27 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ಕರ್ನಾಟಕದ ಕಾರ್ಖಾನೆಯಲ್ಲಿ ಟೊಯೋಟಾದಿಂದ ಪರಿಸರಸ್ನೇಹಿ ವ್ಯವಸ್ಥೆ
ಸುದ್ಧಿಯಲ್ಲಿ ಏಕಿದೆ ?ಇಂಗಾಲದ ಮಾಲಿನ್ಯವನ್ನು ಉತ್ಪಾದನಾ ಸ್ಥಳದಲ್ಲಿ ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಜಪಾನ್ ಮೂಲದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್(ಟಿಕೆಎಂ) ಪ್ರಯತ್ನ ನಡೆಸಿದ್ದು, ಈ ನಿಟ್ಟಿನಲ್ಲಿ ಯಶಸ್ಸನ್ನೂ ಪಡೆದಿದೆ. ಕರ್ನಾಟಕದ ಬಿಡದಿಯಲ್ಲಿರುವ ತನ್ನ ಕಾರ್ಖಾನೆಯಲ್ಲಿ ಪರಿಸರಸ್ನೇಹಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
- ವಿದ್ಯುತ್ಗಾಗಿ ನವೀಕರಿಸಬಹುದಾದ ಇಂಧನದ ಅವಲಂಬನೆಯನ್ನು ಕಂಪನಿ ಹೆಚ್ಚಿಸಿದ್ದು, ಇದರಿಂದಾಗಿ 51,000 ಟನ್ಗಳಷ್ಟು ಇಂಗಾಲದ ಮಾಲಿನ್ಯ ತಗ್ಗಿದಂತಾಗಿದೆ. ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಬಿಡದಿಯ ಕಾರ್ಖಾನೆಯಲ್ಲಿ ಕಾರುಗಳ ಉತ್ಪಾದನೆ ಮತ್ತಿತರ ಕಾರ್ಯಾಚರಣೆಗಳಿಗೆ ಬಳಕೆಯಾಗುವ ಶೇ.87ರಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸಲಾಗುತ್ತಿದೆ.
- 2050ರ ಹೊತ್ತಿಗೆ ಜಾಗತಿಕ ತಾಪಮಾನ ಹೆಚ್ಚಳದ ಸವಾಲನ್ನು ನಿಭಾಯಿಸುವುದು ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಕಿರ್ಲೋಸ್ಕರ್ ಸಹ ಮುಂದಾಗಿದೆ.
- ಬಿಡದಿಯಲ್ಲಿ ಟಿಕೆಎಂ, ಸೌರಶಕ್ತಿ ಘಟಕಗಳನ್ನು ನಿರ್ಮಾಣ ಮಾಡಿದೆ. 4 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಇದರಿಂದ ಸಾಧ್ಯವಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಸೋಲರ್ ಪಾರ್ಕ್ಗಳನ್ನೂ ನಿರ್ಮಾಣ ಮಾಡಿದೆ. ಹಣಕಾಸು ವರ್ಷ 2015-16ರಲ್ಲಿ ಶೇ.15ರಷ್ಟು ನವೀಕರಿಸಬಹುದಾದ ಇಂಧನದ ಉತ್ಪಾದನೆ ಹೆಚ್ಚಳವಾಗಿತ್ತು. 2017-18ರಲ್ಲಿ ಶೇ.65ರಷ್ಟು ಹೆಚ್ಚಳವಾಗಿದೆ.
ಬಿಗ್ ಡೇಟಾ
ಸುದ್ಧಿಯಲ್ಲಿ ಏಕಿದೆ ?ಭಾರತದಲ್ಲಿ ಏಪ್ರಿಲ್ 1ರಿಂದ ತೆರಿಗೆ ಪದ್ಧತಿಯ ವಿಧಾನದಲ್ಲಿ ಹೊಸ ಬದಲಾವಣೆಯಾಗಲಿದೆ. ಆದಾಯ ತೆರಿಗೆ ಇಲಾಖೆಯ ಸಿಬ್ಬಂದಿ, ತೆರಿಗೆದಾರರ 360 ಡಿಗ್ರಿ ಪ್ರೊಫೈಲ್ ಅನ್ನು ಪರಿಶೀಲಿಸಲಿದ್ದಾರೆ. ಇದಕ್ಕಾಗಿ ಬಿಗ್ ಡೇಟಾ ತಂತ್ರಜ್ಞಾನವನ್ನು ಇಲಾಖೆ ಬಳಸಿಕೊಳ್ಳಲಿದೆ.
