“06 ಮೇ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶಾಲಾ ಬ್ಯಾಗ್ ಹೊರೆ
ಸುದ್ಧಿಯಲ್ಲಿ ಏಕಿದೆ ? ಇನ್ನು ಮುಂದೆ ಶಾಲಾ ಮಕ್ಕಳ ದೇಹದ ತೂಕಕ್ಕಿಂತ ಸರಾಸರಿ ಶೇಕಡಾ 10ಕ್ಕಿಂತ ಹೆಚ್ಚು ಅವರ ಶಾಲೆಯ ಬ್ಯಾಗ್ ಇರಬಾರದು ಎಂದು ಸರ್ಕಾರ ನಿಯಮ ರೂಪಿಸಿದೆ.
- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಶಾಲಾ ಮಕ್ಕಳ ಬ್ಯಾಗುಗಳ ತೂಕ ಎಷ್ಟಿರಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಒಂದು ಮತ್ತು ಎರಡನೇ ತರಗತಿ ಮಕ್ಕಳ ಶಾಲಾ ಬ್ಯಾಗುಗಳು ಒಂದೂವರೆ ಕೆ ಜಿಯಿಂದ ಎರಡು ಕೆಜಿ, ಮೂರು, ನಾಲ್ಕು ಮತ್ತು ಐದನೇ ತರಗತಿ ಮಕ್ಕಳ ಬ್ಯಾಗುಗಳು 2ರಿಂದ 3ಕೆಜಿ ತೂಕ ಹೊಂದಿರಬೇಕು.
- 6ರಿಂದ ಒಂಭತ್ತನೇ ತರಗತಿ ಓದುತ್ತಿರುವ ಮಕ್ಕಳ ಬ್ಯಾಗ್ ಗಳು 3ರಿಂದ 4 ಕೆಜಿ ಹಾಗೂ 9 ಮತ್ತು 10ನೇ ತರಗತಿ ಓದುತ್ತಿರುವ ಮಕ್ಕಳ ಶಾಲಾ ಬ್ಯಾಗುಗಳು 5 ಕೆಜಿ ತೂಕವನ್ನು ಹೊಂದಿರಬೇಕು ಎಂದು ಶಿಕ್ಷಣ ಇಲಾಖೆ ಶಾಲೆಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದು ಈ ನಿಯಮ ಕಡ್ಡಾಯವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬೇಕೆಂದು ಆದೇಶ ಹೊರಡಿಸಲಾಗಿದೆ.
- 2016-17ನೇ ಸಾಲಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಮಕ್ಕಳು, ಕಾನೂನು ಮತ್ತು ರಾಷ್ಟ್ರೀಯ ಕಾನೂನು ಶಾಲೆ ಕೇಂದ್ರದ ಸಹಯೋಗದಲ್ಲಿ ನಡೆಸಿದ ಅಧ್ಯಯನದ ಬಳಿಕ ಶಿಕ್ಷಣ ಇಲಾಖೆ ಈ ನಿಯಮ ಹೊರಡಿಸಿದೆ. ನಿಯಮ ಕಡ್ಡಾಯವಾಗಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಜಾರಿಗೆ ತರಬೇಕೆಂದು ಹೇಳಲಾಗಿದ್ದು ಈ ಸಂಬಂಧ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ.
- ಬ್ಯಾಗ್ ರಹಿತ ದಿನ: ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೋಂವರ್ಕ್ ನೀಡಬಾರದು ಎಂದು ಸೂಚಿಸಲಾಗಿದೆ. ಅಲ್ಲದೆ ಅವರ ನೋಟ್ ಪುಸ್ತಕಗಳು 100 ಪುಟಕ್ಕಿಂತ ಹೆಚ್ಚು ಇರಬಾರದು. ತಿಂಗಳಲ್ಲಿ ಪ್ರತಿ ಮೂರನೇ ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಬೇಕು. ಆ ದಿನದಂದು ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳು ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕೆಂದು ಕೂಡ ನಿರ್ದೇಶನ ನೀಡಲಾಗಿದೆ.
