“28th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಎನ್ಜಿಒಗಳು
- ಸುದ್ದಿಯಲ್ಲಿ ಏಕಿದೆ? ದೇಶ-ವಿದೇಶಗಳಿಂದ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸ್ವಯಂ ಸೇವಾ ಸಂಸ್ಥೆ (ಎನ್ಜಿಒ)ಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಪ್ರಾಥಮಿಕ ಹಂತವಾಗಿ ಅನಾಥ ಮಕ್ಕಳ ಪೋಷಣೆ ಹೆಸರಲ್ಲಿ ದೇಣಿಗೆ ಪಡೆಯುವ ಎನ್ಜಿಒಗಳು ಕಡ್ಡಾಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೋಂದಣಿಗೆ ಆದೇಶಿಸಿದೆ.
- ಹಿನ್ನಲೆ: ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಗೊಂದು ಎನ್ಜಿಒ ಬೋರ್ಡ್ ನೇತು ಹಾಕಿಕೊಂಡು ನಿರ್ಗತಿಕ ಮತ್ತು ಅನಾಥ ಮಕ್ಕಳನ್ನು ತುಂಬಿಕೊಂಡಿದ್ದಾರೆ. ಆದರೆ, ಅವರಿಗೆ ಕನಿಷ್ಠ ಸೌಕರ್ಯ ಕೊಡದೆ ಶೋಷಣೆ ಮಾಡುತ್ತಿವೆ. ಮಕ್ಕಳ ಫೋಟೋ, ವಿಡಿಯೋ ತೆಗೆದು ದೇಶ, ವಿದೇಶದಲ್ಲಿ ನೆಲೆಸಿರುವ ಧನಿಕರಿಂದ ಲಕ್ಷಾಂತರ ರೂ. ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಆ ಹಣವನ್ನು ಮಕ್ಕಳ ಭವಿಷ್ಯ ರೂಪಿಸಲು ಬಳಸುವ ಬದಲು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ.
- ಎನ್ಜಿಒಗೆ ಮಾರ್ಗಸೂಚಿ: ಬಾಲ ನ್ಯಾಯ ಕಾಯ್ದೆ ಅನ್ವಯ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ಎನ್ಜಿಒಗಳಿಗೆ ಮಾರ್ಗಸೂಚಿ ರೂಪಿಸಿದ್ದಾರೆ. ಎನ್ಜಿಒ ನಡೆಸಲು ವಿಶೇಷ ಕಟ್ಟಡ ಇರಬೇಕು. ಅದರಲ್ಲಿ ತರಗತಿ ಕೊಠಡಿ, ಅಡುಗೆ ಮನೆ, ಉಗ್ರಾಣ, ಶೌಚಗೃಹ, ಕಾರ್ಯಾಗಾರ ಕೊಠಡಿ ಇಂತಿಷ್ಟೇ ಅಡಿಗಳು ಇರಬೇಕೆಂದು ನಿಗದಿ ಮಾಡಲಾಗಿದೆ. ಆಟದ ಮೈದಾನ ಸೇರಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣ ಮಾಡಿ ಸಾರಿಗೆ ವ್ಯವಸ್ಥೆ ಇರಬೇಕು.
- ಕಾಯ್ದೆ ಜಾರಿಗೆ: ಕಳ್ಳಾಟದಲ್ಲಿ ತೊಡಗಿರುವ ಎನ್ಜಿಒಗಳಿಗೆ ಕಡಿವಾಣ ಹಾಕಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಕಾಯ್ದೆಯನ್ನು ಜಾರಿಗೆ ತಂದಿದೆ. ಜತೆಗೆ ಬಾಲ ನ್ಯಾಯ ಕಾಯ್ದೆ ಅನ್ವಯ ಎನ್ಜಿಒಗಳಿಗೆ ಮಾರ್ಗಸೂಚಿ ರೂಪಿಸಿದೆ. ಪಾಲಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಕನಿಷ್ಠ 500ಕ್ಕೂ ಅಧಿಕ ಎನ್ಜಿಒಗಳಿದ್ದು, ಈ ಪೈಕಿ 283 ಎನ್ಜಿಒಗಳು ಮಾತ್ರ ನೋಂದಣಿಗೆ ಅರ್ಜಿ ಸಲ್ಲಿಸಿವೆ
ಏಕೆ ಈ ನಿರ್ಧಾರ?