- ಬೆಲ್ಜಿಯಂ, ಕೆನಡಾ, ಆಸ್ಪ್ರೇಲಿಯಾದಲ್ಲಿ ಬಿಗ್ ಡೇಟಾ ಬಳಸಲಾಗುತ್ತಿದ್ದು, ಭಾರತ ಕೂಡ ಇದೇ ಸಾಲಿಗೆ ಸೇರ್ಪಡೆಯಾಗಲಿದೆ.
ಉದ್ದೇಶ
- ತೆರಿಗೆ ವಂಚನೆಯನ್ನು ತಡೆಗಟ್ಟಿ, ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದು, ತೆರಿಗೆ ನೆಲೆಯನ್ನು ವೃದ್ಧಿಸುವುದು, ಈಗಾಗಲೇ 10 ಲಕ್ಷ ರೂ.ಗಿಂತ ಹೆಚ್ಚು ತೆರಿಗೆ ಬಾಕಿ ಇರಿಸಿಕೊಂಡವರ ವಿರುದ್ಧ ಹದ್ದಿನ ಕಣ್ಣಿಟ್ಟು ತೆರಿಗೆ ಬಲೆ ಬೀಸುವುದು ಇದರ ಉದ್ದೇಶ.
- ಈ ಯೋಜನೆಯಲ್ಲಿ ಸಾಂಪ್ರದಾಯಿಕ ಮೂಲಗಳ ಜತೆಗೆ ಅಸಾಂಪ್ರದಾಯಿಕ ಮೂಲಗಳಿಂದಲೂ ತೆರಿಗೆದಾರರ ಆದಾಯಗಳ ಮೌಲ್ಯಮಾಪನ ನಡೆಯಲಿದೆ. ಅಂದರೆ ಫೇಸ್ಬುಕ್, ಇನ್ಸ್ಟಾಗ್ರಾಂ ಪ್ರೊಫೈಲ್ಗಳಿಂದಲೂ ತೆರಿಗೆದಾರರ ಆದಾಯ, ಸಂಪತ್ತಿನ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ತೆರಿಗೆದಾರರ ಆದಾಯಕ್ಕೂ, ಅವರ ಖರ್ಚುವೆಚ್ಚಗಳಿಗೂ ಹೊಂದಿಕೆಯಾಗದಿದ್ದರೆ, ಅದು ಐ-ಟಿ ಇಲಾಖೆಯ ಗಮನಕ್ಕೆ ಬರುವ ಸಾಧ್ಯತೆ ಹೆಚ್ಚಲಿದೆ.
ಪ್ರಾಜೆಕ್ಟ್ ಇನ್ಸೈಟ್:
- ಆದಾಯ ತೆರಿಗೆ ಇಲಾಖೆಯು ಪ್ರಾಜೆಕ್ಟ್ ಇನ್ಸೈಟ್ ಎಂಬ ಮೆಶೀನ್ ಲರ್ನಿಂಗ್ ಸಾಫ್ಟ್ವೇರ್ ಬಳಸಲಿದ್ದು, ಇದರಿಂದ ಜಾಲತಾಣಗಳಲ್ಲಿ ತೆರಿಗೆದಾರರ ಪೋಸ್ಟ್ಗಳು ಹಾಗೂ ಆದಾಯ ಮತ್ತು ವೆಚ್ಚಗಳ ತುಲನೆ ಮಾಡಲು ಸಾಧ್ಯವಾಗಲಿದೆ. ಮಾರ್ಚ್ 15ರಿಂದಲೇ ತೆರಿಗೆ ಇಲಾಖೆ ಈ ವ್ಯವಸ್ಥೆಯನ್ನು ಬಳಸುತ್ತಿದ್ದು, ಏಪ್ರಿಲ್ 1ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ.