- ಮಕ್ಕಳು ಶಾಲೆಗಳಿಗೆ ಬರುವಾಗ ಅಗತ್ಯವಿರುವಷ್ಟೇ ಪುಸ್ತಕಗಳನ್ನು ತರಬೇಕು, ಬ್ಯಾಗುಗಳ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಶಿಕ್ಷಕರು ಮರುದಿನ ಶಾಲೆಗೆ ಬರುವಾಗ ಯಾವೆಲ್ಲ ಪುಸ್ತಕಗಳನ್ನು ತರಬೇಕು ಎಂದು ಹೇಳಬೇಕು.ಶಾಲೆಯಲ್ಲಿ ಮಕ್ಕಳ ಅಟ್ಲಾಸ್ ಮತ್ತು ವಿಜ್ಞಾನದ ಅರ್ಥಕೋಶಗಳಂತಹ ಅಗತ್ಯ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಪ್ರತಿದಿನ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗುವ ಬದಲು ಶಾಲೆಯಲ್ಲಿಯೇ ಬಿಟ್ಟು ಹೋಗುವ ವ್ಯವಸ್ಥೆಯನ್ನು ಅಧ್ಯಾಪಕರು ಮಾಡಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಕಡಿಮೆ ಜಿಎಸ್ಟಿ
ಸುದ್ಧಿಯಲ್ಲಿ ಏಕಿದೆ ? ಕಾರ್ ಪಾರ್ಕಿಂಗ್, ಸ್ವಿಮ್ಮಿಂಗ್ ಪೂಲ್, ಕ್ಲಬ್ಗಳು ಮತ್ತು ಜಿಮ್ಗಳೂ ಸೇರಿದಂತೆ ನಾನಾ ಸ್ಥಳಗಳಿಗೆ ಕಡಿಮೆ ಜಿಎಸ್ಟಿ ಇನ್ನು ಮುಂದೆ ಅನ್ವಯವಾಗಲಿದೆ.
- ಈ ಕುರಿತ ತೆರಿಗೆ ವಿಷಯದಲ್ಲಿದ್ದ ಗೊಂದಲ ಮತ್ತು ಅನಿಶ್ಚಿತತೆಗಳನ್ನು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ಸ್ನ(ಎಎಆರ್) ಪಶ್ಚಿಮ ಬಂಗಾಳ ಶಾಖೆಯು ನಿವಾರಿಸಿದೆ.
- ಈ ಸೇವೆಗಳು ಸಂಯೋಜಿತ ನಿರ್ಮಾಣ ಸೇವೆಯೊಳಗೆಯೇ(ಕನ್ಸ್ಟ್ರಕ್ಚನ್ ಸರ್ವಿಸ್) ಬರುತ್ತವೆ. ಇವುಗಳನ್ನು ಪ್ರತ್ಯೇಕಿಸುವಂತಿಲ್ಲ. ಇತರೆ ಸೇವೆಗಳ ರೀತಿ ಶೇ.18ರ ಜಿಎಸ್ಟಿಯನ್ನು ಬಿಲ್ಡರ್ಗಳು ಗ್ರಾಹಕರಿಗೆ ವಿಧಿಸಬಾರದು. ಬದಲಿಗೆ ಕಡಿಮೆ ದರದ ಶೇ.12 ಅಥವಾ ಶೇ.5ರ ಜಿಎಸ್ಟಿಯನ್ನಷ್ಟೇ ವಿಧಿಸಬೇಕು ಎಂದು ಎಎಆರ್ ತನ್ನ ಆದೇಶದಲ್ಲಿ ಹೇಳಿದೆ.
- ಎಎಆರ್ ಆದೇಶದ ಬಳಿಕ, ಅಗ್ಗದ ಮನೆಗಳಿಗೆ ಶೇ.5ರ ಜಿಎಸ್ಟಿ ಮತ್ತು ಇತರೆ ಮನೆಗಳಿಗೆ ಶೇ.8ರ ಜಿಎಸ್ಟಿ ಅನ್ವಯವಾಗಲಿದೆ. ಈ ಸೇವೆಗಳಿಗೆ ಈ ತನಕ ಪ್ರಮುಖ ಕಂಪನಿಗಳನ್ನೂ ಒಳಗೊಂಡ ಬಿಲ್ಡರ್ಗಳು ಶೇ.18ರ ಜಿಎಸ್ಟಿ ವಿಧಿಸುತ್ತಿದ್ದರು.
- ”ಪ್ಲಾಟ್ ಖರೀದಿಸಿದ ವ್ಯಕ್ತಿಯು ಕಾರ್ ಪಾರ್ಕಿಂಗ್ ಸ್ಥಳ ಮತ್ತು ಇತರೆ ಸಾಮಾನ್ಯ ಬಳಕೆಯ ಪ್ರದೇಶವನ್ನು ಮುಕ್ತವಾಗಿ ಬಳಸಬೇಕು. ಇದಕ್ಕೆ ಹೆಚ್ಚಿನ ಜಿಎಸ್ಟಿ ವಿಧಿಸುವಂತಿಲ್ಲ. ಇಡೀ ಸಂಯೋಜಿತ ವಿನ್ಯಾಸದಲ್ಲಿಯೇ ಎಲ್ಲವೂ ಬರುತ್ತದೆ. ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ,” ಎಂದು ಎಎಆರ್ ಹೇಳಿದೆ.
