಿ ಸುಪಾರಿ ಇದಕ್ಕೆ ಸೇರಿದೆ.
ಪ್ರಯೋಜನ
- ಜಿಐ ಮಾನ್ಯತೆಯಿಂದಾಗಿ ಶಿರಸಿ ಅಡಕೆಗೆ ಹಾವೇರಿ, ಸಾಗರ ಅಥವಾ ಗೋವಾ ಕಡೆಯಿಂದ ಬಂದ ಕಳಪೆ ಅಡಕೆಯನ್ನು ಬೆರೆಸಿ ಮಾರುವ ಪ್ರಕ್ರಿಯೆಗೆ ಕಡಿವಾಣ ಬೀಳುವ ಸಾಧ್ಯತೆ ದಟ್ಟವಾಗಿದೆ. ಭೌಗೋಳಿಕ ಹೆಗ್ಗುರಿತಿಗೆ ಸೇರ್ಪಡೆಯಾಗಿರುವುದರಿಂದ ಅಡಕೆಯು ಸಹ ಉತ್ಕೃಷ್ಟವೆಂದು ಸಾಬೀತಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಭಾರತದ ಶಸ್ತ್ರಾಸ್ತ್ರ ಆಮದು
ಸುದ್ಧಿಯಲ್ಲಿ ಏಕಿದೆ ?ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಮಾರುಕಟ್ಟೆಯ ಶಸ್ತ್ರಾಸ್ತ್ರ ಆಮದಿನಲ್ಲಿ ದಶಕಕ್ಕೂ ಹೆಚ್ಚು ಕಾಲ ಅಗ್ರ ಸ್ಥಾನದಲ್ಲಿದ್ದ ಭಾರತ, ‘ಮೇಕ್ ಇನ್ ಇಂಡಿಯಾ‘ ಯೋಜನೆ ಫಲವಾಗಿ ಯಿಂದಾಗಿ 2014-18 ಅವಧಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ.
- ಇನ್ನೊಂದು ದಶಕದಲ್ಲಿ ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ಭಾರತವು, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಸ್ಥಿತಿಗೆ ತಲುಪಲಿದೆ.
- ಸ್ಟಾಕ್ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್ಐಪಿಆರ್ಐ) ಪ್ರಕಟಿಸಿರುವ ವರದಿಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಜಾಗತಿಕ ಶಸ್ತ್ರಾಸ್ತ್ರ ಖರೀದಿಯಲ್ಲಿ ಶೇ.5ರಷ್ಟು ಪಾಲು ಹೊಂದುವ ಮೂಲಕ ಭಾರತ ಎರಡನೇ ಸ್ಥಾನಕ್ಕೆ ಇಳಿದಿದೆ. ಮೊದಲ ಸ್ಥಾನದಲ್ಲಿರುವ ಸೌದಿ ಅರೇಬಿಯಾ ಶೇ.12ರಷ್ಟು ಪಾಲು ಹೊಂದಿದೆ. ಚೀನಾ (ಶೇ.4.2) ವಿಶ್ವದ ಆರನೇ ಅತಿ ದೊಡ್ಡ ಶಸ್ತ್ರಾಸ್ತ್ರ ಖರೀದಿ ರಾಷ್ಟ್ರವಾಗಿದೆ.
- ರಷ್ಯಾದಿಂದ ಭಾರತ 2009-13ರಲ್ಲಿ ಶೇ.76ರಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದ್ದು, 2014-18ರಲ್ಲಿ ಶೇ.58ರಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದೆ. ಈ ಮೂಲಕ 2009-13 ಮತ್ತು 2014-18 ನಡುವೆ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.42ರಷ್ಟು ಕುಸಿತ ಕಂಡಿದೆ. ಇನ್ನೊಂದೆಡೆ 2014-18ರ ಅವಧಿಯಲ್ಲಿ ರಷ್ಯಾದಿಂದ ಚೀನಾ ಶೇ.70ರಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದೆ.
- ಇತ್ತೀಚಿನ ವರ್ಷಗಳಲ್ಲಿ ರಷ್ಯಾದಿಂದ ಶಸ್ತ್ರಾಸ್ತ್ರ ಆಮದು ಪ್ರಮಾಣವನ್ನು ಭಾರತ ಕಡಿತಗೊಳಿಸಿದೆ. ಬೇರೆ ರಾಷ್ಟ್ರಗಳತ್ತ ಭಾರತ ಮುಖ ಮಾಡಿದ್ದು, ಆತ್ಯಾಧುನಿಕ ಮತ್ತು ವಿಶೇಷ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ಅದು ಆಸಕ್ತಿ ಹೊಂದಿರುವುದು ಇದಕ್ಕೆ ಕಾರಣವಾಗಿದೆ.