- ಸಾಮಾನ್ಯವಾಗಿ ತೆರಿಗೆ ಇಲಾಖೆಯು ಬ್ಯಾಂಕ್ಗಳಿಂದ ದೊರೆಯುವ ಮಾಹಿತಿಯನ್ನು ಆಧರಿಸಿ ತೆರಿಗೆದಾರರ ಆದಾಯದ ಮೇಲೆ ನಿಗಾ ವಹಿಸುತ್ತದೆ. ಆದರೆ ಪ್ರಾಜೆಕ್ಟ್ ಇನ್ಸೈಟ್ನಲ್ಲಿ ವ್ಯಕ್ತಿಯ ಸಾಮಾಜಿಕ ಜಾಲತಾಣದಿಂದಲೂ ಮಾಹಿತಿ ಸಂಗ್ರಹಿಸಲಿದೆ.
ಭಾರತದಲ್ಲಿ ಡೇಟಾ ಲೇಬಲರ್ಗಳಿಗೆ ಡಿಮಾಂಡ್!
ಸುದ್ಧಿಯಲ್ಲಿ ಏಕಿದೆ ?ಎಐ ವ್ಯವಸ್ಥೆ ರೂಪಿಸಲು ಡೇಟಾ ಲೇಬಲಿಂಗ್ ಟೀಮ್ ಅತ್ಯಗತ್ಯ. ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದವರೂ ಸೂಕ್ತ ತರಬೇತಿ ಬಳಿಕ ಇಂಥ ಕೆಲಸವನ್ನು ಮಾಡಬಹುದಾಗಿದೆ.
ಏನಿದು ಡೇಟಾ ಲೇಬಲಿಂಗ್?
- ಕೃತಕ ಬುದ್ಧಿಮತ್ತೆ(ಎಐ) ಮತ್ತು ಆಟೋಮೇಷನ್ಗಳಿಂದ ಕೆಲವು ಉದ್ಯಮಗಳಲ್ಲಿ ಉದ್ಯೋಗ ಕಡಿತವಾಗಿದೆ.
- ಆದರೆ, ಎಐ ದೆಸೆಯಿಂದಲೇ ‘ಡೇಟಾ ಲೆಬಲರ್’ ಉದ್ಯೋಗವು ಸೃಷ್ಟಿಯಾಗಿದೆ. ಹೆಚ್ಚಿನ ಕೌಶಲ ಅಗತ್ಯವಿಲ್ಲದ ಸಾಮಾನ್ಯರೂ ಡೇಟಾ ಲೆಬಲರ್ ಉದ್ಯೋಗವನ್ನು ಮಾಡಬಹುದಾಗಿದೆ.
- ಡೇಟಾ ಲೇಬಲರ್ಗಳು ಆಡಿಯೊ ಫೈಲ್ಗಳು, ಪಠ್ಯ(ಟೆಕ್ಸ್ಟ್), ಚಿತ್ರಗಳು, ವಿಡಿಯೊಗಳನ್ನು ತಾವೇ ಖುದ್ದಾಗಿ ಪರಿಶೀಲಿಸಿ/ವೀಕ್ಷಿಸಿ ಡಿಜಿಟಲ್ ಡೇಟಾಗಳಿಗೆ ಅರ್ಥವನ್ನು ಲಗತ್ತಿಸುತ್ತಾರೆ.
- ರಾಶಿರಾಶಿ ಡೇಟಾದಲ್ಲಿ ಅದನ್ನು ವಿಂಗಡಿಸಿ, ಗುರುತಿಸಿ ಟಿಪ್ಪಣಿ ಮಾಡಲಾಗುತ್ತದೆ. ಕ್ಯಾಮೆರಾಗಳು, ಸೆನ್ಸರ್ಗಳು(ಸಂವೇದಕಗಳು), ಇಮೇಲ್ಗಳು, ಸೋಷಿಯಲ್ ಮೀಡಿಯಾ ಸೇರಿದಂತೆ ನಾನಾ ಡೇಟಾವನ್ನು ಗುರ್ತಿಸುವುದು, ಕಲರ್ ಮಾಡುವುದು, ವ್ಯತ್ಯಾಸಗಳನ್ನು ಮಾರ್ಕ್ ಮಾಡುವ ಕೆಲಸವನ್ನು ‘ಡೇಟಾ ಲೇಬಲಿಂಗ್’ ಎಂದು ಕರೆಯಲಾಗುತ್ತದೆ.