ಅಡ್ವಾನ್ಸ್ ರೂಲಿಂಗ್ಸ್ (AAR) ಪ್ರಾಧಿಕಾರ ಎಂದರೇನು ?
- AAR ನ ಜವಾಬ್ದಾರಿಯು ಅನಿವಾಸಿಗಳ ಆದಾಯ-ತೆರಿಗೆ ಹೊಣೆಗಾರಿಕೆಯನ್ನು ಮತ್ತು ನಿರ್ದಿಷ್ಟ ವಿಶೇಷ ವರ್ಗಗಳ ನಿವಾಸಿಗಳನ್ನು ಖಚಿತಪಡಿಸುವ ಸೌಲಭ್ಯವನ್ನು ಒದಗಿಸುವುದು. ಒಂದು ಘಟಕದ ಅಥವಾ ಕಂಪನಿಯು ಅದರ ವ್ಯವಹಾರದ ತೆರಿಗೆ ಹೊಣೆಗಾರಿಕೆ ಕುರಿತು ಯಾವುದೇ ಅನುಮಾನ ಹೊಂದಿದ್ದರೆ, ಅವರು AAR ಗೆ ಹೋಗಬಹುದು.
- ಇಲ್ಲಿ AAR ಒಂದು ಆಡಳಿತವನ್ನು ನೀಡುತ್ತದೆ ಮತ್ತು ಅದು ಕಂಪನಿಯ ಅಧಿಕಾರಿಗಳಿಗೆ ಮತ್ತು ತೆರಿಗೆ ಅಧಿಕಾರಿಗಳಿಗೆ ನೀತಿ ಮಾರ್ಗದರ್ಶಿಯಾಗಿ ಪರಿಣಮಿಸುತ್ತದೆ. ಹಾಗಾಗಿ, ಕಂಪೆನಿಗಳು ತಮ್ಮ ಆದಾಯ ತೆರಿಗೆ ವ್ಯವಹಾರಗಳನ್ನು ಮುಂಚಿತವಾಗಿ ಚೆನ್ನಾಗಿ ಯೋಜಿಸಬಹುದು ಮತ್ತು ದೀರ್ಘವಾದ ಮತ್ತು ದುಬಾರಿ ದಾವೆ ತಪ್ಪಿಸ ಬಹುದು.
- ಅಡ್ವಾನ್ಸ್ ರೂಲಿಂಗ್ಗಳ ಯೋಜನೆಯು 1961 ರ ಆದಾಯ ತೆರಿಗೆ ಕಾಯಿದೆ ಅಡಿಯಲ್ಲಿ ಪರಿಚಯಿಸಲ್ಪಟ್ಟಿದೆ. ಇದು 1993 ರ ಹಣಕಾಸಿನ ಆಕ್ಟ್ನಿಂದ ಬಲಪಡಿಸಲ್ಪಟ್ಟಿದೆ. ಮುಂಚಿತವಾಗಿ ತೀರ್ಪುಗಳನ್ನು ನಿರ್ವಹಿಸುವ ಆದಾಯ ತೆರಿಗೆ ಕಾಯಿದೆಯ ಅಧ್ಯಾಯ XIX-B, 1-6-1993. ಯೋಜನೆಯಡಿಯಲ್ಲಿ ಮುಂಗಡ ತೀರ್ಪು ನೀಡುವ ಅಧಿಕಾರವನ್ನು ಸ್ವತಂತ್ರ ನ್ಯಾಯಾಧೀಶರಿಗೆ ವಹಿಸಿಕೊಡಲಾಗಿದೆ. ಅಂತೆಯೇ, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರು ನೇತೃತ್ವದ ಒಂದು ಉನ್ನತ ಮಟ್ಟದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಮತ್ತು ಅರ್ಜಿದಾರರ ಮೇಲೆ ಬಂಧಿಸುವ ತೀರ್ಪುಗಳನ್ನು ಪ್ರಕಟಿಸುವ ಅಧಿಕಾರವನ್ನು ಇದು ಹೊಂದಿದೆ. ಸೂಚಿಸಲಾದ ಕಾರ್ಯವಿಧಾನ ಸರಳ, ಅಗ್ಗದ, ವೇಗವಾದ ಮತ್ತು ಅಧಿಕೃತವಾಗಿದೆ.
- ಅಡ್ವಾನ್ಸ್ ರೂಲಿಂಗ್ ಎನ್ನುವುದು ಲಿಖಿತ ಅಭಿಪ್ರಾಯ ಅಥವಾ ಅಧಿಕೃತ ನಿರ್ಧಾರ ಎಂದರೆ ವಹಿವಾಟು ಅಥವಾ ಉದ್ದೇಶಿತ ವಹಿವಾಟಿನ ತೆರಿಗೆ ಪರಿಣಾಮಗಳು ಅಥವಾ ಅದಕ್ಕೆ ಸಂಬಂಧಿಸಿದಂತೆ ಒಂದು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಅದನ್ನು ನಿರೂಪಿಸಲು ಅಧಿಕಾರವನ್ನು ನೀಡುತ್ತದೆ.