- ಅನಾಥ ಮಕ್ಕಳಿಗೆ ಸೂಕ್ತ ಮೂಲಸೌಕರ್ಯ ಕೊಡದಿದ್ದರೆ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಉತ್ತಮ ಶಿಕ್ಷಣ ಕೊಟ್ಟು ಉತ್ತಮ ಪ್ರಜೆಗಳಾಗಿಸಬೇಕು. ಇವುಗಳ ಪಾಲನೆ ಆಗುತ್ತಿಲ್ಲ. ಹೀಗಾಗಿ ಎನ್ಜಿಒಗಳ ಮೇಲೆ ಸರ್ಕಾರ ನಿಗಾ ವಹಿಸಲಿದೆ. ಈ ಮೂಲಕ ಎಲ್ಲ ಎನ್ಜಿಒಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಅನಾಥ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ಬಾಲ ನ್ಯಾಯ ಕಾಯ್ದೆ-44 ಅನ್ವಯ ‘ಪೋಷಕತ್ವ ಕುಟುಂಬ’ ಮತ್ತು ‘ಗುಂಪು ಪೋಷಕತ್ವ’ ಯೋಜನೆ ಜಾರಿಗೆ ತರಲು ಮುಂದಾಗಿದೆ. ಎನ್ಜಿಒದಲ್ಲಿನ ಮಕ್ಕಳನ್ನು ಹೊರತಂದು ಕುಟುಂಬದ ಆಶ್ರಯದಲ್ಲಿ ಬೆಳೆಸಲು ಯೋಜನೆ ರೂಪಿಸಿದೆ.
ಆಹಾರ ಸಮಿತಿ
- ಆಹಾರ ಸಮಿತಿ ರಚಿಸಬೇಕು. ಊಟದಲ್ಲಿ ತರಕಾರಿ, ಹಣ್ಣು, ಮೊಟ್ಟೆ, ಹಾಲು, ಮಾಂಸ, ಮೀನು ಇರಬೇಕು. ಹಬ್ಬ, ರಜೆ ದಿನಗಳಲ್ಲಿ ವಿಶೇಷ ಊಟ ಕೊಡಬೇಕು.
ಮಕ್ಕಳ ಆರೈಕೆಗೆ ತಂದೆ- ತಾಯಿ
- ಅನಾಥ ಮಕ್ಕಳಿಗೆ ತಂದೆ-ತಾಯಿ ಪ್ರೀತಿ ವಾತ್ಸಲ್ಯ ನೀಡಲು ಕಡ್ಡಾಯವಾಗಿ ದಂಪತಿ ಇರಬೇಕು. ಇಲ್ಲವಾದರೆ, ವೇತನ ಕೊಟ್ಟಾದರೂ ದಂಪತಿಯನ್ನು ನೇಮಕ ಮಾಡಿಕೊಳ್ಳಬೇಕು. ಇಲ್ಲವಾದರೆ ಎನ್ಜಿಒ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಮಕ್ಕಳ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.
ನುರಿತ 16 ನೌಕರರು
- ಐವತ್ತು ಮಕ್ಕಳು ಇರುವ ಎನ್ಜಿಒಗೆ ನಿರ್ದೇಶಕ, ಆಪ್ತ ಸಹಾಯಕ, ಮಕ್ಕಳ ಅಭಿವೃದ್ಧಿ ಅಧಿಕಾರಿಯಾಗಿ ಎಂಎ ಪದವೀಧರರನ್ನೇ ನೇಮಿಸಿಕೊಳ್ಳಬೇಕು. ಶಿಕ್ಷಕ, ವೈದ್ಯರು, ಆಡಳಿತ ಹಣಕಾಸು ವಿಭಾಗಕ್ಕೆ ಅಕೌಂಟೆಂಟ್, ನೃತ್ಯ ಶಿಕ್ಷಕ, ಯೋಗ ಶಿಕ್ಷಕ, ಬಾಣಸಿಗ, ಚಾಲಕ, ಸಹಾಯಕ ಸೇರಿ 16 ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು.