- ಅಮೆರಿಕದೊಂದಿಗಿನ ವ್ಯೂಹಾತ್ಮಕ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಹೊಸದಿಲ್ಲಿ ಖರೀದಿಸುತ್ತಿದೆ. 2014-18ರ ಅವಧಿಯಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಫ್ರಾನ್ಸ್ನಿಂದ ಭಾರತಕ್ಕೆ ಶಸ್ತ್ರಾಸ್ತ್ರ ರಫ್ತು ಪ್ರಮಾಣ ಹೆಚ್ಚಿದೆ.
- 2009-2013ಕ್ಕೆ ಹೋಲಿಸಿದರೆ 2014-18ರಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ.39ರಷ್ಟು ಇಳಿಕೆಯಾಗಿದೆ. ಅಮೆರಿಕದಿಂದ ಪಾಕ್ಗೆ ನೀಡುತ್ತಿದ್ದ ಮಿಲಿಟರಿ ನೆರವಿನಲ್ಲಿ ಭಾರಿ ಕಡಿತ ಮಾಡಿರುವ ಕಾರಣ ಆ ದೇಶದ ಆಮದು ಪ್ರಮಾಣ ಗಣನೀಯವಾಗಿ ತಗ್ಗಿದೆ.
- 2009-2013 ಮತ್ತು 2014-18ರ ನಡುವೆ ಅಮೆರಿಕದಿಂದ ಶಸ್ತ್ರಾಸ್ತ್ರ ಆಮದು ಶೇ.81ರಷ್ಟು ಕುಸಿದಿದೆ. ಕಳೆದ ಐದು ವರ್ಷಗಳಲ್ಲಿ ಚೀನಾದಿಂದ ಅತಿ ಹೆಚ್ಚು ಅಂದರೆ ಶೇ.37ರಷ್ಟು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಆಮದು ಮಾಡಿಕೊಂಡಿದೆ.
ಶಸ್ತ್ರಾಸ್ತ್ರ ಆಮದು ಇಳಿಕೆಗೆ ಕಾರಣವೇನು?
- ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಬಳಕೆಗೆ ಭಾರತ ಮುಂದಾಗಿರುವುದು
- ರಷ್ಯಾ ಮತ್ತು ಫ್ರಾಸ್ಸ್ನಿಂದ ಭಾರತಕ್ಕೆ ಯುದ್ಧ ವಿಮಾನಗಳು ಹಾಗೂ ಜಲಾಂತರ್ಗಾಮಿ ನೌಕೆಗಳ ಪೂರೈಕೆಯಲ್ಲಿ ವಿಳಂಬವಾಗಿರುವುದು
2014-18ರ ಅವಧಿಯಲ್ಲಿ ಶಸ್ತ್ರಾಸ್ತ್ರ ಆಮದು ಮಾಡಿಕೊಂಡ ಟಾಪ್ 10 ರಾಷ್ಟ್ರಗಳು
ಸ್ಥಾನ ದೇಶ ಆಮದು ಪ್ರಮಾಣ (%)
(1) ಸೌದಿ ಅರೇಬಿಯಾ 12 (2) ಭಾರತ 9.5 (3) ಈಜಿಪ್ಟ್ 5.1
(4) ಆಸ್ಪ್ರೇಲಿಯಾ 4.6 (5) ಅಲ್ಜಿರಿಯಾ 4.4 (6) ಚೀನಾ 4.2
(7) ಯುಎಇ 3.7 (8) ಇರಾಕ್ 3.7 (9) ದಕ್ಷಿಣ ಕೊರಿಯಾ 3.1 (10) ವಿಯೆಟ್ನಾಂ 2.9
ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ
- ಸ್ಟಾಕ್ಹೋಮ್ ಇಂಟರ್ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ಎನ್ನುವುದು ಸ್ವೀಡನ್ನ ಮೂಲದ ಅಂತರರಾಷ್ಟ್ರೀಯ ಸಂಸ್ಥೆ, ಸಂಘರ್ಷ, ಶಸ್ತ್ರಾಸ್ತ್ರಗಳು, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿರಸ್ತ್ರೀಕರಣದ ಬಗ್ಗೆ ಸಂಶೋಧನೆಗೆ ಮೀಸಲಾಗಿರುತ್ತದೆ.
