“03 ಮೇ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸುವರ್ಣ ತ್ರಿಭುಜ ಬೋಟ್
ಸುದ್ಧಿಯಲ್ಲಿ ಏಕಿದೆ ? ಸುವರ್ಣ ತ್ರಿಭುಜ ಬೋಟ್ ಅವಶೇಷಗಳು ಪತ್ತೆಯಾಗಿವೆ. ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟ್ ನ ಅವಶೇಷಗಳನ್ನು ಐಎನ್ಎಸ್ ನಿರೀಕ್ಷಕ್ ಪತ್ತೆ ಮಾಡಿದೆ.
- ಮಹಾರಾಷ್ಟ್ರ ಬಳಿಯ ಮಾಲವಾಣದಲ್ಲಿ ಬೋಟ್ ಪತ್ತೆಯಾಗಿದೆ.
ಹಿನ್ನಲೆ
- 2018 ಡಿಸೆಂಬರ್ 15ಕ್ಕೆ ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದಾಗ ಈ ಬೋಟ್ ನಾಪತ್ತೆಯಾಗಿತ್ತು. ಉತ್ತರಕನ್ನಡ ಜಿಲ್ಲೆಯ ಐದು, ಉಡುಪಿಯ ಇಬ್ಬರು ಸೇರಿ 7 ಮೀನುಗಾರರು ಬೋಟಿನಲ್ಲಿ ಇದ್ದರು.
‘ಫನಿ’ಚಂಡಮಾರುತದ ವಿವರ
ಸುದ್ಧಿಯಲ್ಲಿ ಏಕಿದೆ ? ಒಡಿಶಾದಲ್ಲಿ 2 ದಶಕಗಳ ಬಳಿಕ ಭೀಕರ ಅವಾಂತರ ಸೃಷ್ಟಿಗೆ ಕಾರಣವಾಗಿರುವ ಫನಿ ಚಂಡಮಾರುತ ಒಡಿಶಾ ತೀರಕ್ಕೆ ಅಪ್ಪಳಿಸಲಿದ್ದು, ಈ ಭೀಕರ ಚಂಡಮಾರುತದ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.
- ಆಗ್ನೇಯ ಏಷ್ಯಾದಲ್ಲಿ ಚಂಡಮಾರುತಗಳಿಗೆ ಹೆಸರಿಡುವುದು ಒಂದು ಸಾಮಾನ್ಯ ಪ್ರಕ್ರಿಯೆ. ವಿಶ್ವ ಹವಾಮಾನ ಸಂಸ್ಥೆಯು ಚಂಡಮಾರುತಗಳಿಗೆ ಹೆಸರು ಸೂಚಿಸುವಂತೆ ರಾಷ್ಟ್ರಗಳಿಗೆ ಸೂಚಿಸುವ ಪದ್ಧತಿ ಇದೆ. ಆಗ್ನೇಯ ಏಷ್ಯಾದಲ್ಲಿ ದೇಶಗಳು ಸೂಚಿಸುವ ಹೆಸರುಗಳಿಂದ ಅವುಗಳನ್ನು ಕರೆಯಲಾಗುತ್ತದೆ.
- ಈ ಸಲ ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಒಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಗಳು ತಲಾ ಎಂಟರಂತೆ 64 ಹೆಸರುಗಳನ್ನು ಕಳುಹಿಸಿದ್ದವು.
- ಅದರಲ್ಲಿ ಬಾಂಗ್ಲಾದೇಶ ಸೂಚಿಸಿದ ‘ಫನಿ'(ಎಫ್ಎಎನ್ಐ) ಆಯ್ಕೆ ಮಾಡಲಾಗಿದೆ. ಫನಿ ಎಂದರೆ ಹಾವಿನ ಹೆಡೆ ಎಂದರ್ಥ.
- ಹವಾಮಾನ ಇಲಾಖೆಯು ಇದನ್ನು ‘ಫೊನಿ’ ಎಂದು ಉಚ್ಛರಿಸಲಾಗುತ್ತದೆ ಎಂಬ ಸ್ಪಷ್ಟನೆ ನೀಡಿದ್ದರಿಂದ ಹಾಲಿ ಚಂಡಮಾರುತವನ್ನು ‘ಫೊನಿ’ ಎಂದು ಕರೆಯಲಾಗುತ್ತಿದೆ.
- ಇಂದು ಭಾರತದ ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿರುವ ‘ಫೋನಿ’ ಯ ಇವತ್ತಿನ ವೇಗ ಗಂಟೆಗೆ 200 ಕಿ.ಮೀ.. ‘ಫೋನಿ’ಯನ್ನು ಸಮರ್ಥವಾಗಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವ ಒಡಿಶಾ ಅದಕ್ಕಾಗಿಯೇ 880ಕ್ಕೂ ಹೆಚ್ಚು ಆಶ್ರಯ ಕೇಂದ್ರಗಳನ್ನು ತೆರೆದಿದೆ. ಇವುಗಳಲ್ಲಿ ಏಕ ಕಾಲಕ್ಕೆ 10 ಲಕ್ಷ ಜನರಿಗೆ ವಸತಿ ಮತ್ತು ಆಹಾರ ಕಲ್ಪಿಸುವ ಅವಕಾಶವಿದೆ.