AAR ರಚನೆ
- ಅಡ್ವಾನ್ಸ್ ರೂಲಿಂಗ್ಸ್ನ ಪ್ರಾಧಿಕಾರವು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರಾಗಿದ್ದು, ಭಾರತ ಸರಕಾರಕ್ಕೆ ಹೆಚ್ಚುವರಿ ಕಾರ್ಯದರ್ಶಿಗಳ ಶ್ರೇಣಿಯ ಇಬ್ಬರು ಸದಸ್ಯರು, ಭಾರತೀಯ ಕಂದಾಯ ಸೇವೆ ಮತ್ತು ಭಾರತೀಯ ಕಾನೂನಿನ ಸೇವೆಯಿಂದ ಪ್ರತಿಯೊಬ್ಬರು.
- ಒಬ್ಬ ಅನಿವಾಸಿ ಅಥವಾ ನಿವಾಸಿಯಾದ ಕೆಲವು ವರ್ಗಗಳು ಕಾನೂನಿನ ಪ್ರಶ್ನೆಯ ಮೇರೆಗೆ ಪ್ರಾಧಿಕಾರದಿಂದ ಬಂಧಿಸುವ ತೀರ್ಪುಗಳನ್ನು ಪಡೆಯಬಹುದು ಅಥವಾ ಯಾವುದೇ ವ್ಯವಹಾರ / ಪ್ರಸ್ತಾವಿತ ವಹಿವಾಟಿನಿಂದ ಉಂಟಾಗುವ ವಾಸ್ತವಿಕತೆಯು ತನ್ನ ತೆರಿಗೆ ಹೊಣೆಗಾರಿಕೆಯ ನಿರ್ಣಯಕ್ಕೆ ಸಂಬಂಧಿಸಿದಂತೆ ಪಡೆಯಬಹುದು.
ಭಾರತದ ಕ್ಷಿಪ್ರ ಸ್ಪಂದನೆಗೆ ವಿಶ್ವಸಂಸ್ಥೆ ಶ್ಲಾಘನೆ
ಸುದ್ಧಿಯಲ್ಲಿ ಏಕಿದೆ ? ಪೂರ್ವ ಕರಾವಳಿಗೆ ಅಪ್ಪಳಿಸಿದ ಭೀಕರ ಫೊನಿ ಚಂಡಮಾರುತದ ಬಗ್ಗೆ ಸಾಕಷ್ಟು ಮುಂಚಿತವಾಗಿಯೇ ಮುನ್ನೆಚ್ಚರಿಕೆವಹಿಸಿ 10 ಲಕ್ಷಕ್ಕೂ ಅಧಿಕ ಜರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಮೂಲಕ ಸಾವು-ನೋವಿನ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದ ಭಾರತದ ವ್ಯವಸ್ಥೆಯನ್ನು ವಿಶ್ವಸಂಸ್ಥೆ ಮತ್ತು ಇತರ ತಜ್ಞರು ಶ್ಲಾಘಿಸಿದ್ದಾರೆ.
- ಫೊನಿ ಚಂಡಮಾರುತ ಇತ್ತೀಚಿನ ವರ್ಷಗಳಲ್ಲೇ ಬೀಸಿದ ಅತಿ ಭೀಕರವಾದ ಚಂಡಮಾರುತವಾಗಿದೆ. ಒಡಿಶಾ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ವ್ಯಾಪಕ ನಾಶ-ನಷ್ಟ ಉಂಟುಮಾಡಿತು. ಕರಾವಳಿ ರಾಜ್ಯದ 6 ಕೋಟಿ ಜನರನ್ನು ಬಾಧಿಸಿತು. ಬಳಿಕ ಬಾಂಗ್ಲಾದೇಶದ ಕಡೆಗೆ ತಿರುಗಿತು.
- 1999ರಲ್ಲಿ 30 ಗಂಟೆಗಳ ಕಾಲ ರುದ್ರನರ್ತನ ನಡೆಸಿದ್ದ ಸುಪರ್ ಸೈಕ್ಲೋನ್, ಕರಾವಳಿಯಿಂದ 20 ಕಿ.ಮೀಗಳಷ್ಟು ಒಳಕ್ಕೆ ನುಗ್ಗಿ ನಾಶ ನಷ್ಟ ಉಂಟು ಮಾಡಿತ್ತು. ಆಗ 10,000ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದ್ದ ಚಂಡಮಾರುತ ಅಪಾರ ಹಾನಿ ಉಂಟುಮಾಡಿತ್ತು.