ಬೆಂಗಳೂರು ಸಾರಿಗೆ ಬಸ್
- ಸುದ್ದಿಯಲ್ಲಿ ಏಕಿದೆ? ಹಸಿರು, ಕಿತ್ತಳೆ, ನೀಲಿ ಹೀಗೆ ವಿವಿಧ ಬಣ್ಣಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳು ರಾಜಧಾನಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಶೀಘ್ರ ಈ ಎಲ್ಲ ಬಸ್ಗಳೂ ಒಂದೇ ಬಣ್ಣ, ವಿನ್ಯಾಸ ಪಡೆಯಲಿವೆ. ಬಿಎಂಟಿಸಿ ಬ್ರ್ಯಾಂಡ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿಗಮದ ಎಲ್ಲ ಸಾಮಾನ್ಯ ಬಸ್ಗಳನ್ನು ನೀಲಿ-ಬಿಳಿ ಬಣ್ಣಕ್ಕೆ ಪರಿವರ್ತಿಸಲು ನಿರ್ಧರಿಸಲಾಗಿದೆ.
- ಸೇರ್ಪಡೆಯಾಗುತ್ತಿರುವ ಹೊಸ ಬಸ್ಗಳೂ ಇದೇ ಬಣ್ಣದಲ್ಲಿ ಬರಲಿವೆ. ಈಗಾಗಲೇ ಕಾರ್ಯಾಚರಣೆಯಲ್ಲಿರುವ 6 ಸಾವಿರಕ್ಕೂ ಅಧಿಕ ಹಳೇ ಸಾಮಾನ್ಯ ಬಸ್ಗಳು ಫಿಟ್ನೆಸ್ ಪ್ರಮಾಣಪತ್ರ ಪಡೆಯಲು ತೆರಳುವಾಗ ಬಣ್ಣ ಬದಲಿಸಲು ನಿರ್ಧರಿಸಲಾಗಿದೆ. ಹವಾನಿಯಂತ್ರಿತ (ವಜ್ರ-ವಾಯುವಜ್ರ) ಬಸ್ಗಳು ನೀಲಿ ಬಣ್ಣದಲ್ಲೇ ಮುಂದುವರಿಯಲಿವೆ.
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ರತ್ಯೇಕಗೊಳ್ಳುವ ಮೊದಲು ಕೆಂಪು ಬಣ್ಣದ ಬಿಟಿಎಸ್ ಬಸ್ಗಳಿದ್ದವು. 1997ರಲ್ಲಿ ಬಿಎಂಟಿಸಿ ಪ್ರತ್ಯೇಕಗೊಂಡ ಸಂದರ್ಭ ಎಲ್ಲ ಬಸ್ಗಳು ನೀಲಿ-ಬಿಳಿ ಬಣ್ಣ ಪಡೆದವು. ಪ್ರಸ್ತುತ ಸಂಚಾರದಲ್ಲಿರುವ ಸಾಮಾನ್ಯ ಬಸ್ಗಳು ಹಲವು ಬಣ್ಣಗಳಲ್ಲಿವೆ.
- 2015ರಲ್ಲಿ ಮಾರ್ಗಕ್ಕೆ ಅನುಗುಣವಾಗಿ ಬಸ್ಗಳ ಬಣ್ಣ ಬದಲಾಯಿಸಲಾಗಿತ್ತು. ಮೆಟ್ರೋ ಫೀಡರ್ ಬಸ್ಗಳಿಗೆ ಕಿತ್ತಳೆ, ಹವಾನಿಯಂತ್ರಿತ ಬಸ್ಗಳಿಗೆ ನೀಲಿ ಹಾಗೂ ಇತರೆ ಬಸ್ಗಳಿಗೆ ಹಸಿರು ಬಣ್ಣವೆಂದು ನಿಗಮ ನಿರ್ಧರಿಸಿತ್ತು.
- ವಿನ್ಯಾಸವೂ ಬದಲಾಗಿತ್ತು: ಬಣ್ಣದ ಜತೆಗೆ ಬಸ್ ಹೊರಭಾಗದಲ್ಲಿ ಹಲವು ವಿನ್ಯಾಸಗಳೂ ಇದ್ದವು. ಮುಂದಿನ ದಿನಗಳಲ್ಲಿ ಈ ಎಲ್ಲ ಬಸ್ಗಳೂ ಒಂದೇ ಬಣ್ಣದಲ್ಲಿರಲಿವೆ. ಬಿಎಂಟಿಸಿ ಬಸ್ ಎಂದು ಗುರುತಿಸಿಕೊಳ್ಳುವಿಕೆಗೂ ಸಹಕಾರಿಯಾಗಲಿದೆ.
ಯುಜಿಸಿ
- ಸುದ್ದಿಯಲ್ಲಿ ಏಕಿದೆ? ಕೇಂದ್ರ ಸರ್ಕಾರ ಆರು ದಶಕಗಳ ಹಿಂದಿನ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವನ್ನು ರದ್ದುಗೊಳಿಸಿ ಉನ್ನತ ಶಿಕ್ಷಣ ಆಯೋಗ (ಎಚ್ಇಸಿಐ) ರಚಿಸಲು ಮುಂದಾಗಿದೆ.
- ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಶೈಕ್ಷಣಿಕ ಸ್ವಾಯತ್ತತೆ ನೀಡಲು ಹಾಗೂ ಸಂಶೋಧನಾ ಪ್ರವೃತ್ತಿ ವೃದ್ಧಿಸುವ ಉದ್ದೇಶದಿಂದ ಭಾರತೀಯ ಉನ್ನತ ಶಿಕ್ಷಣ ಆಯೋಗ ರಚನೆಗೆ ಸರ್ಕಾರ ನಿರ್ಧರಿಸಿದೆ.
- ಯಶ್ಪಾಲ್ ಹಾಗೂ ಹರಿ ಗೌತಮ್ ಸಮಿತಿ ವರದಿ ಪ್ರಕಾರ ಯುಜಿಸಿ ರದ್ದುಪಡಿಸಿ ಹೊಸ ಆಯೋಗ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಮಿತಿ ಶಿಫಾರಸಿನಂತೆ ಆಯೋಗದಿಂದ ಅನುದಾನ ಹಂಚಿಕೆಯ ಜವಾಬ್ದಾರಿ ಕಿತ್ತುಕೊಳ್ಳಲಾಗಿದೆ. ಆದರೆ ಸಂಪೂರ್ಣ ಉನ್ನತ ಶಿಕ್ಷಣಕ್ಕೆ ಏಕರೂಪ ಆಯೋಗ ರಚಿಸಲು ಕೇಂದ್ರ ವಿಫಲವಾಗಿದೆ.
- ಇಲಾಖೆ ವೆಬ್ಸೈಟ್ನಲ್ಲಿ ಲಭ್ಯವಿರುವ 14 ಪುಟಗಳ ಕರಡು ನಿಯಮ ಪ್ರಕಾರ ನೂತನ ಆಯೋಗವು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ 12 ಸದಸ್ಯರನ್ನು ಹೊಂದಿರಲಿದೆ. ಕೇಂದ್ರ ಸರ್ಕಾರ ಶಿಕ್ಷಣ ತಜ್ಞರನ್ನು ಈ ಹುದ್ದೆಗೆ ಪರಿಗಣಿಸಲಿದ್ದು, ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಏರಿಕೆ ಬಗ್ಗೆ ಮಾತ್ರ ಇನ್ನು ತಲೆಕೆಡಿಸಿಕೊಳ್ಳಲಿದೆ.
- ಎಐಸಿಟಿಇಗೂ ಹೊಸ ರೂಪ?:ತಾಂತ್ರಿಕ ಶಿಕ್ಷಣ ಆಯೋಗವನ್ನು ಕೂಡ ಉನ್ನತ ಶಿಕ್ಷಣ ಆಯೋಗದ ವ್ಯಾಪ್ತಿಗೆ ಸೇರಿಸುವ ಚರ್ಚೆ ನಡೆದಿತ್ತು. ಆದರೆ ವಿರೋಧ ವ್ಯಕ್ತವಾದ ಕಾರಣ ತಾಂತ್ರಿಕ ಶಿಕ್ಷಣ ಆಯೋಗ ಸ್ವತಂತ್ರವಾಗಿ ಉಳಿಯಲಿದೆ. ಸಚಿವರ ಸಲಹೆ ಮೇರೆಗೆ ಉನ್ನತ ಶಿಕ್ಷಣ ಆಯೋಗ ರಚನೆಯಾದ ಬಳಿಕ ಎಐಸಿಟಿಇಗೂ ಕೂಡ ಹೊಸ ರೂಪ ಸಿಗಲಿದೆ.