- 1966 ರಲ್ಲಿ ಸ್ಥಾಪಿತವಾದ SIPRI, ಮುಕ್ತ ಮೂಲಗಳ ಆಧಾರದ ಮೇಲೆ ನೀತಿ, ವಿಶ್ಲೇಷಕರು, ಮಾಧ್ಯಮಗಳು ಮತ್ತು ಆಸಕ್ತಿ ಹೊಂದಿರುವ ಜನರಿಗೆ ಮಾಹಿತಿ, ವಿಶ್ಲೇಷಣೆ ಮತ್ತು ಶಿಫಾರಸುಗಳನ್ನು ಒದಗಿಸುತ್ತದೆ. SIPRI ಸ್ಟಾಕ್ಹೋಮ್ನಲ್ಲಿದೆ
ಗುಪ್ತಚರ ಸಮಿತಿ
ಸುದ್ಧಿಯಲ್ಲಿ ಏಕಿದೆ ?ವಿಶ್ವದಲ್ಲೇ ‘ಅತ್ಯಂತ ದುಬಾರಿ ಚುನಾವಣೆ‘ ಎಂದು ಬಣ್ಣಿಸಲಾಗಿರುವ 2019ರ ಲೋಕಸಭಾ ಸಮರದಲ್ಲಿ ಕುರುಡು ಕಾಂಚಾಣಕ್ಕೆ ಕಡಿವಾಣ ಹಾಕಲು ಈ ಬಾರಿ ಚುನಾವಣಾ ಆಯೋಗ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
- ಚುನಾವಣೆ ವೇಳೆ ಅಕ್ರಮ ಹಣ ಸಾಗಣೆ, ಮತದಾರರಿಗೆ ಹಣ ಹಂಚಿಕೆ ಸೇರಿದಂತೆ ಕಾಳಧನ ಸೃಷ್ಟಿ ಹಾಗೂ ಬಳಕೆ ಮೇಲೆ ಹದ್ದಿನ ಕಣ್ಣಿಡಲು 10ಕ್ಕೂ ಹೆಚ್ಚು ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಜಂಟಿ ಸಮಿತಿಯೊಂದನ್ನು ರಚಿಸಲಾಗಿದೆ.
- ‘ಬಹು ಇಲಾಖಾ ಚುನಾವಣಾ ಗುಪ್ತಚರ ಸಮಿತಿ‘ ಹೆಸರಿನ ಈ ಸಮಿತಿಯಲ್ಲಿ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಉನ್ನತಾಧಿಕಾರಿಗಳಿಂದ ಹಿಡಿದು ಸಿಆರ್ಪಿಎಫ್, ಸಿಐಎಸ್ಎಫ್ನಂತಹ ಭದ್ರತಾ ಪಡೆಗಳ ಡಿಜಿಗಳವರೆಗೂ ವಿಭಿನ್ನ ಇಲಾಖೆಗಳಿಗೆ ಸೇರಿದ ಹಿರಿಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.
ಬ್ಯಾಂಕ್ ವಹಿವಾಟಿನ ಮೇಲೆ ನಿಗಾ
- ಈ ಸಮಿತಿ ನಾನಾ ಬ್ಯಾಂಕ್ಗಳ ಹಿರಿಯ ಅಧಿಕಾರಿಗಳನ್ನೂ ಒಳಗೊಂಡಿದ್ದು, ಕಳೆದ 2-3 ತಿಂಗಳಲ್ಲಿ ಬ್ಯಾಂಕ್ಗಳಲ್ಲಿ ದಾಖಲಾದ ಅಧಿಕ ಮೊತ್ತದ ಜಮೆ ಅಥವಾ ವಿತ್ಡ್ರಾವಲ್ಗಳ ಮೇಲೆ ಕಣ್ಣಿಡಲಾಗುವುದು.
ಇದರ ಉದ್ದೇಶವೇನು?
- ಚುನಾವಣೆ ಭರಾಟೆಯಲ್ಲಿ ಅಕ್ರಮ ಸಂಪತ್ತು ಸೃಷ್ಟಿಗೆ ತಡೆ
- ನಾನಾ ರಾಜ್ಯಗಳ ನಡುವೆ ಅಕ್ರಮ ಹಣ ಸಾಗಣೆಗೆ ಬ್ರೇಕ್
- ಮತದಾರರಿಗೆ ಕಪ್ಪುಹಣ ಹಂಚಿಕೆ ಮತ್ತು ಆಮಿಷಕ್ಕೆ ಅಂಕುಶ
- ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆ
ಹೈ ಪವರ್ ಸಮಿತಿ
- ಕೇಂದ್ರೀಯ ನೇರ ತೆರಿಗೆ ಮಂಡಳಿ, ಕೇಂದ್ರೀಯ ಪರೋಕ್ಷ ತೆರಿಗೆ ಮಂಡಳಿ, ಜಾರಿ ನಿರ್ದೇಶನಾಲಯ, ಕಂದಾಯ ಗುಪ್ತಚರ ನಿರ್ದೇಶನಾಲಯ, ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೊ, ಹಣಕಾಸು ಗುಪ್ತಚರ ಘಟಕದ ಹಿರಿಯ ಅಧಿಕಾರಿಗಳು; ಸಿಆರ್ಪಿಎಫ್ ಡಿಜಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಡಿಜಿ, ಸಶಸ್ತ್ರ ಸೀಮಾಬಲ ಡಿಜಿ, ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ ಡಿಜಿ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊ ಡಿಜಿ ಈ ಸಮಿತಿಯ ಸದಸ್ಯರು.