- ಆದರೆ ಈ ಬಾರಿ, ಅತ್ಯಾಧುನಿಕ ಮುನ್ಸೂಚನಾ ವಿಧಾನಗಳು, ಜನಜಾಗೃತಿ ಅಭಿಯಾನಗಳು ಹಾಗೂ ವ್ಯವಸ್ಥಿತ ತೆರವು ಕಾರ್ಯಾಚರಣೆಗಳ ಮೂಲಕ ಸೇನೆ ಹಾಗೂ ಸ್ವಯಂಸೇವಕರ ನೆರವಿನೊಂದಿಗೆ ನಡೆಸಲಾಯಿತು.
ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳು
- ಚಂಡಮಾರುತದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ರಕ್ಷಣಾ ಕಾರ್ಯಕರ್ತರು 12 ಲಕ್ಷ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಬೃಹತ್ ರಕ್ಷಣಾ ಕಾರ್ಯ ಆರಂಭಿಸಿದರು.
- ಟಿವಿ, ರೇಡಿಯೋ ಮತ್ತು ಲೌಡ್ ಸ್ಪೀಕರ್ಗಳ ಮೂಲಕ ಆಗಾಗ್ಗೆ ಎಚ್ಚರಿಕೆ ಸಂದೇಶಗಳನ್ನು ನೀಡುತ್ತ, ಮನೆಯೊಳಗೆ ಉಳಿಯುವಂತೆ ಸೂಚನೆ ನೀಡಲಾಗುತ್ತಿತ್ತು.
- ರಕ್ಷಣಾ ಕಾರ್ಯಕರ್ತರಿಗೆ ಉಪಗ್ರಹ ದೂರವಾಣಿಗಳು ಹಾಗೂ ಗಾಳಿ ತುಂಬುವ ದೋಣಿಗಳನ್ನು ಒದಗಿಸಲಾಗಿತ್ತು. ಅಲ್ಲದೆ ಸಾಕಷ್ಟು ಆಹಾರ, ಔಷಧ ಸಾಂಗ್ರಿಗಳನ್ನು ಪೂರೈಸಲಾಗಿತ್ತು.
- 7,000 ಅಡುಗೆ ಮನೆಗಳನ್ನು ಸ್ಥಾಪಿಸಲಾಗಿದ್ದು, 9,000 ನಿರಾಶ್ರಿತರ ಶಿಬಿರಗಳನ್ನು ನಿರ್ಮಿಸಲಾಗಿದೆ. ಒಟ್ಟಾರೆ 45,000ಕ್ಕೂ ಅಧಿಕ ಸ್ವಯಂಸೇವಕರು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
- ತುರ್ತು ಸ್ಪಂದನಾ ಕಾರ್ಯಕರ್ತರು ಈಗ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕಗಳು ಸೇರಿದಂತೆ ಹಾಳಾದ ಮೂಲಸೌಕರ್ಯಗಳ ದುರಸ್ತಿ ಹಾಗೂ ರಸ್ತೆಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
- ಚಂಡಮಾರುತದ ಬಗ್ಗೆ ಏಪ್ರಿಲ್ 25ರಿಂದಲೇ ಮುನ್ನೆಚ್ಚರಿಕೆ ನೀಡುವುದನ್ನು ಆರಂಭಿಸಲಾಗಿತ್ತು. ಹೀಗಾಗಿ ಅಧಿಕಾರಿಗಳಿಗೆ ಸೂಕ್ತ ಯೋಜನೆ ರೂಪಿಸಲು ಸಾಕಷ್ಟು ಕಾಲಾವಕಾಶ ದೊರೆತು ಹಲವಾರು ಜೀವಗಳನ್ನು ಉಳಿಸಲು ಸಾಧ್ಯವಾಯಿತು
ರಕ್ಷಣೆಗೆ ನೆರವಾದ ಇಸ್ರೋ ಉಪಗ್ರಹಗಳು
- ಐದು ಭಾರತೀಯ ಉಪಗ್ರಹಗಳು ಪರಿಸ್ಥಿತಿಯ ಮೇಲೆ ಸತತ ಕಣ್ಣಿಟ್ಟಿದ್ದವು. ಹೀಗಾಗಿ ಫೊನಿ ಚಂಡಮಾರುತ ಸೃಷ್ಟಿಯಾಗುವ ಮೊದಲೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಯಿತು. ಇದರಿಂದಾಗಿ ಹಾನಿಯ ಪ್ರಮಾಣವನ್ನೂ ಬಹಳಷ್ಟು ತಗ್ಗಿಸಲು ನೆರವಾಯಿತು.