ಆಯೋಗದ ಜವಾಬ್ದಾರಿಗಳು
- ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಸ್ವಾಯತ್ತತೆಗೆ ಅವಕಾಶ ನೀಡಿ, ಜಾಗತಿಕ ಸ್ಪರ್ಧೆಗೆ ಅನುವಾಗುವಂತೆ ಸಂಶೋಧನೆ ಒತ್ತು ನೀಡುವುದು
- ಕಲಿಕೆ, ಮೌಲ್ಯಮಾಪನ, ಸಂಶೋಧನೆ, ಕೌಶಲ ತರಬೇತಿ ಕುರಿತು ಮಾರ್ಗಸೂಚಿ
- ಶಿಕ್ಷಣ ಸಂಸ್ಥೆಗಳ ವಾರ್ಷಿಕ ಮೌಲ್ಯಮಾಪನ, ಅಕ್ರೆಡೇಷನ್ ವ್ಯವಸ್ಥೆ
- ಸರ್ಕಾರದೊಂದಿಗೆ ರ್ಚಚಿಸಿ ಸಂಶೋಧನೆಗೆ ಅನುದಾನ ದೊರಕಿಸುವುದು
- ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾದ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಹಾಗೂ ನೋಂದಣಿ ರದ್ದು
- ಶಿಕ್ಷಣ ಸಂಸ್ಥೆ ಅಥವಾ ವಿವಿಗಳು ತಮ್ಮದೇ ಶೈಕ್ಷಣಿಕ ಪಠ್ಯಕ್ರಮ ರಚಿಸಿಕೊಳ್ಳಲು ಅವಕಾಶ
- ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ ಕುರಿತು ನಿಯಮ ರಚನೆ
- ಸಿಬ್ಬಂದಿ ನೇಮಕಕ್ಕೆ ಅರ್ಹತೆ ನಿಗದಿ
ಶುಲ್ಕದ ಬಗ್ಗೆ ನಿಗಾ!
- ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಗದಿಗೂ ಕೇಂದ್ರ ಸರ್ಕಾರ ಮುಂದಾಗಿದೆ. ಕರಡು ನಿಯಮದಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಪ್ರಸ್ತಾಪ ಸೇರಿಸಲಾಗಿದೆ. ಶುಲ್ಕ ನಿಗದಿಗೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಯೋಗವು ಶಿಫಾರಸು ಮಾಡಲಿದೆ. ಆಯಾ ಸರ್ಕಾರಗಳು ತಮ್ಮ ಅಧೀನದಲ್ಲಿನ ಶಿಕ್ಷಣ ಸಂಸ್ಥೆಗಳು ಈ ಪ್ರಕಾರ ಶುಲ್ಕ ನಿಗದಿಪಡಿಸುವಂತೆ ಕ್ರಮಕೈಗೊಳ್ಳಬೇಕಿದೆ.
ಸರ್ಕಾರದಿಂದಲೇ ಅನುದಾನ ಹಂಚಿಕೆ
- ಯುಜಿಸಿಯು ನ್ಯಾಕ್ ರ್ಯಾಂಕ್ ಆಧರಿಸಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಹಂಚಿಕೆ ಮಾಡುತ್ತಿತ್ತು. ಆದರೆ ಈ ಪ್ರಕ್ರಿಯೆ ಬಗ್ಗೆ ಸಾಕಷ್ಟು ವಿರೋಧವ್ಯಕ್ತವಾಗಿದ್ದವು. ಹೀಗಾಗಿ ನೂತನ ಆಯೋಗದಿಂದ ಈ ಅಧಿಕಾರ ಕಿತ್ತುಕೊಂಡು, ಕೇಂದ್ರ ಸರ್ಕಾರವೇ ನೇರವಾಗಿ ಅನುದಾನ ಹಂಚಿಕೆ ಮಾಡಲಿದೆ. ವಿವಿ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯೇ ಹಂಚಿಕೆ ಮಾಡಲಿದೆ.
ಯೂನಿವರ್ಸಿಟಿ ಗ್ರಾಂಟ್ ಆಯೋಗದ ಬಗ್ಗೆ
- UGC ಭಾರತದಲ್ಲಿನ ಉನ್ನತ ಶಿಕ್ಷಣವನ್ನು ಪೂರೈಸುವ ಉನ್ನತ ಸಂಸ್ಥೆಗಳಾಗಿವೆ.
ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) 1956 ರಲ್ಲಿ ಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲ್ಪಟ್ಟ ಕಾನೂನುಬದ್ಧ ಸಂಸ್ಥೆಯಾಗಿದ್ದು, ಇದು ವಿಶ್ವವಿದ್ಯಾನಿಲಯದ ಶಿಕ್ಷಣದ ಗುಣಮಟ್ಟ, ಸಮನ್ವಯ, ನಿರ್ಣಯ ಮತ್ತು ನಿರ್ವಹಣೆಗೆ ಕಾರಣವಾಗಿದೆ. - ಅರ್ಹ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಅನುದಾನವನ್ನು ಒದಗಿಸುವುದರ ಹೊರತಾಗಿ, ಉನ್ನತ ಶಿಕ್ಷಣದ ಅಭಿವೃದ್ಧಿಗೆ ಅವಶ್ಯಕ ಕ್ರಮಗಳನ್ನು ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳಿಗೆ ಸಹ ಆಯೋಗ ಸೂಚಿಸುತ್ತದೆ.