ದಕ್ಷಿಣ ರಾಜ್ಯಗಳಲ್ಲಿ ನಿಗಾ
- ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಚುನಾವಣೆ ವೇಳೆ ಅಕ್ರಮ ಹಣದ ದಂಧೆಯ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಈ ರಾಜ್ಯಗಳ ಮೇಲೆ ವಿಶೇಷ ನಿಗಾವನ್ನು ಸಮಿತಿ ಇರಿಸಲಿದೆ.
ಗರಿಷ್ಠ 70 ಲಕ್ಷ ರೂ. ಮಿತಿ
- ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪ್ರಚಾರ ವೆಚ್ಚಕ್ಕೆ ಆಯೋಗ ಗರಿಷ್ಠ 70 ಲಕ್ಷ ರೂ.ಗಳ ಮಿತಿ ವಿಧಿಸಿದೆ. ಸಾಮಾಜಿಕ ಜಾಲತಾಣ ನಿರ್ವಹಣೆ, ಕೆಲಸಗಾರರ ಸಂಬಳ, ಪ್ರವಾಸವೂ ಇದರಲ್ಲಿ ಸೇರಿದೆ. (ಆಂಧ್ರಪ್ರದೇಶ, ಸಿಕ್ಕಿಂ, ಗೋವಾಕ್ಕೆ ಮಾತ್ರ 54 ಲಕ್ಷ ರೂ).
- 50,000 ಕೋಟಿ ರೂ. ಈ ಬಾರಿ ಲೋಕಸಭಾ ಚುನಾವಣೆಯ ಒಟ್ಟು ಅಂದಾಜು ವೆಚ್ಚ
- 4 ಕೋಟಿ ರೂ. ಫೆ.7ರಿಂದ ಮಾ.2ರವರೆಗೆ ಫೇಸ್ಬುಕ್ನಲ್ಲಿ ನಾನಾ ಪಕ್ಷಗಳ ಒಟ್ಟು ಪ್ರಚಾರ ವೆಚ್ಚ
- 5 ಕೋಟಿ ರೂ. ಈ ಅವಧಿಯಲ್ಲಿ ಫೇಸ್ಬುಕ್ಗೆ ಬಿಜೆಪಿಯ ಜಾಹೀರಾತು ವೆಚ್ಚ
- 6 ಲಕ್ಷರೂ. ಈ ಅವಧಿಯಲ್ಲಿ ಕಾಂಗ್ರೆಸ್ ಪ್ರಚಾರ ವೆಚ್ಚ
ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟ ಸ್ಥಗಿತ
ಸುದ್ಧಿಯಲ್ಲಿ ಏಕಿದೆ ?ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ಭಾರತವೂ ಸ್ಥಗಿತಗೊಳಿಸಿದೆ.
- ತಕ್ಷಣದಿಂದಲೇ ಬೋಯಿಂಗ್ 737-ಮ್ಯಾಕ್ಸ್ ವಿಮಾನಗಳ ಹಾರಾಟ ಸ್ಥಗಿತಗೊಳಿಸಲು ನಾಗರಿk ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನಿರ್ಧರಿಸಿದೆ.
- ಸಂಪೂರ್ಣ ಸುರಕ್ಷತಾ ಪರೀಕ್ಷೆಗಳನ್ನು ನಡೆಸಿ ಅಗತ್ಯ ಮಾರ್ಪಾಡುಗಳನ್ನು ಮಾಡುವ ವರೆಗೂ ಈ ವಿಮಾನಗಳ ಹಾರಾಟಕ್ಕೆ ಅನುಮತಿಯಿಲ್ಲ.