- ವಾಯುಭಾರ ಕುಸಿತದಿಂದ ಸೃಷ್ಟಿಯಾದ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇಸ್ರೋ ಉಪಗ್ರಹಗಳು ಪ್ರತಿ 15 ನಿಮಿಷಗಳಿಗೊಮ್ಮೆ ಭೂ ಕೇಂದ್ರಕ್ಕೆ ಮಾಹಿತಿ ರವಾನಿಸುತ್ತಿದ್ದವು. ಇದರಿಂದಾಗಿ ಕಾಲ ಕಾಲಕ್ಕೆ ಮುನ್ನೆಚ್ಚರಿಕೆ ವಹಿಸಲು ಮತ್ತು ನೂರಾರು ಜೀವಗಳನ್ನು ರಕ್ಷಿಸಲು ಸಾಧ್ಯವಾಯಿತು.
- ಇನ್ಸಾಟ್ 3 ಡಿ, ಇನ್ಸಾಟ್ 3ಡಿಆರ್, ಸ್ಕಾಟ್ಸ್ಯಾಟ್-1, ಓಶಿಯನ್ಸ್ಯಾಟ್-2 ಮತ್ತು ಮೇಘ ಟ್ರೋಪಿಕ್ಸ್ ಉಪಗ್ರಹಗಳನ್ನು ಬಳಸಿ ಸತತ ಅಧ್ಯಯನ ನಡೆಸಲಾಯಿತು. ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸುವುದರೊಂದಿಗೆ ಚಂಡಮಾರುತದ ತೀವ್ರತೆ, ನಿಖರವಾದ ಸ್ಥಳ ಮತ್ತು ಚಂಡಮಾರುತದ ಸುತ್ತಲಿನ ಮೋಡಗಳ ನಿಖರ ಮಾಹಿತಿ ಪಡೆಯಲಾಯಿತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
- ಸ್ಕಾಟ್ಸ್ಯಾಟ್-1 ಕಿರು ಉಪಗ್ರಹದಲ್ಲಿ ಅಳವಡಿಸಲಾದ ಸ್ಕಾಟರೋಮೀಟರ್ ಉಪಕರಣ ಫೊನಿ ಚಂಡಮಾರುತದ ಚಲನೆಯ ಮೇಲೆ ಸತತ ನಿಗಾ ಇರಿಸಿತ್ತು. ಸಮುದ್ರದ ಮೇಲ್ಮೈ, ಗಾಳಿಯ ವೇಗ ಮತ್ತು ದಿಕ್ಕುಗಳ ಬಗ್ಗೆ ಓಶಿಯನ್ಸ್ಯಾಟ್-2 ನಿಖರ ಮಾಹಿತಿ ಒದಗಿಸಿತು.
ಜಿಹಾದಿ ಉಗ್ರರ ಮೇಲೆ ಕಣ್ಣು
ಸುದ್ಧಿಯಲ್ಲಿ ಏಕಿದೆ ? ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ.
- ಇಸ್ರೋ ಮೇ.22 ರಂದು ಹೊಸ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಮೂಲಕ ಭಾರತ ಬಾಹ್ಯಾಕಾಶದಿಂದ ಮತ್ತಷ್ಟು ಪರಿಣಾಮಕಾರಿಯಾಗಿ ನಿಗಾ ವಹಿಸುವುದಕ್ಕೆ ಸಾಧ್ಯವಾಗಲಿದೆ.
- ರಿಸ್ಯಾಟ್-2ಬಿಆರ್ 1 ಮೇ.22 ರಂದು ಉಡಾವಣೆಯಾಗಲಿರುವ ಉಪಗ್ರಹವಾಗಲಿದೆ.
ರಿಸ್ಯಾಟ್-2ಬಿಆರ್ 1 ನ ವಿಶೇಷತೆಗಳು
- ಹೊಸ ರಿಸ್ಯಾಟ್ ಉಪಗ್ರಹ ಈ ಹಿಂದಿನ ರಿಸ್ಯಾಟ್ ಉಪಗ್ರಹಕ್ಕಿಂತ ಅತ್ಯಾಧುನಿಕವಾಗಿದ್ದು, ರಿಸ್ಯಾಟ್ ನ x- ಬ್ಯಾಂಡ್ ಸಿಂಥೆಟಿಕ್ ಅಪೆಚ್ಯೂರ್ ರಡಾರ್ (ಎಸ್ಎಆರ್) ಎಲ್ಲಾ ರೀತಿಯ ಹವಾಮಾನಗಳಲ್ಲೂ ನಿಗಾ ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಭದ್ರತಾ ಸಿಬ್ಬಂದಿಗಳಿಗೆ ಹೆಚ್ಚು ನೆರವಾಗಲಿದೆ.