ಎಲೆಕ್ಷನ್ ಟೂರಿಸಂ
ಸುದ್ಧಿಯಲ್ಲಿ ಏಕಿದೆ ?ಭಾರತದ ಪ್ರಜಾಪ್ರಭುತ್ವದ ದೊಡ್ಡ ಉತ್ಸವವಾದ ಲೋಕಸಭೆ ಚುನಾವಣೆಯ ಅನುಭವವನ್ನು ವಿದೇಶಿಯರಿಗೆ ಒದಗಿಸಲು ಗುಜರಾತ್ ರಾಜ್ಯದಲ್ಲಿ ‘ಚುನಾವಣಾ ಪ್ರವಾಸೋದ್ಯಮ'(ಎಲೆಕ್ಷನ್ ಟೂರಿಸಂ) ಆರಂಭಗೊಂಡಿದೆ.
- ವಿಶೇಷ ಪ್ಯಾಕೇಜ್ಗಳನ್ನು ವಿದೇಶಿ ಪ್ರವಾಸಿಗಳಿಗೆ ನೀಡಿದ್ದು, ರಾಜ್ಯದ ವಿವಿಧೆಡೆ ನಡೆಯುವ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಭೆಗಳಿಂದ ಬೈಕ್ ರಾರಯಲಿ ತನಕ ನಾನಾ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.
- 20 ಸಂಸ್ಥೆಗಳು ಪ್ರವಾಸದ ಸ್ಪೆಷಲ್ ಪ್ಯಾಕೇಜ್ಗಳನ್ನು ರೂಪಿಸಿವೆ. ಗೈಡ್ಗಳನ್ನು ಒದಗಿಸಿ ಪ್ರವಾಸಿಗಳಿಗೆ ಮಾಹಿತಿ ನೀಡಲಾಗುತ್ತದೆ. 2014ರ ಚುನಾವಣೆಯಲ್ಲಿ ವಿದೇಶಗಳಿಂದ 1,800 ಪ್ರವಾಸಿಗಳು ಬಂದಿದ್ದರು. ಈ ಸಲ 2,500 ದಾಟುವ ನಿರೀಕ್ಷೆ ಇದೆ ಎಂದು ಉದ್ಯಮ ತಜ್ಞರು ಅಂದಾಜು ಮಾಡಿದ್ದಾರೆ.
ಯಾರು ಪ್ರಯೋಜನ ಪಡೆದುಕೊಳ್ಳಬಹುದು ?
- ವಿದ್ಯಾರ್ಥಿಗಳು, ಅಧ್ಯಯನಕಾರರು, ಮಾಧ್ಯಮ ವೃತ್ತಿಪರರು, ರಾಜಕೀಯ ವಿಶ್ಲೇಷಕರು, ಭಾರತದಲ್ಲಿ ಚುನಾವಣೆ ಹೇಗೆ ನಡೆಯುತ್ತದೆ ಎಂದು ಕುತೂಹಲವುಳ್ಳವರು ಎಲೆಕ್ಷನ್ ಟೂರಿಸಂನ ಪ್ರಯೋಜನ ಪಡೆಯುತ್ತಾರೆ.