ಮುಂಜಾಗ್ರತಾ ಕ್ರಮ
- ಎನ್ಡಿಆರ್ಎಫ್ ತಂಡಗಳು ಸರ್ವ ಸನ್ನದ್ಧವಾಗಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ.
- ಮುಂಜಾಗ್ರತಾ ಕ್ರಮವಾಗಿ ಇದುವರೆಗೂ 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಒಡಿಶಾದ ಪಾಲಿಗೆ ಎರಡು ದಶಕದಲ್ಲಿಯೇ ಅತ್ಯಂತ ಪ್ರಬಲ ಚಂಡಮಾರುತ ಎನಿಸಿಕೊಳ್ಳಲಿರುವ ಫೊನಿ ಅಬ್ಬರದಿಂದ ಜೀವಹಾನಿ ತಪ್ಪಿಸಲು ಕೈಗೊಂಡಿರುವ ಬಹುದೊಡ್ಡ ತೆರವು ಕಾರ್ಯಾಚರಣೆ ಇದಾಗಿದೆ.
- ರಾಜ್ಯದ 14 ಜಿಲ್ಲೆಗಳು ಹಾನಿ ಎದುರಿಸಲಿದ್ದು, ಅಪಾಯದ ಪ್ರದೇಶದ ನಿವಾಸಿಗಳ ತೆರವು ಕಾರ್ಯಾಚರಣೆ ಶರವೇಗದಲ್ಲಿ ನಡೆಯುತ್ತಿದೆ.
- 1891–2017ರ ವರೆಗೆ ಬಂಗಾಳ ಕೊಲ್ಲಿಯಲ್ಲಿ, ಏಪ್ರಿಲ್ ತಿಂಗಳಲ್ಲಿ ಕೇವಲ 14 ಸೈಕ್ಲೋನ್ ಗಳು ಉದ್ಭವಗೊಂಡಿದ್ದು ಅದರಲ್ಲಿ ಒಂದು ಮಾತ್ರ ಭಾರತದ ಭೂ ಭಾಗದ ಕಡೆಗೆ ಬಂದಿತ್ತು. ಇದೀಗ ‘ಫೋನಿ’ ಚಂಡಮಾರುತ ಕೂಡ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿ ಆ ಬಳಿಕ ಮುಂದಕ್ಕೆ ಸಾಗಲಿದೆ. ಈ ಹಿದೆ 2008ರಲ್ಲಿ ರೂಪುಗೊಂಡಿದ್ದ ನರ್ಗಿಸ್ ಚಂಡಮಾರುತ ಮಯನ್ಮಾರ್ ನಲ್ಲಿ ದಾಂಧಲೆ ಸೃಷ್ಟಿ ಮಾಡಿತ್ತು.
ಹೈದರಾಬಾದ್ ಚಾರ್ಮಿನಾರ್
ಸುದ್ಧಿಯಲ್ಲಿ ಏಕಿದೆ ? ಐತಿಹಾಸಿಕ ಚಾರ್ಮಿನಾರ್ನ ನಾಲ್ಕು ಮಿನಾರ್ಗಳ ಪೈಕಿ ಒಂದರ ಸಣ್ಣ ಭಾಗವೊಂದು ಕುಸಿದುಬಿದ್ದಿದೆ. ಮಿನಾರ್ನ ಅಲಂಕಾರಕ್ಕೆ ಮಾಡಿದ್ದ ಗಾರೆಯ ಒಂದು ಭಾಗ ಉದುರಿಬಿದ್ದಿರುವುದಾಗಿ ಭಾರತೀಯ ಪ್ರಾಚ್ಯು ವಸ್ತು ಇಲಾಖೆ ಹೇಳಿದೆ.
- ಪ್ರಾಚ್ಯ ವಸ್ತು ಇಲಾಖೆ 400 ವರ್ಷಗಳಷ್ಟು ಹಳೆಯ ಸ್ಮಾರಕದ ರಕ್ಷಣಾ ಕಾರ್ಯವನ್ನು ಕೆಲವು ತಿಂಗಳ ಹಿಂದಷ್ಟೇ ವಹಿಸಿಕೊಂಡಿತ್ತು. ಹೊಸ ನಿರ್ಮಾಣದ ಸಣ್ಣ ತುಂಡೊಂದು ಬಿದ್ದಿದೆ. ಗ್ರಾನೈಟ್ನ ನಿರ್ಮಾಣಕ್ಕೆ ಅಲಂಕಾರಕ್ಕೆಂದು ಕಟ್ಟಿದ ಹೊಸ ಗಾರೆ ಭಾಗ ಸರಿಯಾಗಿ ಕೂಡಿಕೊಳ್ಳದೆ ಬಿದ್ದುಹೋಗಿದೆ ಎಂದು ಹೇಳಲಾಗಿದೆ.