- ದಟ್ಟವಾದ ಮೋಡಗಳನ್ನು ಭೇದಿಸಿ ಭೂಮಿಯ ಮೇಲೆ 1 ಮೀಟರ್ ನಷ್ಟು ಅಂತರಲ್ಲಿ ಇರುವ 2 ವಸ್ತುಗಳನ್ನು ನಿಖರವಾಗಿ ತೋರುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿರಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
- ಭೂಮಿಯ ಮೇಲಿರುವ ಕಟ್ಟಡಗಳು ವಸ್ತುಗಳ ಮೇಲೆ ದಿನಕ್ಕೆ ಕನಿಷ್ಟ 2-3 ಬಾರಿ ಚಿತ್ರಗಳನ್ನು ತೆಗೆಯಲಿರುವ ಈ ಉಪಗ್ರಹ ಪ್ರಮುಖವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿರುವ ಜಿಹಾದಿ ಉಗ್ರರ ಕ್ಯಾಂಪ್ ಗಳ ಮೇಲೆ ಕಣ್ಣಿಟ್ಟಿರಲಿದೆ. ಎಲ್ಲಾ ಹವಾಮಾನಗಳಲ್ಲೂ ನಿಖರತೆಯ ಚಿತ್ರಗಳನ್ನು ಕಳಿಸುವ ಮೂಲಕ ಈ ಹೊಸ ಉಪಗ್ರಹ ಭಾರತೀಯ ಸೇನೆಗೆ ಉಗ್ರರ ಹೆಡೆಮುರಿಕಟ್ಟುವುದಕ್ಕೆ ಸಹಕಾರಿಯಾಗಲಿದೆ.
ನೇಪಾಳ-ಭಾರತ-ಚೀನಾ ನಡುವೆ ರೈಲು ಸಂಪರ್ಕ
ಸುದ್ಧಿಯಲ್ಲಿ ಏಕಿದೆ ? ಭಾರತ ಮತ್ತು ಚೀನಾ ಜತೆ ನೇಪಾಳದ ರಾಜಧಾನಿ ಕಠ್ಮಂಡುಗೆ ಸಂಪರ್ಕ ಕಲ್ಪಿಸುವ ರೈಲು ಸೇವೆ ಯೋಜನೆಯನ್ನು ನೇಪಾಳ ಸರಕಾರ ರೂಪಿಸುತ್ತಿದೆ.
- ಕಠ್ಮಂಡು ಜತೆ ಭಾರತ ಮತ್ತು ಚೀನಾ ಎರಡೂ ದೇಶಗಳಿಗೆ ಸಂಪರ್ಕ ಕಲ್ಪಿಸುವ ‘ಬಿರ್ಗುಂಜ್-ಕಠ್ಮಂಡು‘ ಮತ್ತು ‘ರಸುವಗಂಧಿ-ಕಠ್ಮಂಡು‘ ರೈಲು ಮಾರ್ಗದ ಕುರಿತು ಸವಿವರ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು. ಎರಡು ವರ್ಷದಲ್ಲಿ ಕಾಮಗಾರಿ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಉಭಯ ದೇಶಗಳ ಸಹಯೋಗದಲ್ಲಿ ತಾಂತ್ರಿಕ ಅಧ್ಯಯನವನ್ನು ಈಗಾಗಲೇ ಪೂರೈಸಲಾಗಿದೆ.
- ಭಾರತ-ನೇಪಾಳ ನಡುವೆ ಚೊಚ್ಚಲ ಅಂತರ-ಗಡಿ ರೈಲು ಯೋಜನೆ ಎನಿಸಿರುವ ‘ಜಯನಗರ್-ಬಿಜಲ್ಪುರ್‘ ಮತ್ತು ‘ಬೀರತ್ನಗರ್-ಬತ್ನಾಹ‘ ಮಾರ್ಗದಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಸೇವೆ ಆರಂಭವಾಗಲಿದೆ. ‘ಬಿಜಲ್ಪುರ್-ಬರ್ದಿಬಾಸ್’ ವಲಯದಲ್ಲಿ ಹಳಿ ನಿರ್ಮಾಣ ಕಾರ್ಯವನ್ನೂ ಮುಂದಿನ ವಿತ್ತೀಯ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು
ಮಿಲಿಟರಿ ನೆಲೆ ವಿಸ್ತರಿಸುತ್ತಿರುವ ಚೀನಾ
ಸುದ್ಧಿಯಲ್ಲಿ ಏಕಿದೆ ? ಚೀನಾ ತನ್ನ ಯುದ್ಧ ಸಾಮರ್ಥ್ಯಗಳನ್ನು ಸತತವಾಗಿ ಆಧುನೀಕರಣಗೊಳಿಸುತ್ತಿದೆ. ಅಣ್ವಸ್ತ್ರ ಸಮರ್ಥ ಕ್ಷಿಪಣಿಗಳು ಮತ್ತು ಜಲಾಂತರ್ಗಾಮಿಗಳು, ಸೈಬರ್ ಸಮರಾಸ್ತ್ರಗಳು, ಉಪಗ್ರಹ ನಾಶಕ ಅಸ್ತ್ರಗಳು ಸೇರಿದಂತೆ ಎಲ್ಲ ರಂಗಗಳಲ್ಲೂ ಆಧುನೀಕರಣದತ್ತ ಮುನ್ನುಗ್ಗುತ್ತಿದೆ.
- ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಮಿಲಿಟರಿ ನೆಲೆಗಳನ್ನೂ ಸ್ಥಾಪಿಸುತ್ತಿದೆ. ಒನ್ ಬೆಲ್ಟ್, ಒನ್ ರೋಡ್ (ಒಬಿಒಆರ್) ನಂತಹ ಬಹು ಶತಕೋಟಿ ಡಾಲರ್ಗಳ ಮೂಲಸೌಕರ್ಯ ಯೋಜನೆಗಳನ್ನೂ ಕೈಗೊಳ್ಳುತ್ತಿದೆ.
- 2017ರ ಆಗಸ್ಟ್ನಲ್ಲಿ ಆಫ್ರಿಕಾದ ಜಿಬೌತಿಯಲ್ಲಿ ಮೊದಲ ಸಾಗರೋತ್ತರ ಮಿಲಿಟರಿ ನೆಲೆ ಸ್ಥಾಪಿಸಿದ ಬಳಿಕ ಪಶ್ಚಿಮ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಪೆಸಿಫಿಕ್ಗಳು ಚೀನಾದ ಮುಂದಿನ ಗುರಿಯಾಗಿದೆ. ಅಲ್ಲದೆ ಕರಾಚಿಯಲ್ಲಿ ಜಲಾಂತರ್ಗಾಮಿ ನೆಲೆ ಸ್ಥಾಪಿಸಿದೆ ಎಂದು ಪೆಂಟಗನ್ ವರದಿ ಹೇಳಿದೆ.
- ತೈವಾನ್ ಜಲಸಂಧಿ, ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪವನ್ನು ತಡೆಯಲು ಚೀನಾ ಈಗ ಅತ್ಯಂತ ತ್ವರಿತವಾಗಿ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಇಂಧನ ಸಾಗಾಟ ಮಾರ್ಗವನ್ನು ರಕ್ಷಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದೆ.
- ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಚಟುವಟಿಕೆ ವಿಸ್ತರಣೆಯನ್ನು ಭಾರತ ಅತ್ಯಂತ ಎಚ್ಚರಿಕೆಯಿಂದ ನಿಕಟವಾಗಿ ಅವಲೋಕಿಸುತ್ತಿದೆ. ಲಡಾಖ್ನಿಂದ ಅರುಣಾಚಲ ಪ್ರದೇಶದ ವರೆಗೆ 4,057 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಭಾರತ ಕಟ್ಟೆಚ್ಚರದಿಂದ ಕಾಯುತ್ತಿದೆ. ಭಾರತವನ್ನು ದಕ್ಷಿಣ ಏಷ್ಯಾದಲ್ಲೇ ಕಟ್ಟಿಹಾಕಲು ಚೀನಾ ಪಾಕಿಸ್ತಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ
- ಚೀನಾ 500 ಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿದೆ. ಕೈಹಾಂಗ್ ಸಶಸ್ತ್ರ ಡ್ರೋನ್ಗಳು, ಗುರಿ ನಿರ್ದೇಶಿತ ನಿಖರ ದಾಳಿ ನಡೆಸಬಲ್ಲ 8 ಯುವಾನ್ ದರ್ಜೆಯ ಜಲಾಂತರ್ಗಾಮಿಗಳು ಮತ್ತು ನಾಲ್ಕು 054ಎ ಮಾದರಿಯ ಬಹು ಉದ್ದೇಶಿತ ಹಡಗುಗಳನ್ನು ಪಾಕಿಸ್ತಾನಕ್ಕೆ ಒದಗಿಸಿದೆ.
- 2017ರಲ್ಲಿ ಭಾರತ-ಚೀನಾ ನಡುವೆ ಉದ್ಭವಿಸಿದ 73 ದಿನಗಳ ಡೋಕ್ಲಾಂ ಬಿಕ್ಕಟ್ಟು ಹಾಗೂ 2018ರ ದಮ್ಚೋಕ್ ಮುಖಾಮುಖಿಗಳನ್ನು ಪೆಂಟಗನ್ ವರದಿಯಲ್ಲಿ ಉಲ್ಲೇಖಿಸಿದೆ.