- ಪ್ರಯಾಣಿಕರ ಸುರಕ್ಷತೆಯೇ ಗರಿಷ್ಠ ಆದ್ಯತೆ. ಜಗತ್ತಿನಾದ್ಯಂತ ಎಲ್ಲ ವಿಮಾನ ಯಾನ ನಿರ್ದೇಶಕರು, ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ತಯಾರಿಕರ ಜತೆ ನಾವು ಸಂಪರ್ಕದಲ್ಲಿದ್ದು, ಪ್ರಯಾಣಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ವಿಮಾನಯಾನ ಸಚಿವಾಲಯ ಟ್ವೀಟ್ ಮಾಡಿದೆ.
- ಸ್ಪೈಸ್ ಜೆಟ್ ತನ್ನಲ್ಲಿರುವ 12-13 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಜೆಟ್ ಏರ್ವೇಸ್ ಕೂಡ ತನ್ನ ಐದು ಮ್ಯಾಕ್ಸ್ ವಿಮಾನಗಳ ಹಾರಾಟ ನಿಲ್ಲಿಸಿದೆ.
ಕಾರಣ
- ಇಥಿಯೋಪಿಯಾದಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನ ದುರಂತಕ್ಕೀಡಾಗಿ 157 ಪ್ರಯಾಣಿಕರು ಮೃತಪಟ್ಟ ಬಳಿಕ ಜಗತ್ತಿನ ಹಲವು ದೇಶಗಳು ಈ ಬಗೆಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಿವೆ.
- ಸಿಂಗಾಪುರ ಮತ್ತು ಆಸ್ಟ್ರೇಲಿಯಾಗಳು ತಮ್ಮ ವಾಯು ಪ್ರದೇಶದ ಮೇಲೆ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳು ಹಾದುಹೋಗುವುದನ್ನೂ ನಿಷೇಧಿಸಿವೆ.
ಬಿ737 ಮ್ಯಾಕ್ಸ್ ವಿಮಾನಗಳ ಪೈಲಟ್ ತರಬೇತಿಗೆ ಸಿಮ್ಯುಲೇಟರ್ಗಳೂ ಭಾರತದಲ್ಲಿಲ್ಲ:
- ಸಿಂಗಾಪುರ ಏರ್ಲೈನ್ಸ್ನ ಅಂಗಸಂಸ್ಥೆ ಸಿಲ್ಕ್ ಏರ್ ಹೈದರಾಬಾದ್-ಬೆಂಗಳೂರು ನಡುವೆ ಇದೇ ಬಿ737 ಮ್ಯಾಕ್ಸ್ ವಿಮಾನದ ಹಾರಾಟ ನಡೆಸುತ್ತಿತ್ತು. ಆದರೆ ಈಗ ಅವುಗಳ ಹಾರಾಟ ನಿಲ್ಲಿಸಿದ್ದು, ಬೋಯಿಂಗ್ 7373 ಮ್ಯಾಕ್ಸ್ ಬದಲಿಗೆ ಬೋಯಿಂಗ್ 737 ಎನ್ಜಿ (ನ್ಯೂ ಜನರೇಶನ್) ವಿಮಾನಗಳನ್ನು ಹಾರಿಸಲು ನಿರ್ಧರಿಸಿದೆ’.
- ಆಸ್ಟ್ರೇಲಿಯಾ ನಾಗರಿಕ ವಿಮಾನಯಾನ ಸುರಕ್ಷತಾ ಪ್ರಾಧಿಕಾರ ಕೂಡ ಬಿ 737 ಮ್ಯಾಕ್ಸ್ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ಚೀನಾ, ಇಂಡೋನೇಷ್ಯಾ ಕೂಡ ಇದೇ ಕ್ರಮ ಅನುಸರಿಸಿವೆ.
- ಈ ವಿಮಾನಗಳ ಹಾರಾಟಕ್ಕೆ ಕ್ಯಾಪ್ಟನ್ಗಳು 1000 ಗಂಟೆಗಳ ಹಾಗೂ ಸಹ ಪೈಲಟ್ಗಳು 500 ಗಂಟೆಗಳ ಹಾರಾಟದ ಅನುಭವ ಹೊಂದಿರಬೇಕು ಎಂದು ಡಿಜಿಸಿಎ ನಿರ್ದೇಶನ ಹೊರಡಿಸಿತ್ತು. ಆದರೆ ನತದೃಷ್ಟ ಲಯನ್ ಏರ್ ಮತ್ತು ಇಥಿಯೋಪಿಯಾದ ಬಿ737 ಮ್ಯಾಕ್ಸ್ ವಿಮಾನಗಳ ಪೈಲಟ್ಗಳು ಅಪಾರ ಅನುಭವಿಗಳೇ ಆಗಿದ್ದರು ಎಂದು ತಿಳಿದ ಬಳಿಕ ಈ ನಿರ್ದೇಶನವನ್ನು ವಾಪಸ್ ಪಡೆದಿತ್ತು.