ಹಿನ್ನಲೆ
- ಭಾರತದ ಚುನಾವಣೆಗಳನ್ನು ಅರಿಯಲು ವಿದೇಶಗಳಿಂದ ಪ್ರವಾಸಿಗಳ ಆಗಮನ. ಗುಜರಾತ್ನಲ್ಲಿ ಎಲೆಕ್ಷನ್ ಟೂರಿಸಂ ವಿಸ್ತಾರಗೊಳ್ಳುತ್ತಿದೆ. ಆರು ದಿನಗಳ ಟೂರ್ ಪ್ಯಾಕೇಜ್ಗೆ 40,000 ರೂ. ನಿಗದಿ ಮಾಡಲಾಗಿದೆ. ಎರಡು ವಾರಗಳ ಸುದೀರ್ಘ ಪ್ಯಾಕೇಜ್ಗಳಿಗೆ 50 ಲಕ್ಷ ರೂ. ಶುಲ್ಕವಿದೆ. 2012ರ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಆರಂಭಗೊಂಡಿದ್ದ ಎಲೆಕ್ಷನ್ ಟೂರಿಸಂ, 2014ರ ಲೋಕಸಭೆ ಮತ್ತು ಈಗಿನ ಲೋಕಸಭೆ ಚುನಾವಣೆ ತನಕ ಬೆಳೆದಿದೆ.
- 2017ರ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಪ್ರವಾಸಿಗಳು ಓಪನ್ ಕಾರ್ನಲ್ಲಿ ಪ್ರಯಾಣಿಸಿದ್ದರು. ರಾರಯಲಿಗಳನ್ನು ವೀಕ್ಷಿಸಿದ್ದರು.
- 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜಪಾನ್, ಯುಎಇ, ಅಮೆರಿಕ ಮತ್ತು ಇತರೆ ಯುರೋಪ್ ದೇಶಗಳಿಂದ ಹೆಚ್ಚಿನ ಪ್ರವಾಸಿಗಳು ಬಂದಿದ್ದರು
ಇಂಡಿಯ ಡಿಜಿಟಲ್ ನ್ಯೂಸ್ ರಿಪೋರ್ಟ್ 2019
ಸುದ್ಧಿಯಲ್ಲಿ ಏಕಿದೆ ?ಮೊಬೈಲ್ ಮಯ ದೇಶವಾಗಿರುವ ಭಾರತದಲ್ಲಿ ಶೇಕಡ 68ರಷ್ಟು ಮಂದಿ ಮೊಬೈಲ್ ಮೂಲಕ ಸುದ್ದಿಗಳು ಮೇಲೆ ಕಣ್ಣಾಡಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಇದು ಅತಿ ಹೆಚ್ಚು ಪ್ರಮಾಣ ಎಂದು ಹೇಳಲಾಗಿದೆ. ಬ್ರೆಜಿಲ್, ಟರ್ಕಿಯಲ್ಲಿ ಮೊಬೈಲ್ ಬಳಕೆ ಹೆಚ್ಚು, ಆದರೆ ಭಾರತದಲ್ಲಿ ಈ ಸಂಖ್ಯೆ ಎರಡೂ ದೇಶಗಳಿಗಿಂತ ದುಪ್ಪಟ್ಟು ಎಂದು ಹೇಳಲಾಗಿದೆ.
- ಇಂಡಿಯ ಡಿಜಿಟಲ್ ನ್ಯೂಸ್ ರಿಪೋರ್ಟ್ 2019ರಲ್ಲಿ ಈ ಅಂಶಗಳನ್ನು ವಿವರಿಸಲಾಗಿದೆ. ರಾಯಿಟರ್ಸ್ ಪತ್ರಿಕೋದ್ಯಮ ಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ.
- ಬಳಕೆದರರು ಹಲವು ಮೂಲಗಳಿಂದ ಸುದ್ದಿಗಳನ್ನು ಪಡೆಯುತ್ತಿದ್ದಾರೆ. ಸರ್ಚ್ ಮೂಲಕ ಶೇಕಡ 32, ಸಾಮಾಜಿಕ ಜಾಲತಾಣಗಳಿಂದ ಶೇಕಡ 24, ನೇರವಾಗಿ ಸುದ್ದಿ ವೆಬ್ಸೈಟ್ಗಳಿಂದ ಮಾಹಿತಿ ಪಡೆಯುತ್ತಿರುವವರ ಸಂಖ್ಯೆ ಶೇಕಡ 18ರಷ್ಟು ಎಂದು ಸಮೀಕ್ಷೆ ವರದಿಗಳು ತಿಳಿಸಿವೆ.