- ಹೈದರಾಬಾದ್ ನಗರ ನಿರ್ಮಾತೃವಾಗಿರುವ, ಕುತುಬ್ ಶಾಹಿ ಸಾಮ್ರಾಜ್ಯದ ಐದನೇ ದೊರೆ ಮುಹಮ್ಮದ್ ಕುಲಿ ಕುತುಬ್ ಶಾ 1591ರಲ್ಲಿ ಚಾರ್ಮಿನಾರ್ನ್ನು ಕಟ್ಟಿಸಿದ್ದ. 2010ರಲ್ಲಿ ಭಾರಿ ಮಳೆಯಿಂದಾಗಿ ಮಿನಾರ್ ಒಂದರ ಸಣ್ಣ ಭಾಗ ಕುಸಿದುಬಿದ್ದಿತ್ತು.
- ಚಾರ್ಮಿನಾರ್ ಸುಮಾರು 400 ವರ್ಷಗಳಿಗೂ ಮೇಲ್ಪಟ್ಟ ಮಹಡಿಯಲ್ಲಿ ಮಸೀದಿಯೊಂದಿಗೆ ಐತಿಹಾಸಿಕ ಸ್ಥಳವಾಗಿದೆ ಮತ್ತು ಸುತ್ತಮುತ್ತಲಿನ ಮಾರುಕಟ್ಟೆಗಳಿಗೆ ಹೆಸರುವಾಸಿಯಾಗಿದೆ. ಇದು ಹೈದರಾಬಾದ್ನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈದ್-ಉಲ್-ಅದಾ ಮತ್ತು ಈದ್-ಉಲ್-ಫಿಟ್ರ್ ಮುಂತಾದ ಹಲವು ಪ್ರಸಿದ್ಧ ಉತ್ಸವಗಳನ್ನು ಆಚರಿಸಲಾಗುತ್ತದೆ.
- ಪುರಾತತ್ತ್ವ ಶಾಸ್ತ್ರದ ಮತ್ತು ವಾಸ್ತುಶಿಲ್ಪದ ನಿಧಿ ಎಂದು ಇದನ್ನು ಪಟ್ಟಿ ಮಾಡಲಾಗಿದೆ. ಇದು ಭಾರತದ ಪುರಾತತ್ತ್ವಶಾಸ್ತ್ರದ ಸಮೀಕ್ಷೆಯಿಂದ ಸಿದ್ಧಪಡಿಸಲಾದ ಅಧಿಕೃತ “ಲಿಸ್ಟ್ ಆಫ್ ಮಾನ್ಯೂಮೆಂಟ್ಸ್” ನಲ್ಲಿದೆ. ಇಂಗ್ಲೀಷ್ ಹೆಸರು ಚಾರ್ ಮತ್ತು ಮಿನಾರ್ ಅಥವಾ ಮೀನರ್ ಎಂಬ ಉರ್ದು ಪದಗಳ ಅನುವಾದ ಮತ್ತು ಸಂಯೋಜನೆಯಾಗಿದ್ದು, “ನಾಲ್ಕು ಕಂಬಗಳು” ಎಂದು ಭಾಷಾಂತರಿಸುತ್ತದೆ; ನಾಮಸೂಚಕ ಗೋಪುರಗಳು ನಾಲ್ಕು ಗ್ರ್ಯಾಂಡ್ ಕಮಾನುಗಳಿಂದ ಜೋಡಿಸಲಾದ ಮತ್ತು ಬೆಂಬಲಿತವಾದ ಅಲಂಕೃತ ಗೋಪುರಗಳಾಗಿವೆ
ಪುರಾತತ್ವ ಇಲಾಖೆ ಬಗ್ಗೆ
- ಎಎಸ್ಐ ಅನ್ನು 1861 ರಲ್ಲಿ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಅವರು ಸ್ಥಾಪಿಸಿದರು, ಇವರು ಅದರ ಮೊದಲ ನಿರ್ದೇಶಕ-ಜನರಲ್ ಆಗಿದ್ದರು. ಉಪಖಂಡದ ಇತಿಹಾಸದ ಬಗೆಗಿನ ಮೊದಲ ವ್ಯವಸ್ಥಿತ ಸಂಶೋಧನೆಯು ಏಷಿಯಾಟಿಕ್ ಸೊಸೈಟಿಯಿಂದ ನಡೆಸಲ್ಪಟ್ಟಿತು, ಇದನ್ನು ಬ್ರಿಟಿಷ್ ಇಂಡೊಲೊಜಿಸ್ಟ್ ವಿಲಿಯಂ ಜೋನ್ಸ್ ಅವರು 15 ಜನವರಿ 1784 ರಂದು ಸ್ಥಾಪಿಸಿದರು.
- ಕಲ್ಕತ್ತಾದಲ್ಲಿ ಸಮಾಜವು ಪ್ರಾಚೀನ ಸಂಸ್ಕೃತ ಮತ್ತು ಪರ್ಷಿಯನ್ ಗ್ರಂಥಗಳ ಅಧ್ಯಯನವನ್ನು ಪ್ರೋತ್ಸಾಹಿಸಿತು ಮತ್ತು ವಾರ್ಷಿಕ ಜರ್ನಲ್ ಅನ್ನು ಪ್ರಕಟಿಸಿತು.