- ಇದು ದೆಹಲಿಯಿಂದ ಮತ್ತು ಅದರ ಆರು ಪ್ರಾದೇಶಿಕ ಕಛೇರಿಗಳನ್ನು ಬೆಂಗಳೂರು, ಭೋಪಾಲ್, ಗುವಾಹಟಿ, ಹೈದರಾಬಾದ್, ಕೊಲ್ಕತ್ತಾ ಮತ್ತು ಪುಣೆಯಲ್ಲಿ ನೆಲೆಸಿದೆ.
- ಯುಜಿಸಿ ದೇಶದಲ್ಲಿ ವಿಶ್ವವಿದ್ಯಾನಿಲಯಗಳನ್ನು ಅನುಮೋದಿಸುತ್ತದೆ. ಇದು ಸಂಯೋಜಿತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಹಣವನ್ನು ಒದಗಿಸುತ್ತದೆ. ಯುನಿವರ್ಸಿಟಿ ಗ್ರಾಂಟ್ಸ್ ಆಯೋಗದ ಕಾರ್ಯದ ಕುರಿತು ಮಾತನಾಡುವಾಗ, ಯುಜಿಸಿ ಆಕ್ಟ್ ಹೇಳುತ್ತಾರೆ, ಮೊದಲ ಕಾರ್ಯವು ವಿಶ್ವವಿದ್ಯಾನಿಲಯಗಳ ಆರ್ಥಿಕ ಅಗತ್ಯಗಳನ್ನು ನೋಡಿಕೊಳ್ಳುವುದು. ನಂತರ ಈ ವಿಶ್ವವಿದ್ಯಾನಿಲಯಗಳಿಗೆ ಅನುದಾನವನ್ನು ವಿತರಿಸುತ್ತದೆ ಮತ್ತು ವಿತರಿಸುತ್ತದೆ. ಈ ಕಾರ್ಯಗಳ ನಂತರ ಮಾತ್ರ ಇತರ ಶೈಕ್ಷಣಿಕ ಕಾರ್ಯಗಳು ಬರುತ್ತವೆ.
- ಯು.ಜಿ.ಸಿ., ಜೊತೆಗೆ ಸಿಎಸ್ಐಆರ್ ಪ್ರಸ್ತುತ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಕರ ನೇಮಕಾತಿಗಾಗಿ ನೆಟ್ ಅನ್ನು ನಡೆಸುತ್ತದೆ. ಇದು ಪದವಿಯ ಮಟ್ಟದಲ್ಲಿ ಮತ್ತು ಜುಲೈ 2009 ರಿಂದ ಸ್ನಾತಕೋತ್ತರ ಹಂತದಲ್ಲಿ ಬೋಧಿಸಲು ನೆಟ್ ಅರ್ಹತಾ ಕಡ್ಡಾಯ ಮಾಡಿದೆ. ಆದಾಗ್ಯೂ, ಪಿಎಚ್ಡಿ ಹೊಂದಿರುವವರಿಗೆ ಐದು ಶೇಕಡಾ ವಿಶ್ರಾಂತಿ ನೀಡಲಾಗಿದೆ.
ಯುನಿವರ್ಸಿಟಿ ಗ್ರಾಂಟ್ಸ್ ಆಯೋಗ ಅಥವಾ ಯುಜಿಸಿ ಕಾರ್ಯಗಳು
ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಧಾನ ಕಾರ್ಯಗಳು ಕೆಳಕಂಡಂತಿವೆ:
- ಇದು ವಿವಿಧ ಉನ್ನತ ಶೈಕ್ಷಣಿಕ ಸಂಸ್ಥೆಗಳಿಗೆ ಹಣವನ್ನು ಒದಗಿಸುತ್ತದೆ.
- ಇದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾನದಂಡಗಳ ಸಹಕಾರ, ನಿರ್ಣಯ ಮತ್ತು ನಿರ್ವಹಣೆಯ ಕಾರ್ಯವನ್ನು ನಿರ್ವಹಿಸುತ್ತದೆ.