ಸಮೀಕ್ಷೆಯ ಕೆಲವು ಪ್ರಮುಖಾಂಶಗಳು ಹೀಗಿವೆ
- ಆನ್ಲೈನ್ ಸುದ್ದಿ (ಅದರಲ್ಲೂ ಸಾಮಾಜಿಕ ಜಾಲತಾಣ)ಗಳು ಮುದ್ರಣ ಮಾಧ್ಯಮಗಿಂತಲೂ ಹೆಚ್ಚು ತಲುಪುತ್ತಿದೆ. ಆನ್ಲೈನ್ ಸುದ್ದಿಗಳು ಶೇಕಡ 56ರಷ್ಟು ಹಾಗೂ ಮುದ್ರಣ ಮಾಧ್ಯಮ ಸುದ್ದಿಗಳು ಶೇಕಡ 16ರಷ್ಟು ಜನರನ್ನು ತಲುಪುತ್ತಿವೆ. ಇದರಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 35 ವರ್ಷ ವಯಸ್ಸಿಗಿಂತ ಹೆಚ್ಚಾಗಿರುವುದು ಆನ್ ಲೈನ್ ಮತ್ತು ಆಫ್ ಲೈನ್ ಮಾಧ್ಯಮ ಅವಲಂಬಿತರಾಗಿದ್ದಾರೆ.
- ದೇಶದಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಅತಿ ಹೆಚ್ಚು ಅಂದರೆ ಶೇಕಡ 82ರಷ್ಟಿದೆ. ಶೇಕಡ 75 ಮಂದಿ ಫೇಸ್ಬುಕ್, ಹಾಗೂ ಶೇಕಡ 52ರಷ್ಟು ಮಂದಿ ಇತರೆ ಸಾಮಾಜಿಕ ಜಾಲತಾಣ ಮಾಧ್ಯಮಗಳನ್ನು ಬಳಸುತ್ತಿದ್ದಾರೆ.
- ಸುದ್ದಿಗಳ ಖಚಿತತೆ ಬಗ್ಗೆ ಶೇಕಡ 36 ಪ್ರಶ್ನೆ ಮಾಡಿದ್ದಾರೆ. ಇದು ಇತರೆ ದೇಶಗಳಿಗೆ ಹೋಲಿಸಿದರೆ ಅತಿ ಕಡಿಮೆ.
- ಶೇಕಡ 12ರಷ್ಟು ಮಂದಿ ಮೊಬೈಲ್ ನ್ಯೂಸ್ ಅಲರ್ಟ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ.
- ಡಿಜಿಟಲ್ ಸುದ್ದಿಗಾಗಿ ಪಾವತಿ ಮಾಡುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ.
ಗೋಲನ್ ಹೈಟ್ಸ್ ಪ್ರದೇಶ
ಸುದ್ಧಿಯಲ್ಲಿ ಏಕಿದೆ ?ಗೋಲನ್ ಹೈಟ್ಸ್ ಭೂಪ್ರದೇಶದ ಮೇಲಿನ ಇಸ್ರೇಲ್ನ ಸಾರ್ವಭೌಮತ್ವವನ್ನು ಅಂಗೀಕರಿಸುವ ಘೋಷಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಗೋಲನ್ ಹೈಟ್ಸ್ನ ವಿವಾದ ಏನು?
- 1967 ರವರೆಗೆ ಗೋಲನ್ ಹೈಟ್ಸ್ ಸಿರಿಯಾದ ಭಾಗವಾಗಿತ್ತು. ಇಸ್ರೇಲ್ 1967 ರಲ್ಲಿ ನಡೆಸಿದ ಸಿಕ್ಸ್ ಡೇ ಯುದ್ಧದ (ಥರ್ಡ್ ಅರಬ್ ಇಸ್ರೇಲಿ ಯುದ್ಧ) ಸಮಯದಲ್ಲಿ ಗೋಲನ್ ಹೈಟ್ಸ್ ಅನ್ನು ವಶಪಡಿಸಿಕೊಂಡಿತು
- 1967ರ ಸಿರಿಯಾ ವಿರುದ್ಧದ ಯುದ್ಧದ ವೇಳೆ ಗೋಲನ್ ಹೈಟ್ಸ್ ಪ್ರದೇಶವನ್ನು ಇಸ್ರೇಲ್ ವಶಪಡಿಸಿಕೊಂಡಿತ್ತು. ಆದರೆ ಈ ಭೂಪ್ರದೇಶದ ಮೇಲಿನ ಸಾರ್ವಭೌಮತ್ವವನ್ನು ಅಂತಾರಾಷ್ಟ್ರೀಯ ಸಮುದಾಯ ಒಪ್ಪಿರಲಿಲ್ಲ.
- ಈ ವಿಷಯಕ್ಕೆ ಸಂಬಂಧಿಸಿದ ಅಮೆರಿಕದ ನೀತಿಯನ್ನು ಬದಲಾಯಿಸಿರುವ ಟ್ರಂಪ್ ಇದೀಗ ಇಸ್ರೇಲ್ ಪರ ಒಲವು ವ್ಯಕ್ತಪಡಿಸಿದ್ದಾರೆ.
- ವಿವಾದಿತ ಗೋಲನ್ ಹೈಟ್ಸ್ ಪ್ರದೇಶದ ಮೇಲೆ ಇಸ್ರೇಲ್ನ ಸಾರ್ವಭೌಮತ್ವಕ್ಕೆ ವಾಷಿಂಗ್ಟನ್ ಅನುಮೋದನೆ ನೀಡಿರುವ ನಿರ್ಧಾರದಿಂದ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಹೊಸ ಉದ್ವಿಗ್ನತೆ ಸೃಷ್ಟಿಯಾಗಲಿದೆ ಎಂದು ರಷ್ಯಾ ಆತಂಕ ವ್ಯಕ್ತಪಡಿಸಿದೆ.
ಗೋಲನ್ ಹೈಟ್ಸ್ ಪ್ರಾಮುಖ್ಯತೆ:
- ಡಮಾಸ್ಕಸ್ (ಸಿರಿಯಾದ ರಾಜಧಾನಿ) ಗೋಲನ್ ಹೈಟ್ಸ್ನಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಇಸ್ರೇಲ್ಗೆ ಇದು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ನೀಡುತ್ತದೆ.
- ಗೋಲನ್ ಹೈಟ್ಸ್ ಪ್ರದೇಶವು ಇಸ್ರೇಲ್ನ ನೀರಿನ ಮುಖ್ಯ ಮೂಲವಾಗಿದೆ. ಗೋಲನ್ ಹೈಟ್ಸ್ನ ಮಣ್ಣು ತುಂಬಾ ಫಲವತ್ತಾದದು, ಇದು ವೈನ್ ಮತ್ತು ತೋಟಗಳನ್ನು ಬೆಳೆಸಲು ಉಪಯುಕ್ತವಾಗಿದೆ
ನಾಸಾದ ಲೇಸರ್ ಸಾಧನವನ್ನು ಚಂದ್ರನಿಗೆ ತಲುಪಿಸಲಿದೆ ಇಸ್ರೊ!
ಸುದ್ಧಿಯಲ್ಲಿ ಏಕಿದೆ ?ಮುಂದಿನ ತಿಂಗಳು ನಡೆಯಲಿರುವ ಭಾರತದ ಚಂದ್ರಯಾನ 2 ವೇಳೆ ಇಸ್ರೊ ನಾಸಾ ನಿರ್ಮಿತ ಲೇಸರ್ ಸಾಧನವೊಂದನ್ನು ಚಂದ್ರನಿಗೆ ತಲುಪಿಸಲಿದೆ
- ಚಂದ್ರ ಮತ್ತು ಭೂಮಿಯ ನಡುವಿನ ಅಂತರವನ್ನು ಅತ್ಯಂತ ನಿಖರವಾಗಿ ಅಳೆಯಬಲ್ಲ ಲೇಸರ್ ರೆಟ್ರೊರಿಫ್ಲೆಕ್ಟರ್ಸ್ ಎಂಬ ಸಾಧನ ಇದಾಗಿದ್ದು, ಇದು ಭೂಮಿಯಿಂದ ಕಳುಹಿಸಲಾದ ಲೇಸರ್ ಸಿಗ್ನಲ್ಗಳನ್ನು ಅಲ್ಲಿಂದ ಪ್ರತಿಬಿಂಬಿಸಲಿದೆ. ಇದರ ಮೂಲಕ ಎರಡು ಆಕಾಶಕಾಯಗಳ ನಡುವಿನ ಅಂತರವನ್ನು ನಿಖರವಾಗಿ ಅಳೆಯಬಹುದು.