ಇದರ ಜೊತೆಯಲ್ಲಿ ಯೂನಿವರ್ಸಿಟಿ ಗ್ರಾಂಟ್ಸ್ ಆಯೋಗವು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತದೆ:
- ವಿಶ್ವವಿದ್ಯಾನಿಲಯದ ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ಸಹಕರಿಸುವುದು.
- ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆ, ಪರೀಕ್ಷೆ ಮತ್ತು ಸಂಶೋಧನೆಯ ಮಾನದಂಡಗಳನ್ನು ನಿರ್ಧರಿಸುವುದು ಮತ್ತು ನಿರ್ವಹಿಸುವುದು.
- ಶಿಕ್ಷಣದ ಕನಿಷ್ಠ ಮಾನದಂಡಗಳ ಮೇಲೆ ನಿಯಮಗಳು ರಚಿಸುವುದು.
- ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಶಿಕ್ಷಣ ಕ್ಷೇತ್ರದಲ್ಲಿ ಪರಿವೀಕ್ಷಣಾ ಬೆಳವಣಿಗೆಗಳು;
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಉನ್ನತ ಶಿಕ್ಷಣದ ಸಂಸ್ಥೆಗಳ ನಡುವಿನ ಪ್ರಮುಖ ಸಂಪರ್ಕವಾಗಿ ಸೇವೆಸಲ್ಲಿಸುವುದು.
- ವಿಶ್ವವಿದ್ಯಾಲಯ ಶಿಕ್ಷಣದ ಸುಧಾರಣೆಗೆ ಅಗತ್ಯವಾದ ಕ್ರಮಗಳ ಬಗ್ಗೆ ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವುದು.
ಇಸ್ರೋ ಚಂದ್ರಯಾನ
- ಸುದ್ದಿಯಲ್ಲಿ ಏಕಿದೆ? ಮುಂದಿನ 250 ವರ್ಷದ ಇಂಧನ ಬೇಡಿಕೆ ಪೂರೈಸುವ ಪರಮಾಣು ಶಕ್ತಿ ಶೋಧಕ್ಕಾಗಿ ಇನ್ನೊಂದು ಚಂದ್ರಯಾನ ಕೈಗೊಳ್ಳಲು ಇಸ್ರೋ ಸಜ್ಜಾಗಿದೆ. ಈ ವಿಷಯದಲ್ಲಿ ಇಸ್ರೋ ಇತರ ಬಾಹ್ಯಾಕಾಶ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದಿದೆ.
- ಚಂದ್ರನ ದಕ್ಷಿಣ ಭಾಗದಲ್ಲಿ ಲಭ್ಯವಿದೆ ಎನ್ನಲಾದ ಹೀಲಿಯಂ-3 ಅಣು ಕುರಿತ ಅಧ್ಯಯನಕ್ಕೆ ಅಕ್ಟೋಬರ್ನಲ್ಲಿ ಭಾರತದ ಬಾಹ್ಯಾಕಾಶ ತಜ್ಞರು ಚಂದ್ರಯಾನ ಯೋಜನೆಗೆ ಚಾಲನೆ ನೀಡಲಿದ್ದಾರೆ. ಒಂದೊಮ್ಮೆ ಈ ಅಧ್ಯಯನ ನಿರೀಕ್ಷಿತ ಮಟ್ಟದಲ್ಲಿ ಸಾಗಿದರೆ ಲಕ್ಷಾಂತರ ಕೋಟಿ ರೂ.ಗಳ ಆದಾಯಕ್ಕೆ ಈ ಚಂದ್ರಯಾನ ಕಾರಣವಾಗಲಿದೆ.
- ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಇಸ್ರೋದ ಮೈಲಿಗಲ್ಲಿಗೆ ಈ ಚಂದ್ರಯಾನವು ಹೊಸ ರೂಪ ನೀಡಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದು, ಭಾರತ ಸರ್ಕಾರ -ಠಿ; 830 ಕೋಟಿ ವಿನಿಯೋಗಿಸುತ್ತಿದೆ. ಈವರೆಗೆ ವಿಶ್ವದ ಯಾವುದೇ ಸಂಸ್ಥೆ ಚಂದ್ರನ ದಕ್ಷಿಣ ಭಾಗದಲ್ಲಿ ಕಾಲಿಟ್ಟಿಲ್ಲ. ಆದರೆ ಈ ಹಿಂದಿನ ಚಂದ್ರಯಾನದ ಬಳಿಕ ನಾಸಾ ವಿಜ್ಞಾನಿಗಳು, ದಕ್ಷಿಣ ಭಾಗದಲ್ಲಿ ಹೀಲಿಯಂ-3 ಇರುವ ಸಾಧ್ಯತೆಯಿದೆ ಎಂದಿದ್ದರು.