ನಾಸಾದ ಸಮಸ್ಯೆ ಏನು ?
- ನಾಸಾ ಕಳುಹಿಸಿದ ಇಂತಹುದೇ ಐದು ಸಾಧನಗಳು ಈಗಾಗಲೇ ಚಂದ್ರನ ಅಂಗಳದಲ್ಲಿವೆ. ಆದರೆ, ಅವುಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅವು ತೀರಾ ದೊಡ್ಡದಾಗಿದ್ದು, ನಿಖರತೆ ದೊರೆಯುತ್ತಿಲ್ಲ ಎನ್ನಲಾಗಿದೆ.
- ಹೀಗಾಗಿ, ಇಸ್ರೇಲ್ ಮತ್ತು ಭಾರತ ಚಂದ್ರನಲ್ಲಿಗೆ ಕಳುಹಿಸುವ ಗಗನ ನೌಕೆಗಳಲ್ಲಿ ತನ್ನ ಸಾಧನವನ್ನು ಇಡಲು ನಾಸಾ ಬಯಸಿದೆ.
ಚಂದ್ರಯಾನ-೨
- ಚಂದ್ರಯಾನ-೨ , ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಾಗು ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ(RKA) ಜಂಟಿಯಾಗಿ ಉದ್ದೇಶಿಸಿರುವ ಚಂದ್ರ ಪರಿಶೋಧನಾ ಅಭಿಯಾನವಾಗಿದ್ದು, ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ೨೦೧೩ರಲ್ಲಿ ಈ ಅಭಿಯಾನವನ್ನು ಉಡಾವಣೆ ಮುಖಾಂತರ ಯಶಸ್ಸು ಮಾಡಲು ಉದ್ದೇಶಿಸಲಾಗಿದೆ.
- (GSLV) ಉಡಾವಣಾ ವಾಹನವು, ಭಾರತದಲ್ಲಿ ನಿರ್ಮಾಣಗೊಂಡ ಒಂದು ಚಂದ್ರ ಕಕ್ಷೆಗಾಮಿ ಹಾಗು ರೋವರ್ ಹಾಗು ರಷ್ಯಾ ನಿರ್ಮಿಸಿದ ಒಂದು ಗಗನನೌಕೆಯನ್ನು ಒಳಗೊಂಡಿದೆ. ISROದ ಪ್ರಕಾರ, ಈ ಅಭಿಯಾನವು ವಿವಿಧ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಬಳಕೆಮಾಡುವುದರ ಜೊತೆಗೆ ‘ಹೊಸ’ ಪ್ರಯೋಗಗಳನ್ನು ನಡೆಸುತ್ತದೆ.
- ಗಾಲಿಗಳಿರುವ ರೋವರ್ ಚಂದ್ರನ ಮೇಲ್ಮೈ ತಲುಪಿ, ಆ ಸ್ಥಳದ ರಾಸಾಯನಿಕ ವಿಶ್ಲೇಷಣೆ ನಡೆಸಲು ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ.
- ಅಲ್ಲಿನ ಅಗತ್ಯ ಅಂಕಿಅಂಶದ ದತ್ತಾಂಶವನ್ನು ಭೂಮಿಗೆ ಚಂದ್ರಯಾನ-೨ ಕಕ್ಷೆಗಾಮಿಯ ಮೂಲಕ ತಲುಪಿಸಲಾಗುತ್ತದೆ. ಚಂದ್ರಯಾನ-1 ಅಭಿಯಾನದ ಯಶಸ್ಸಿಗೆ ಕಾರಣರಾದ ಮೈಲ್ಸ್ವಾಮಿ ಅಣ್ಣಾದೊರೈ ನೇತೃತ್ವದ ತಂಡವು ಚಂದ್ರಯಾನ-೨ ಅಭಿಯಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.