- ಹೀಲಿಯಂನಿಂದ ರೇಡಿಯೋ ವಿಕಿರಣ ಮತ್ತು ತ್ಯಾಜ್ಯವಿಲ್ಲದ ಇಂಧನ ಸಿಗಲಿದೆ ಎನ್ನುವ ನಿರೀಕ್ಷೆ ವಿಜ್ಞಾನಿಗಳದ್ದು.
ಲಕ್ಷ ಕೋಟಿ ಲೆಕ್ಕಾಚಾರ!
- ಒಂದು ಟನ್ ಹೀಲಿಯಂ-3ಗೆ 500 ಕೋಟಿ ಡಾಲರ್ ಮೌಲ್ಯವಿದೆ. ಅಂದಾಜಿನ ಪ್ರಕಾರ 2.50 ಲಕ್ಷ ಮೆಟ್ರಿಕ್ ಟನ್ ಹೀಲಿಯಂ-3 ಗಣಿಗಾರಿಕೆ ಮಾಡಬಹುದಾಗಿದೆ. ಇದರ ಮೊತ್ತ ಲಕ್ಷ ಕೋಟಿ ಡಾಲರ್ ದಾಟಲಿದೆ.
ಅಂತಾರಾಷ್ಟ್ರೀಯ ಹಕ್ಕು
- ಹಾಲಿ ಕಾನೂನಿನ ಪ್ರಕಾರ ಚಂದ್ರ ಅಥವಾ ಬಾಹ್ಯಾಕಾಶದ ಮೇಲೆ ಯಾವುದೇ ದೇಶಕ್ಕೆ ಹಕ್ಕುಗಳಿಲ್ಲ. ಕಾನೂನು ತಜ್ಞರು ಹೇಳುವಂತೆ ಮೊದಲು ಹೋಗಿ ಈ ಬಗ್ಗೆ ಸಂಶೋಧನೆ ಹಾಗೂ ಅಭಿವೃದ್ಧಿ ಮಾಡುವವರಿಗೆ ಅಧಿಕಾರ ದೊರೆಯಲಿದೆ. ಆದರೆ ಭವಿಷ್ಯದಲ್ಲಿ ಇದೊಂದು ಅಂತಾರಾಷ್ಟ್ರೀಯ ಕಾನೂನು ಸಮರಕ್ಕೂ ಕಾರಣವಾಗಬಹುದು ಎನ್ನಲಾಗಿದೆ.
ಹೀಲಿಯಂ ಯಾನ
- ಸದ್ಯಕ್ಕೆ ಅತಿ ಶಕ್ತಿಶಾಲಿ ಇಂಧನ ಯುರೇನಿಯಂ ಎಂದು ವಿಜ್ಞಾನ ಲೋಕ ಹೇಳುತ್ತಿದೆ. ಥೋರಿಯಂ ಬಳಕೆ ಬಗ್ಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ಕಲಾಂ ಪ್ರಸ್ತಾಪಿಸಿದ್ದರೂ ತಂತ್ರಜ್ಞಾನವಿನ್ನೂ ಅಭಿವೃದ್ಧಿಯಾಗಿಲ್ಲ. ಈ ಹಂತದಲ್ಲಿ ಚಂದ್ರನ ದಕ್ಷಿಣ ಭಾಗದಲ್ಲಿ ಹೀಲಿಯಂ ಎಂಬ ಪರಮಾಣು ಇದೆ ಎಂದು ಹೇಳಲಾಗಿದೆ. ಹೀಗಾಗಿ ಈ ಬಗ್ಗೆ ಸಂಶೋಧನೆಗೆ ಇಸ್ರೋ ಮುಂದಾಗಿದೆ. ಒಂದು ಅಂದಾಜಿನ ಪ್ರಕಾರ 10 ಲಕ್ಷ ಮೆಟ್ರಿಕ್ ಟನ್ ಹೀಲಿಯಂ ಪರಮಾಣು ಚಂದ್ರನಲ್ಲಿದೆ. ಅದರಲ್ಲಿ ಶೇ.25 ಭಾಗ ಮಾತ್ರ ಗಣಿಗಾರಿಕೆ ಮಾಡಲು ಸಾಧ್ಯವಿದೆ.